ಮೈಸೂರು ಮಾರಮ್ಮ ಜಾತ್ರೋತ್ಸವದಲ್ಲಿ ಬಾಯಿಬೀಗ ಸೇವೆ

12 HANUR 1
ಹನೂರಿನಲ್ಲಿ ಮಹಿಷಾಸುರ ಮರ್ದಿನಿ ಜಾತ್ರೋತ್ಸವದ ಅಂಗವಾಗಿ ಭಕ್ತರ ದೊಡ್ಡ ಬಾಯಿಬೀಗ ಸೇವೆಯು ವಿಜೃಂಭಣೆಯಿಂದ ಜರುಗಿತು.
Published on

ಹನೂರು: ಪಟ್ಟಣದ ಶ್ರೀ ಮಹಿಷಾಸುರ ಮರ್ದಿನಿ (ಮೈಸೂರು ಮಾರಮ್ಮ) ಜಾತ್ರೋತ್ಸವದ ಅಂಗವಾಗಿ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾಯಿಬೀಗ ಸೇವೆ ಜರುಗಿತು.

ಜಾತ್ರೋತ್ಸವದಲ್ಲಿ ಬಾಯಿಬೀಗ ಸೇವೆಯು ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹರಕೆ ಹೊತ್ತ ಭಕ್ತರು ಬುಧವಾರ ಉಪವಾಸ ಕೈಗೊಂಡು ಬೆಳಗ್ಗೆ ಮಹಿಷಾಸುರ ಮರ್ದಿನಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ 2.40ರಲ್ಲಿ ಪಟ್ಟಣದ ತಟ್ಟೆಹಳ್ಳ ಸಮೀಪವಿರುವ ಗಾಣಿಗರ ಬೀದಿಯ ಅರಳಿಕಟ್ಟೆಯ ಬಳಿ ಅರ್ಚಕರು ಕಬ್ಬಿಣದ ಸಲಾಕೆಗಳಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದ ಭಕ್ತರಿಗೆ ಅರಿಶಿನ ಮಿಶ್ರಿತ ನೀರನ್ನು ಮೈಮೇಲೆ ಸುರಿದು ಸುಮಾರು 20 ಅಡಿ ಉದ್ದದ ಸರಳಿನಿಂದ ಬಾಯಿಬೀಗವನ್ನು ಹಾಕಲಾಯಿತು.

ಬಾಯಿಬೀಗ ಹಾಕುವ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಕುತೂಹದಿಂದ ವೀಕ್ಷಿಸಿದರು. ಬಳಿಕ ಬಾಯಿಬೀಗವನ್ನು ಹಾಕಿಸಿಕೊಂಡ ಭಕ್ತರು ಅರಳಿಕಟ್ಟೆಯಿಂದ ಮೆರವಣಿಗೆಯ ಮೂಲಕ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ಬೆಟ್ಟಳ್ಳಿ ಮಾರಮ್ಮನ ದೇಗುಲ, ಬಂಡಳ್ಳಿ ರಸ್ತೆ, ಬಸ್ ನಿಲ್ದಾಣ, ಹಳೆ ಎಂಡಿಸಿಸಿ ಬ್ಯಾಂಕ್ ರಸ್ತೆಯಲ್ಲಿ ಸಾಗಿ ಮೈಸೂರು ಮಾರಮ್ಮ ದೇವಸ್ಥಾನ ತಲುಪಿದರು. ಪೂಜೆ ಸಲ್ಲಿಸಿ ಬಾಯಿಬೀಗ ಕಳಚಲಾಯಿತು.

ಹರಕೆ ಹೊತ್ತ ಭಕ್ತರು ದೊಡ್ಡ ಬಾಯಿಬೀಗ ಹಾಕಿಸಿಕೊಂಡರಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಣ್ಣ ಬಾಯಿಬೀಗ ಹಾಕಿಸಿಕೊಂಡರು. ಬಳಿಕ ವಾದ್ಯದೊಂದಿಗೆ ಮೆರವಣಿಗೆಯ ಮೂಲಕ ಮಹಿಷಾಸುರ ಮರ್ದಿನಿ ದೇವಾಲಯಕ್ಕೆ ಆಗಮಿಸಿ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು.
ಬಾಯಿಬೀಗ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಗುಲಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ, ಧೂಪ ಹಾಕಿ ಹಣ್ಣುಕಾಯಿ ನೀಡಿ ಪೂಜೆ ಸಲ್ಲಿಸಿದರು. ದೇಗುಲದ ವತಿಯಿಂದ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net