ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಕಳಪೆಗೆ ಪ್ರತಾಪ್ ಸಿಂಹ, ಸುಮಲತಾ ಕಾರಣ: ಡಾ.ಕೆ.ಅನ್ನದಾನಿ ಆರೋಪ

news-5-1-10-lane-Mysuru-Bengaluru-Highway
Published on

ಮೈಸೂರು: ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಕಳಪೆಯಾಗಿದ್ದು, ಇದಕ್ಕೆ ಸಂಸದರಾದ ಪ್ರತಾಪ್ ಸಿಂಹ ಮತ್ತು ಸುಮಲತಾ ಅಂಬರೀಷ್ ಕಾರಣ ಎಂದು ಮಳವಳ್ಳಿ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.


ಚಾಮುಂಡಿಬೆಟ್ಟದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ನಡುವೆ ಈಗ ಮಾಡುತ್ತಿರುವ ಹೆದ್ದಾರಿ ಸಂಪೂರ್ಣ ಕಳಪೆಯಾಗಿದೆ. ಮೊದಲು ಇದ್ದ ರಸ್ತೆಯೇ ಬಹಳ ಉತ್ತಮವಾಗಿತ್ತು. ಕಳಪೆ ಕಾಮಗಾರಿಗೆ ಮೈಸೂರು ಸಂಸದ ಪ್ರತಾಪ ಸಿಂಹ, ಮಂಡ್ಯ ಸಂಸದೆ ಸುಮಲತಾ ಕಾರಣ. ಕಳಪೆ ಕಾಮಗಾರಿ ಏಕೆ ಆಗಿದೆ ಎಂಬುದಕ್ಕೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.


ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಆಣೆ ಪ್ರಮಾಣಕ್ಕೆ ಪಂಥಾಹ್ವಾನ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಿನಿಮಾರಂಗದ ಹಣ ಬಿಟ್ಟು, ಬೇರೆ ಯಾವ ಹಣವನ್ನೂ ಮುಟ್ಟಿಲ್ಲವೆಂದು ಮೊದಲು ಸುಮಲತಾ ಪ್ರಮಾಣ ಮಾಡಲಿ. ಆಮೇಲೆ ನಮ್ಮದು ನೋಡೋಣ. ಅವರು ಕರೆದ ಕೂಡಲೇ ನಾವು ಏಕೆ ಹೋಗಬೇಕು? ಅವರ ಪಂಥಾಹ್ವಾನಕ್ಕೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ಸಂಸದರು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.


ಕಮಿಷನ್ ಪಡೆಯುವವರಿಗೆ ಮಾತ್ರ ಕಮಿಷನ್ ವಿಚಾರ ಗೊತ್ತಿರುತ್ತದೆ. ನನಗೆ ಕಮಿಷನ್ ವಿಚಾರ ಗೊತ್ತಿಲ್ಲ. ಆ ಬಗ್ಗೆ ಮಾತನಾಡಿದವರನ್ನೇ ಕೇಳಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net