ಮೈಸೂರು: ಮೈಸೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಕಾಮಗಾರಿಗೆ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳೊಂದಿಗೆ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ವಿಮಾನ ನಿಲ್ದಾಣವನ್ನು ಮೇಲ್ದರ್ಜೇಗೇರಿಸಲು ಮೊದಲ ಹಂತದಲ್ಲಿ 150 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ರನ್‌ವೇ ವಿಸ್ತರಣೆಗೆ 160 ಎಕರೆ ಜಾಗದ ಅಗತ್ಯವಿದೆ. 47 ಎಕರೆ ನೋಟಿಫಿಕೇಷನ್ ಆಗಿ ಭೂಮಿ ಹಸ್ತಾಂತರ ಮಾಡಲಾಗಿದೆ. ಇದರಿಂದ ಕಾಮಗಾರಿ ಆರಂಭಿಸಲು ಶೀಘ್ರದಲ್ಲೇ ಭೂಮಿ ಪೂಜೆ ಮಾಡಲಾಗುವುದು ಎಂದು ವಿವರಿಸಿದರು.
ರನ್‌ವೇ ವಿಸ್ತರಣೆಗಾಗಿ ಮೈಸೂರು-ನಂಜನಗೂಡು ಹೆದ್ದಾರಿ ಮಾರ್ಗ ಬದಲಾವಣೆ ಮಾಡಬೇಕಾಗಿದೆ. ಯಾವ ರೀತಿ ಮಾಡಬೇಕು ಎನ್ನುವುದನ್ನು ಸದ್ಯದಲ್ಲೇ ನಿರ್ಧರಿಸಲಾಗುವುದು. ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಕೆಯಾದ ಬಳಿಕ ಬೆಂಗಳೂರು, ಮಂಗಳೂರು ಸೇರಿದಂತೆ ಇನ್ನಿತರ ನಗರಗಳ ನಡುವೆ ವಿಮಾನ ಹಾರಾಟ ಹೆಚ್ಚಿಸಲಾಗುವುದು ಎಂದರು.