ಮೈಸೂರು ಮಂಜುನಾಥ್- ಪ್ರವೀಣ್ ಗೋಡ್ಖಿಂಡಿ ಜುಗಲ್‌ಬಂದಿಗೆ ಮನಸೋತ ಪ್ರೇಕ್ಷಕರು

1
Published on

ಮೈಸೂರು: ಬಿಸಿಲಿನ ಝಳಕ್ಕೆ ಬಸವಳಿದಿದ್ದ  ಸಂಗೀತ ಪ್ರಿಯರು ಸಂಜೆ ಹೊತ್ತಿನಲ್ಲಿ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದ ಒಳಗೆ ರಸಲೋಕದಲ್ಲಿ ಸಂಗೀತದ ಸೋನೆ ಮಳೆಯಲ್ಲಿ ಮಿಂದರು.
ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಿಂದ ನೃಪತುಂಗ ಕನ್ನಡ ಮಾಧ್ಯಮ ಶಾಲೆ ಸಹಾಯಾರ್ಥ ಭಾನುವಾರ ಸಂಜೆ ಆಯೋಜಿಸಿದ್ದ ಸಂಗೀತದ ಜುಗಲ್‌ಬಂದಿ ಕಾರ್ಯಕ್ರಮ ರಸಿಕರನ್ನು ರಾಗರಂಗಿನಲ್ಲಿ ಮಿಂದೇಳುವಂತೆ ಮಾಡಿತು. ಲಯಲಾಸ್ಯದ ಲೋಕಕ್ಕೆ ಕೊಂಡೊಯ್ದಿತು.
ಇಬ್ಬರು ಸಂಗೀತ ದಿಗ್ಗಜರಾದ ಮೈಸೂರಿನ ವಿದ್ವಾನ್ ಎಂ.ಮಂಜುನಾಥ್ ಮತ್ತು  ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರು ಪಿಟೀಲು ಮತ್ತು ಬಾನ್ಸುರಿ ವಾದನದಲ್ಲಿ ಹೆಣೆದ ಸ್ವರಸುರ ಚಾಪಕ್ಕೆ ಮನಸೋತು ಶ್ರೋತೃಗಳು ತಲೆದೂಗಿದರು.
ಉಭಯ ಕಲಾವಿದರು ವಿವಿಧ ರಾಗದಲ್ಲಿ ಸಂಗೀತ ಪ್ರಸ್ತುತಪಡಿಸಿದ್ದು ಸಭಾಂಗಣದಲ್ಲಿ ಮೋಹಕ ವಾತಾವರಣ ಸೃಷ್ಟಿಸಿತು. ಪ್ರತಿ ಹಾಡಿಗೂ ಶ್ರೋತೃಗಳು ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಿದರು.
ಗೋಡ್ಖಿಂಡಿ ಅವರು ಸಂಗೀತದ ಮೋಡಿ ಮಾಡಿದ್ದರೆ, ಡಾ.ಮಂಜುನಾಥ್ ಅವರು ಸೂಕ್ಷ್ಮ ಸಂಗತಿಗಳನ್ನು ನುಡಿಸಿ ರಾಗ ಮೇಳೈಸುವಂತೆ ಮಾಡಿದರು. ಇಬ್ಬರೂ ಕಲಾವಿದರು ಜತೆಗೂಡಿದಾಗ ಸಭಾಂಗಣ ರಸ ರೋಮಾಂಚನಕ್ಕೆ ಸಾಕ್ಷಿಯಾಯಿತು. ಮುಖ್ಯ ಕಲಾವಿದರ ಸವಾಲ್ ಜವಾಬ್‌ಗೆ ಸಹ ಕಲಾವಿದರ ಸಂಗೀತ ಸಾಥ್ ಚಪ್ಪಾಳೆಯ ಸುರಿಮಳೆಗರೆಯಲು ಕಾರಣವಾಯಿತು.
ಆತ್ಮತೃಪ್ತಿ ನೀಡಲಿದೆ ಸಂಗೀತ:
ಪಂ.ಪ್ರವೀಣ್ ಗೋಡ್ಖಿಂಡಿ ಮಾತನಾಡಿ, ಸಂಗೀತ ಯಾವತ್ತೂ ಆತ್ಮಕ್ಕೆ ಸಂತೃಪ್ತಿ ನೀಡುತ್ತದೆ. ಇದು ನನಗೆ ಸಂಗೀತ ಚಿಂತನೆಗೆ ಸದಾ ಜಾಗೃತಗೊಳಿಸುತ್ತದೆ. ಡಾ.ಮೈಸೂರು ಮಂಜುನಾಥ್ ಅವರೊಂದಿಗೆ ಜುಗಲ್ ಬಂದಿ ಕಾರ್ಯಕ್ರಮ ನಡೆಸಿಕೊಡುವುದು ನನಗೆ ಬಲು ಇಷ್ಟ ಎಂದರು.
ಕರೊನಾದಿಂದ ಎಲ್ಲ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿವೆ. ಅದರಲ್ಲೂ ಸಂಗೀತ ಕಲಾವಿದರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಸಂಗೀತ ಕಾರ್ಯಕ್ರಮ ನಡೆಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಂಗೀತ ಪ್ರಸ್ತುತಿಗೆ ಅವಕಾಶ ಸಿಕ್ಕಿರುವುದು ಸಂತೋಷ ತಂದುಕೊಟ್ಟಿದೆ. ಇದೇ ರೀತಿ ಇನ್ನಷ್ಟು ಸಂಗೀತ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದರು.
ಡಾ.ಮೈಸೂರು ಮಂಜುನಾಥ್ ಮಾತನಾಡಿ, ಪ್ರವೀಣ್ ಗೋಡ್ಖಿಂಡಿ ಮತ್ತು ನಾನು ಅಂದಾಜು 40 ಸಂಗೀತ ಕಾರ್ಯಕ್ರಮಗಳನ್ನು ಜತೆಯಾಗಿ ಪ್ರಸ್ತುತ ಪಡಿಸಿದ್ದೇವೆ. ಈ ಕಾರ್ಯಕ್ರಮ ವಿಶೇಷ. ನೃಪತುಂಗ ಕನ್ನಡ ಶಾಲೆಗೆ ಆರ್ಥಿಕ ನೆರವು ನೀಡುವ ಸಲುವಾಗಿ ಇಲ್ಲಿ ನಾವು ಸೇರಿದ್ದೇವೆ. ಇದೇ ರೀತಿ ಕನ್ನಡದ ಕೆಲಸಕ್ಕಾಗಿ ಪ್ರತಿಯೊಬ್ಬ ಕನ್ನಡಿಗರು ನೆರವು, ಸಹಕಾರ ನೀಡಬೇಕು ಎಂದರು.
ಸಂಗೀತ ವಿದ್ವಾನ್ ಪಂ. ಇಂದೂಧರ್ ನಿರೋಡಿ ಮಾತನಾಡಿ, ಈಗ ಎಲ್ಲೆಡೆ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಇದರಿಂದ ಕನ್ನಡ ಶಾಲೆಗಳು ಬಡವಾಗಿದೆ. ಆದರೆ, ಮಾತೃಭಾಷೆಯಲ್ಲೇ ಕಲಿತರೆ ಮಾತ್ರ ಶಿಕ್ಷಣ ಸುಲಲಿತವಾಗಿದೆ. ನಾನು ಕನ್ನಡ, ಇಂಗ್ಲಿಷ್ ಮಾಧ್ಯಮದಲ್ಲೆರಡಲ್ಲೂ ಓದಿದ್ದೇನೆ. ಆದರೆ, ಕನ್ನಡ ಮಾಧ್ಯಮದಲ್ಲಿನ ಕಲಿಕೆ ನನ್ನ ಜ್ಞಾನಾರ್ಜನೆಯ ಹರಿವನ್ನು ಹೆಚ್ಚಿಸಿದೆ ಎಂದರು.
ನೃಪತುಂಗ ಸಂಸ್ಥೆ ಅಧ್ಯಕ್ಷ ಪ.ಮಲ್ಲೇಶ್ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ಕನ್ನಡ ಮಾಧ್ಯಮದಲ್ಲಿ ಪಿಯು ವಿಜ್ಞಾನ ಕಾಲೇಜನ್ನು ಎರಡು ವರ್ಷದ ಹಿಂದೆ ಆರಂಭಿಸಿದ್ದೆವು. ಆದರೆ ಸಮಸ್ಯೆಗಳಿಂದ ಅದನ್ನು ನಡೆಸಿಕೊಂಡು ಹೋಗುವುದು ಕಷ್ಟಕರವಾಗುತ್ತಿದೆ. ಹೀಗಾಗಿ, ಆರ್ಥಿಕ ನೆರವಿಗಾಗಿ ಸಂಗೀತ ಕಾರ್ಯಕ್ರಮದ ಮೊರೆ ಹೋಗಿದ್ದು, ಇದರಿಂದ ಕೆಲ ತಾಪತ್ರಯಗಳಿಗೆ ಪರಿಹಾರ ದೊರೆಯುವ ನಿರೀಕ್ಷೆ ಇದೆ ಎಂದರು.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಆರ್.ಶಿವಪ್ಪ, ಸಂಸ್ಥೆಯ ಪದಾಧಿಕಾರಿಗಳಾದ ಸ.ರ.ಸುದರ್ಶನ್, ನಾಗಚಂದ್ರ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net