ಮೈಸೂರು ವಿ.ವಿ. ವ್ಯಾಪ್ತಿಯ ದೈಹಿಕ ಶಿಕ್ಷಣ ನಿರ್ದೇಶಕ ಎಚ್.ಸಿ.ಮುರಳಿ ಆಯ್ಕೆ

ಮೈಸೂರು ವಿ.ವಿ. ವ್ಯಾಪ್ತಿಯ ದೈಹಿಕ ಶಿಕ್ಷಣ ನಿರ್ದೇಶಕ ಎಚ್.ಸಿ.ಮುರಳಿ ಆಯ್ಕೆ
Published on

ಹಾಸನ: ಮೈಸೂರು ವಿ.ವಿ. ವ್ಯಾಪ್ತಿಯ 2024-25ನೇ ಸಾಲಿಗೆ ಮಲೆನಾಡು ವಲಯ ಅಂತರ ಕಾಲೇಜುಗಳ ಕ್ರೀಡಾಕೂಟದ ಸಂಚಾಲಕರನ್ನಾಗಿ ನಗರದ ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಚ್.ಸಿ.ಮುರಳಿ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯ ಮಲೆನಾಡು ವಲಯ ದೈಹಿಕ ಶಿಕ್ಷಣ ನಿರ್ದೇಶಕರುಗಳ ಸಭೆಯಲ್ಲಿ ಜಿಲ್ಲೆಯ ವಿವಿಧ ಪ್ರಥಮ ದರ್ಜೆ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರುಗಳ ಸಮ್ಮುಖದಲ್ಲಿ ಇವರನ್ನು ನೇಮಕ ಮಾಡಲಾಗಿದ್ದು, ನಂತರ ಮಾತನಾಡಿದ ಅವರು, ಈಗಾಗಲೇ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಸನ ವಿಶ್ವ ವಿದ್ಯಾನಿಲಯ ವ್ಯಾಪ್ತಿಗೆ ಬರುವುದರಿಂದ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮೈಸೂರು ವಿವಿ ವ್ಯಾಪ್ತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಹಾಗಾಗಿ ಈ ಪ್ರಸಕ್ತ ವರ್ಷ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಬೇಕಾದ ಕ್ರೀಡಾಕೂಟಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಯುವಕ ಯುವತಿಯರಿಬ್ಬರ ಕ್ರೀಡಾಕೂಟಗಳು ಎಲ್ಲಿ ಹಾಗೂ ಯಾವ ಕಾಲೇಜುಗಳು ನಡೆಸಲಿವೆ. ಇನ್ನು ಇದಕ್ಕೆ ಬೇಕಾದ ಸಿದ್ದತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು, ಜಿಲ್ಲೆಯ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರುಗಳ ಸಲಹೆಗಳನ್ನು ಪಡೆದು ಮುಂದಿನ ದಿನಗಳಲ್ಲಿ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಟಿ. ಮಹೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಮಲೆನಾಡು ವಲಯಗಳ ಅಂತರ ಕ್ರೀಡಾಕೂಟದ ಅಧ್ಯಕ್ಷ ಹಾಗೂ ಬೆಸ್ಟ್ ಕಾಲೇಜಿನ ಪ್ರಾಂಶುಪಾಲ ಕೆ.ಸಿ. ನವೀನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಮೈಸೂರು ವಿ.ವಿ. ವ್ಯಾಪ್ತಿಯ 2023-24ನೇ ಸಾಲಿಗೆ ಮಲೆನಾಡು ವಲಯ ಅಂತರ ಕಾಲೇಜುಗಳ ಕ್ರೀಡಾಕೂಟದ ಸಂಚಾಲಕರ ಸಿ.ಪ್ರಕಾಶ್ ಕುಮಾರ್, ಜಿಲ್ಲೆಯ ವಿವಿಧ ಪ್ರಥಮ ದರ್ಜೆ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರಾದ ಪವನ್, ಲಕ್ಷ್ಮೀಶ್, ಯೋಗೇಶ್, ಬಾಬು ಪ್ರಸಾದ್, ವೈದ್ಯನಾಥನ್,ಡಾ. ವಿಕ್ರಂ, ಡಾ. ನಿತ್ಯಾನಂದ, ಅತೀತ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net