

ಮೈಸೂರು: ನಗರಕ್ಕೆ ದೇಶ, ವಿದೇಶದಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಾಗಿ ನಗರದ ಹೃದಯ ಭಾಗದಲ್ಲಿರುವ ರಾಜಮಾರ್ಗದಲ್ಲಿ ಬೀದಿಬದಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಾರದು. ಕೂಡಲೇ ರಾಜಮಾರ್ಗದಲ್ಲಿರುವ ಬೀದಿಬದಿ ವ್ಯಾಪಾರಿ ಗಳನ್ನು ತೆರವುಗೊ ಳಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ನಿರ್ದೇಶನ ನೀಡಿದರು.
ಜಾಗ ಸಿಕ್ಕ ಕಡೆಗಳಲ್ಲಿ ಫುಟ್‌ಪಾತ್ ಅಂಗಡಿ ತೆರೆಯಲು ಅವಕಾಶ ನೀಡಬಾರದು. ಫುಟ್‌ಪಾತ್ ವ್ಯಾಪಾರಕ್ಕೆ ನಿರ್ದಿಷ್ಟವಾದ ಜಾಗ ನಿಗದಿ ಪಡಿಸಬೇಕು. ಸಾಧ್ಯವಾದರೆ ಒಂದೊಂದು ರಸ್ತೆಯಲ್ಲಿ ನಿರ್ದಿಷ್ಟವಾದ ಒಂದು ಬಗೆಯ ವ್ಯಾಪಾರಕ್ಕೆ ಮಾತ್ರ ಅವಕಾಶ ಮಾಡಿಕೊಡುವುದು ಉತ್ತಮ. ಅರಮನೆ ಮುಂಭಾಗದಲ್ಲಿ ಫುಟ್‌ಪಾತ್ ವ್ಯಾಪಾರಕ್ಕೆ ಕಡಿವಾಣ ಹಾಕಲಾಗಿದ್ದು, ಅಲ್ಲಿನ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲು ಜಾಗ ಗುರುತಿಸುವಂತೆ ನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೀದಿಬದಿ ವ್ಯಾಪಾರಿಗಳು ಕಡ್ಡಾಯವಾಗಿ ಕಸದ ಡಬ್ಬವನ್ನು ಇಟ್ಟುಕೊಂಡು ಸ್ವಚ್ಛತೆ ಹೆಚ್ಚಿನ ಆದ್ಯತೆ ನೀಡಬೇಕು. ನಗರದ ಸ್ವಚ್ಛತೆಗೆ ನಿಮ್ಮ ಸಹಕಾರ ಅಗತ್ಯ. ಈ ಕುರಿತು ನಗರ ಪಾಲಿಕೆ ಬೀದಿಬದಿ ವ್ಯಾಪಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಸೂಚಿಸಿದರು.