ಮೈಸೂರು ಮೃಗಾಲಯದಲ್ಲಿ ಒರಾಂಗೂಟಾನ್ ಸಾವು

mysore
Published on

ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿರುವ 10 ವರ್ಷ 8 ತಿಂಗಳ ವಯಸ್ಸಿನ ‘ಮಿನ್ನಿ’ ಎಂಬ ಹೆಣ್ಣು ಒರಾಂಗೂಟಾನ್ ಮೃತಪಟ್ಟಿದೆ.

ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಮಲೇಷಿಯಾ ಮೃಗಾಲಯದಿಂದ ಆಮದು ಮಾಡಿಕೊಂಡ ನಂತರ 4 ವರ್ಷಗಳ ಅವಧಿಯವರೆಗೆ ಮೈಸೂರು ಮೃಗಾಲಯದಲ್ಲಿ ಇತ್ತು.

ಶ್ವಾಸಕೋಶ ರೋಗದ ಹಿನ್ನೆಲೆಯಲ್ಲಿ ಮಿನ್ನಿ ಆಗಾಗ್ಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು.

ಮೈಸೂರು ಮೃಗಾಲಯದ ತಜ್ಞ ಪಶುವೈದ್ಯರಿಂದ ಗುರುವಾರ ಬೆಳಗ್ಗೆ 10ಕ್ಕೆ ಮೈಸೂರು ಮೃಗಾಲಯದ ಪರೀಕ್ಷಾ ಕೊಠಡಿಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ವ್ಯಾಪಕವಾಗಿ ಹರಡಿದ ನ್ಯುಮೋನಿಯಾ ರೋಗಕ್ಕೆ ತುತ್ತಾಗಿ ಮಿನ್ನಿ ಮೃತಪಟ್ಟಿರುವುದಾಗಿ ಪಶುವೈದ್ಯರು ದೃಢಪಡಿಸಿದ್ದಾರೆ.

ಯುನೈಟೆಡ್ ಕಿಂಗ್‌ಡಮ್ ಮತ್ತು ಮಲೇಷಿಯಾ ದೇಶಗಳ ಪಶುವೈದ್ಯ ತಜ್ಞರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಮೈಸೂರು ಮೃಗಾಲಯದ ಪಶುವೈದ್ಯರ ತಂಡ ನಿರಂತರ ಪ್ರಯತ್ನಗಳ ನಡುವೆಯೂ ಮಿನ್ನಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮೃಗಾಲಯ ಆರೋಗ್ಯ ಸುಧಾರಣೆಗೆ ಸಾಧ್ಯವಿರುವ ಎಲ್ಲ ಚಿಕಿತ್ಸಾ ಶಿಷ್ಟಾಚಾರಗಳನ್ನು ಅನುಸರಿಸಿರುವುದು ಅಲ್ಲದೆ ಮಿನ್ನಿಯ ಚೇತರಿಕೆಗೆ ತೀವ್ರ ನಿಗಾ ವಹಿಸಿತ್ತು.

ಮಿನ್ನಿ ಅನಾರೋಗ್ಯದ ಮೂಲ ಕಾರಣಗಳನ್ನು ಅರಿಯುವ ಉದ್ದೇಶದಿಂದ ಹೆಚ್ಚಿನ ತನಿಖೆಗಾಗಿ ಅದರ ಜೈವಿಕ ಮಾದರಿಗಳನ್ನು ಸುಧಾರಿತ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ದೃಢೀಕೃತ ರೋಗ ನಿರ್ಣಯದ ವರದಿ ನಿರೀಕ್ಷೆ ಮಾಡಲಾಗುತ್ತಿದೆ.

ಸದರಿ ದೃಢೀಕೃತ ರೋಗ ನಿರ್ಣಯ ಪರೀಕ್ಷಾ ವರದಿಗಳು ಅಥವ ಸಂಶೋಧನೆಗಳು ಒರಾಂಗೂಟಾನ್ ಪ್ರಾಣಿಗಳಿಗೆ ಸಂಭವಿಸಬಹುದಾದ ಉಸಿರಾಟ ಕಾಯಿಲೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಸಹಾಯಕವಾಗಲಿದೆ ಹಾಗೂ ಭವಿಷ್ಯದಲ್ಲಿ ವನ್ಯಜೀವಿಗಳ ಆರೋಗ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net