

ಮೈಸೂರು: ಮೈಸೂರು ಮಹಾರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರಕ್ಕೆ ನಂಜನಗೂಡು ತಾಲೂಕಿನ ಕಲ್ಮಹಳ್ಳಿಯಲ್ಲಿ ಮಂಗಳವಾರ ಚಾಲನೆ ದೊರೆಯಿತು.
ಮೈಸೂರು ವಿಶ್ವ ವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಎಂ.ಬಿ. ಸುರೇಶ್ ಮಾತನಾಡಿ, ಸ್ವಾತಂತ್ರೃದ ಅಮೃತ ಮಹೋತ್ಸವದ ಅಂಗವಾಗಿ ಮೈಸೂರು ವಿಶ್ವ ವಿದ್ಯಾಲಯವು 48 ಗ್ರಾಮಗಳನ್ನು ದತ್ತು ತೆಗೆದುಕೊಂಡಿದೆ. ಆ ಗ್ರಾಮಗಳಲ್ಲಿ ನ.10 ರಿಂದ ಮೊದಲ ಹಂತದಲ್ಲಿ ಎನ್‌ಎಸ್‌ಎಸ್ ಶಿಬಿರಗಳನ್ನು ನಡೆಸಲಾಗಿದೆ. ಎರಡನೇ ಹಂತದ ಶಿಬಿರಗಳು ಈಗ ನಡೆಯುತ್ತಿದ್ದು, ಡಿ.31 ರಂದು ಮುಕ್ತಾಯವಾಗಲಿವೆ. ವಿವಿ ವ್ಯಾಪ್ತಿಯ 152 ಕಾಲೇಜುಗಳಲ್ಲಿ 192 ಎನ್‌ಎಸ್‌ಎಸ್ ಘಟಕಗಳಿದ್ದು, 19,200 ಸ್ವಯಂ ಸೇವಕರು ಇದ್ದಾರೆ ಎಂದರು.
ಎನ್‌ಎಸ್‌ಎಸ್ ಎಂದರೆ ಈ ಹಿಂದೆ ಶ್ರಮದಾನ ಎಂಬಂತೆ ಆಗಿತ್ತು. ಈಗ ಸಂಪೂರ್ಣ ಬದಲಾಗಿದ್ದು, ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿವಿಯೇ ಎಂಬ ಬಗ್ಗೆ ಸಮೀಕ್ಷೆ ನಡೆಸುವ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಎನ್‌ಎಸ್‌ಎಸ್‌ನಿಂದ ಆರ್ಥಿಕ ಲಾಭ ಇಲ್ಲದಿದ್ದರೂ ಸ್ವಯಂ ಸೇವಕರಿಗೆ ವೈಯಕ್ತಿಕ ಹಾಗೂ ಶೈಕ್ಷಣಿಕವಾಗಿ ಲಾಭವಾಗಲಿದೆ ಎಂದರು.
ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಎ. ಶ್ರೀಧರ ಮಾತನಾಡಿ, ದೇಶದ ತಾಯಿ ಬೇರು ಹಳ್ಳಿಗಳು. ಮರ ಬಿಗಿಯಾಗಿರಬೇ ಕಾದರೆ ಬೇರುಗಳು ಭದ್ರವಾಗಿರಬೇಕು. ದೇಶದ ಸರ್ವಾಂಗೀಣ ಅಭಿವೃದ್ಧಿ ಆಗಬೇಕಾದರೆ ಹಳ್ಳಿಗಳಿಗೆ ಸಮರ್ಪಕ ಸೌಲಭ್ಯಗಳು ದೊರೆಯಬೇಕು ಎಂದು ಹೇಳಿದರು.
ಶಿಬಿರವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಪಿಡುಗುಗಳಾದ ಜಾತಿ ಪದ್ಧತಿ, ಬಾಲ್ಯ ವಿವಾಹ, ಮೂಢ ನಂಬಿಕೆ, ವರದಕ್ಷಿಣೆ ಮತ್ತಿತರ ಅನಿಷ್ಠಗಳ ಬಗ್ಗೆ ಅರಿವು ಮೂಡಿಸಬೇಕು. ಗಾಂಧೀಜಿಯವರ ಆದರ್ಶ ಗ್ರಾಮ ಪರಿಕಲ್ಪನೆ, ಸ್ವಚ್ಛ ಭಾರತ, ರಾಷ್ಟ್ರೀಯ ಭಾವೈಕ್ಯತೆ, ಮಹಿಳಾ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡಬೇಕು ಎಂದು ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಸುತ್ತೂರು ಗ್ರಾಮ ಪಂಚಾಯಿತಿ ಪಿಡಿಒ ಮಲ್ಕುಂಡಿ ಮಹದೇವಸ್ವಾಮಿ, ಬಿಳಿಗೆರೆ ಗ್ರಾಮ ಪಂಚಾಯಿತಿ ಪಿಡಿಒ ಗಣೇಶ್, ವರುಣ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕೆ.ಎಸ್. ವಿಜಯಕುಮಾರ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಎಸ್. ಕೃಷ್ಣಪ್ಪ, ಡಾ.ಮಧುಸೂದನ್, ಡಾ.ನಿಂಗರಾಜು, ಬಿಳಿಗೆರೆ ಗ್ರಾ.ಪಂ. ಅಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷೆ ಮಂಜುಳಾ ಕೂಸಪ್ಪ ಹಾಗೂ ಇತರರು ಇದ್ದರು.