ಮೈಸೂರು ವಿಭಾಗ ಮಟ್ಟದ ನೌಕರರ ಜಾಗೃತಿ ಸಮಾವೇಶ

NAN_9801
Published on

ಮೈಸೂರು: ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರ ಸಮನ್ವಯ ಸಮಿತಿ ಜಿಲ್ಲಾ ಸಮಿತಿಯ ವತಿಯಿಂದ ಮೈಸೂರು ವಿಭಾಗ ಮಟ್ಟದ ನೌಕರರ ಜಾಗೃತಿ ಸಮಾವೇಶವನ್ನು ಮಾ.5ರಂದು ಬೆಳಗ್ಗೆ 9.30ಕ್ಕೆ ನಗರದ ಮಹಾರಾಜ ಕಾಲೇಜಿನ ಶತಮನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.


ಸಮಸ್ಯೆಗಳ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸುವ ಸಂಬಂಧ ನೌಕರರಿಗೆ ಅರಿವು ಮೂಡಿಸುವುದು ಸಮಾವೇಶದ ಉದ್ದೇಶವಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಮಂಗಳೂರಿನ 700ರಿಂದ 800 ಜನ ನೌಕರರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ.ಮಂಗಳಮೂರ್ತಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ನಗರದ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಚಾಮರಾಜನಗರದ ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋಧಿದತ್ತ ಭಂತೇಜಿ ಸಮ್ಮುಖದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸಮಾವೇಶವನ್ನು ಉದ್ಘಾಟಿಸುವರು. ಶಾಸಕರಾದ ಎಂ.ಅಶ್ವಿನ್‌ಕುಮಾರ್, ಬಿ.ಹರ್ಷವರ್ಧನ್, ಅನಿಲ್‌ಚಿಕ್ಕಮಾದು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಸಂಘದ ರಾಜ್ಯ ಸಮಿತಿಯ ಅಧ್ಯಕ್ಷ ಡಿ.ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದರು.


ಸಮಾಜ ಮತ್ತು ಸಮುದಾಯಕ್ಕೆ ಉತ್ತಮ ಸೇವೆ ಸಲ್ಲಿಸಿರುವ 65 ನೌಕರರಿಗೆ ಅಂಬೇಡ್ಕರ್ ಸೇವಾರತ್ನ ಪ್ರಶಸಿ ಪ್ರದಾನ ಮಾಡುತ್ತಿದ್ದು, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.


ಮಧ್ಯಾಹ್ನ 1.30ಕ್ಕೆ ಭಾರತ ಸಂವಿಧಾನ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಸವಾಲುಗಳು ಮತ್ತು ಸಮಸ್ಯೆಗಳು ವಿಷಯ ಕುರಿತು ಡಿಸಿಪಿ ಸಿದ್ದರಾಜು ಉಪನ್ಯಾಸ ನೀಡುವರು. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮೈಸೂರು ವಿಶ್ವವಿದ್ಯಾಲಯದ ರಾಣಿ ಬಹದ್ದೂರ್ ನಿರ್ವಹಣಾ ವಿಜ್ಞಾನ ಸಂಸ್ಥೆಯ ಪ್ರೊ.ಡಿ.ಆನಂದ್, ವೈದ್ಯಾಧಿಕಾರಿ ಡಾ.ಭಾರತಿ, ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯ್‌ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net