ಮೈಸೂರು ಲಯನ್ಸ್‌ಗೆ ಪದಾಧಿಕಾರಿಗಳ ಪದಗ್ರಹಣ

14
Published on

ಮೈಸೂರು: ತಮ್ಮ ಬಿಡುವಿನ ವೇಳೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ಲಯನ್ಸ್ ಸದಸ್ಯರು ನೇರ ಹಾಗೂ ಪರೋಕ್ಷವಾಗಿ ಕೈಯಲ್ಲಾದ ಸಹಾಯ ಮಾಡುತ್ತಿದ್ದಾರೆ ಎಂದು ಲಯನ್ಸ್ ಸಂಸ್ಥೆ ಮಾಜಿ ಪ್ರಾಂತಪಾಲ ಡಾ.ಜಿ.ಎ.ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು 2023-24ನೇ ಸಾಲಿನ ಪದಾಧಿಕಾರಿಗಳ 66ನೇ ಪದಗ್ರಹಣ ಸಮಾರಂಭದಲ್ಲಿ ನೂತನ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಲಯನ್ಸ್ ಸಂಸ್ಥೆ ಭಾರತ ಸೇರಿದಂತೆ ಅನೇಕ ದೇಶ, ವಿದೇಶಗಳಲ್ಲಿದೆ. ಸೇವಾ ಮನೋಭಾವ ಹೊಂದಿರುವ ಇರುವ ಜನರು ಒಟ್ಟಿಗೆ ಸೇರಿ ತಮ್ಮ ಕೈಯಲ್ಲಾದಷ್ಟು ಸಮಾಜ ಸೇವೆ ಮಾಡುತ್ತಿದ್ದಾರೆ. ಪ್ರಕೃತಿ ವಿಕೋಪ ಸೇರಿದಂತೆ ಹಲವು ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ ಎಂದು ಹೇಳಿದರು.
ನೂತನ ತಂಡಕ್ಕೆ ಶುಭ ಹಾರೈಸಿದ ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಅಂಗವಿಕಲರು, ದುರ್ಬಲರು, ಸರ್ಕಾರಿ ಶಾಲೆ ಮಕ್ಕಳು ಸೇರಿದಂತೆ ಮತ್ತಿತರರಿಗೆ ನೆರವಾಗುತ್ತಿರುವ ಲಯನ್ಸ್ ಸಂಸ್ಥೆಯ ಸಾಮಾಜಿಕ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.
ಇಂತಹ ಸೇವಾ ಕಾರ್ಯಗಳು ಇತರರಿಗೆ ಪ್ರೇರಣೆ ನೀಡುವಂತಹದ್ದಾಗಿದೆ. ನೀವು ಸಮಾಜಕ್ಕೆ ಮಾಡುತ್ತಿರುವ ಸಹಾಯವನ್ನು ಹೆಚ್ಚಿನ ರೀತಿಯಲ್ಲಿ ತಿಳಿಸುವ ಕೆಲಸವಾಗಬೇಕು. ಆಗ ಮತ್ತಷ್ಟು ಜನರು ಉತ್ತೇಜನಗೊಂಡು ಸೇವಾ ಕಾರ್ಯದಲ್ಲಿ ತೊಡಗುತ್ತಾರೆ. ಇದರಿಂದ ಇನ್ನಷ್ಟು ಜನರಿಗೆ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷೆ ಬಿ.ಭಾರತಿ ಅಧ್ಯಕ್ಷತೆ ವಹಿಸಿದ್ದರು. ಉಪ ರಾಜ್ಯಪಾಲ ಎನ್.ಸುಬ್ರಹ್ಮಣ್ಯ, ನಿಕಟಪೂರ್ವ ಅಧ್ಯಕ್ಷ ಬಿ.ಎಲ್.ಗಿರೀಶ್, ಖಜಾಂಚಿ ಜೆ.ಲೋಕೇಶ್, ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಬಿ.ಶಿವಣ್ಣ, ಮಾಜಿ ಅಧ್ಯಕ್ಷ ಪ್ರಭಾಮಂಡಲ, ಶಿವಕುಮಾರ್, ಪ್ರತಿಮಾ ರಮೇಶ್, ಕ್ಲಬ್‌ನ ನಿರ್ದೇಶಕರಾದ ಎನ್.ಟಿ.ಶ್ರೀನಿವಾಸ್, ಎನ್.ರಾಮು, ಶಿವರಾಜು, ಉಮಾಪತಿ ರಾವ್ ಬಿ., ಎಚ್.ಬಿ.ಸುರೇಶ್, ಎಸ್.ಮುಖೇಶ್, ಎನ್.ಎಸ್.ಗೀತಾ ಮೂರ್ತಿ ಇದ್ದರು.
ವೈದ್ಯರ ದಿನಾಚರಣೆ ಅಂಗವಾಗಿ ಬೆಂಗಳೂರಿನ ನೇತ್ರ ತಜ್ಞೆ ಡಾ.ವಿ.ಪ್ರೀತಿ ಅವರನ್ನು ಸನ್ಮಾನಿಸಲಾಯಿತು. ಪಿಎಸ್‌ಟಿ ಫೋರಂ ಜಿಲ್ಲಾಧ್ಯಕ್ಷ ಎಸ್.ಮತಿದೇವ್‌ಕುಮಾರ್ ಅವರು ಕ್ಲಬ್‌ನ ಕಿರುಹೊತ್ತಗೆ ಬಿಡುಗಡೆ ಮಾಡಿದರು.

ನೂತನ ಪದಾಧಿಕಾರಿಗಳು:
ಬಿ.ಭಾರತಿ (ಅಧ್ಯಕ್ಷೆ), ಬಿ.ಶಿವಣ್ಣ (ಉಪಾಧ್ಯಕ್ಷ), ಬಿ.ಎಲ್.ಗಿರೀಶ್ (ನಿಕಟಪೂರ್ವ ಅಧ್ಯಕ್ಷ, ಎಲ್‌ಸಿಐಎಫ್ ಸಂಯೋಜಕ), ಶಿವಕುಮಾರ್ (ಕಾರ್ಯದರ್ಶಿ), ಜೆ.ಲೋಕೇಶ್ (ಖಜಾಂಚಿ), ಪಿ.ರಮೇಶ್ (ಆಡಳಿತಾಧಿಕಾರಿ), ಸಿ.ಮೋಹನ್‌ಕುಮಾರ್ (ಸದಸ್ಯತ್ವ ಅಧ್ಯಕ್ಷ), ಕೆ.ಎಸ್.ವಿರೂಪಾಕ್ಷ (ಸೇವಾ ಅಧ್ಯಕ್ಷ), ಪಿ.ಎಚ್.ಚಂದ್ರಶೇಖರ್ (ಮಾರುಕಟ್ಟೆ ಹಾಗೂ ಸಂವಹನ ಅಧ್ಯಕ್ಷ), ಪ್ರತಿಮಾ ರಮೇಶ್ (ಜಿಎಸ್‌ಟಿ ಸಂಯೋಜಕ) ಅವರು ಪ್ರಮಾಣ ವಚನ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net