ಮೈಸೂರು-ಬೆಂಗಳೂರು ಹೆದ್ದಾರಿ ಉದ್ಘಾಟನೆ ದಿನವೇ ಪ್ರತಿಭಟನೆ, ಕಪ್ಪುಬಾವುಟ ಪ್ರದರ್ಶನ

a042e933-200a-456e-92a7-70fdaad15798
Published on

ಮೈಸೂರು: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ವಿಧಿಸುವ ಟೋಲ್ ದರ ಕಡಿಮೆ ಮಾಡಬೇಕು, ಸರ್ವೀಸ್ ರಸ್ತೆ ನಿರ್ಮಿಸಿದ ಬಳಿಕ ಟೋಲ್ ಸಂಗ್ರಹಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.


ಈ ಬೇಡಿಕೆ ಈಡೇರಿಸದಿದ್ದರೆ ಮಾ.11ರ ದಶಪಥ ಹೆದ್ದಾರಿ ಉದ್ಘಾಟನೆ ದಿನದಂದು ಮೌನ ಪ್ರತಿಭಟನೆ, ಕಪ್ಪುಬಾವುಟ ಪ್ರದರ್ಶನ ಮಾಡುವುದಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.


ಟೋಲ್ ಸಂಗ್ರಹ ಆದೇಶವನ್ನು ರಾತ್ರೋರಾತ್ರಿ ಹಿಂಪಡೆಯಲಾಗಿದೆ. ಮಾ.14ರಿಂದ ವಸೂಲಿ ಮಾಡಲಾಗುತ್ತದೆ. ಈಗ ನಿಗದಿ ಪಡಿಸಿರುವ ದರವೂ ಜನರನ್ನು ಸುಲಿಗೆ ಮಾಡುವುದಾಗಿದೆ ಎಂದು ಟೀಕಿಸಿದರು.
ಭೂಮಿ ಮಟ್ಟದ ರಸ್ತೆಗೆ 1 ಕಿಮೀ.ಗೆ 2.50 ರೂ., ಎಲಿವೇಟರ್ ರಸ್ತೆಗೆ 3.50 ರೂ. ನಿಗದಿಪಡಿಸಿದೆ. ಈ ಪ್ರಕಾರ ಬೆಂಗಳೂರು-ನಿಡಘಟ್ಟದವರೆಗೆ 55 ಕಿ.ಮೀ.ಗೆ 135 ರೂ.ಪಾವತಿಸಬೇಕು. ಮೈಸೂರು-ಬೆಂಗಳೂರು 118 ಕಿ.ಮೀ. ಏಕಮುಖ ಸಂಚಾರಕ್ಕೆ 300 ರೂ. ಪಾವತಿಸಬೇಕಾಗುತ್ತದೆ. ಇದು ದುಬಾರಿಯಾಗಿದೆ ಎಂದು ಕಿಡಿಕಾರಿದರು.


ಜುಲೈ ನಂತರ ಟೋಲ್ ದರ ಮತ್ತಷ್ಟು ಹೆಚ್ಚಿಸಲಾಗುತ್ತದೆ. ಏಕಮುಖ ಸಂಚಾರಕ್ಕೆ 465 ರೂ. ಸೇರಿದಂತೆ ಒಟ್ಟು 930 ರೂ. ಪಾವತಿಸಬೇಕಾಗುತ್ತದೆ. ದೇಶದ ಇತರ ಎಕ್ಸ್‌ಪ್ರೆಸ್‌ಗಳಿಗಿಂತ ಹೆಚ್ಚಿನ ದರ ನಿಗದಿಪಡಿಸಿರುವುದೇಕೆ ಎಂದು ಪ್ರಶ್ನಿಸಿದರು.


ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ರಾಮನಗರ ಬಳಿ ನಿರ್ಗಮನದ ಪಾಯಿಂಟ್ ಇಲ್ಲ, ಅಂಡರ್ ಪಾಸ್ ಇಲ್ಲ. ಗ್ರಾಮದ ಎದುರಿನ ಜಮೀನಿಗೆ 10 ಕಿ.ಮೀ. ಬಳಸಿಕೊಂಡು ಹೋಗಬೇಕಾಗಿದೆ. ಈ ಸಮಸ್ಯೆ ಬಗೆಹರಿಸಬೇಕು. 10 ಲಕ್ಷ ರೂಪಾಯಿಯ ಕಾರು ಖರೀದಿಸಿದರೆ 2.5 ಲಕ್ಷ ರೂ. ಜೀವಿತಾವಧಿ ವಿಮೆ ಕಟ್ಟಿಸಿಕೊಳ್ಳಲಾಗುತ್ತದೆ. ಮತ್ತೆ ಟೋಲ್ ಸಂಗ್ರಹಿಸುವುದು ಏಕೆ ಎಂದು ಪ್ರಶ್ನಿಸಿದರು.


ಪ್ರತಾಪ್ ಸಿಂಹ ವಿರುದ್ಧ ಕಿಡಿ:
ಬಿಜೆಪಿ ಕಾರ್ಯಕರ್ತರು ಮೈಮರೆತರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್ ಅವರು, ಆರ್‌ಎಸ್‌ಎಸ್ ಮತ್ತು ತಾಲಿಬಾನಿಗಳು ಸಾಮ್ಯತೆ ಇರುವ 10 ಅಂಶಗಳನ್ನು ಪಟ್ಟಿ ಮಾಡಿದರು. ವಸ್ತ್ರ, ವಿಚಾರ, ರಕ್ತಪಾತ, ಕೋಮುಗಲಭೆ ಬಯಸುತ್ತಾರೆ. ವ್ಯವಸ್ಥೆ ಬುಡಮೇಲು ಮಾಡುವುದರ ಜತೆಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಪ್ರಶ್ನೆ ಮಾಡಿದರೆ ದೇಶದ್ರೋಹಿಯಾಗಬೇಕು. ರಾಷ್ಟ್ರಧ್ವಜದ ಮೇಲೆ ನಂಬಿಕೆ ಇಲ್ಲ. ತಮ್ಮ ಧರ್ಮದವರ ಮೇಲೆ ಮಾತ್ರ ಪ್ರೀತಿಯಿರುತ್ತದೆ. ಹೀಗಾಗಿ, ತಾಲಿಬಾನ್ ರಾಜಕಾರಣ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.


2024ರ ಮೇ ತಿಂಗಳಿಗೆ ಪ್ರತಾಪ ಸಿಂಹ ಮಾಜಿ ಸಂಸದರಾಗುತ್ತಾರೆ, ಮತ್ತೆ ಗೆಲ್ಲಲಾರರು. ಅವರ ಪಕ್ಷದವರೇ ಅವರನ್ನು ಸೋಲಿಸುತ್ತಾರೆ ಎಂದು ಲೇವಡಿ ಮಾಡಿದರು.


ರಾಜ್ಯದಲ್ಲಿ 2014ರಿಂದ ಈವರೆಗೆ 22,650 ರೌಡಿಗಳನ್ನು ರೌಡಿಪಟ್ಟಿಯಿಂದ ಕೈ ಬಿಡಲಾಗಿದೆ. 1036 ಕೊಲೆಗಳು, 423 ಅತ್ಯಾಚಾರಗಳಾಗಿವೆ. ಯಾವುದು ತಾಲಿಬಾನ್ ಸರ್ಕಾರ? 600 ಭರವಸೆಗಳ ಪೈಕಿ ಎಷ್ಟನ್ನು ಈಡೇರಿಸಿದ್ದೀರಿ ಎಂದು ಪ್ರಶ್ನಿಸಿದರು.


ಶಿವಮೊಗ್ಗ ಭದ್ರಾವತಿ ಕಾರ್ಖಾನೆಗೆ ಶಾಶ್ವತವಾಗಿ ಬೀಗ ಹಾಕಿ ಜಿಂದಾಲ್ ಕಂಪನಿ ಮಾರಾಟದ ಹುನ್ನಾರ ಮಾಡಲಾಗಿದೆ. ಶಿವಮೊಗ್ಗದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಐಟಿ ಸಂಶೋಧನೆ ಕೇಂದ್ರ ಆರಂಭಿಸುವುದಾಗಿ ಅಮಿತ್ ಷಾ ಘೋಷಿಸಿದ್ದರು. ಈ ಯೋಜನೆ ಏಕೆ ಅನುಷ್ಠಾನಗೊಳಿಸಿಲ್ಲ? ಬೆಳಗಾವಿ ಗಡಿ ವಿವಾದದ ಬಗ್ಗೆ ಮೌನವಾಗಿರುವುದನ್ನು ಜನತೆಗೆ ತಿಳಿಸುವಂತೆ ಆಗ್ರಹಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಆದರೆ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿದವರಿಂದ ನಾವು ಪಾಠ ಕಲಿಯಬೇಕಿಲ್ಲ. ಪ್ರಧಾನಮಂತ್ರಿಗಳು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಹೇಳಿಲ್ಲವೆಂದರೆ ಅದರ ಅರ್ಥವೇನು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net