ಮೈಸೂರು-ಬೆಂಗಳೂರು ಟೋಲ್ 800 ರೂ. : ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಕ್ಷೇಪ

M-Lakshmana
Published on

ಮೈಸೂರು: ಬೆಂಗಳೂರು-ಮೈಸೂರು ಏಕ್ಸ್‌ಪ್ರೆಸ್ ಹೈವೇನಲ್ಲಿ ಟೋಲ್ ಸಂಗ್ರಹ ಸದ್ಯದಲ್ಲಿಯೇ ಪ್ರಾರಂಭವಾಗಲಿದ್ದು, 800 ರೂ. ಟೋಲ್ ಸಂಗ್ರಹಿಸುವ ಮಾಹಿತಿ ಲಭ್ಯವಾಗಿದ್ದು, ಇಷ್ಟೊಂದು ದುಬಾರಿ ಟೋಲ್ ಸಂಗ್ರಹಿಸುವ ಅವಶ್ಯಕತೆ ಏನಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಪ್ರಶ್ನಿಸಿದರು.

ಈ ಹೆದ್ದಾರಿಯಲ್ಲಿ ಹೋಗಲು 400 ರೂ., ಬರಲು 400 ರೂ. ಟೋಲ್ ಕಟ್ಟಬೇಕು. ನಿಮಗೆ ತಾಕತ್ತು ಇದ್ದರೆ ಟೋಲ್ ಫ್ರೀ ಮಾಡಿ. ಈ ರಸ್ತೆ ನಿರ್ಮಾಣದ ಕ್ರೆಡಿಟ್ ಪಡೆಯಲು ಬಿಜೆಪಿಯವರು ಮೋದಿ ಮೋದಿ ಅನ್ನುತ್ತಿದ್ದಾರೆ. ಜನರ ಜೇಬು ಸುಡಲು ಪ್ರಾರಂಭವಾದ ನಂತರ ಬಿಜೆಪಿಯವರ ನಿಜವಾದ ಬಂಡವಾಳ ಬಯಲಿಗೆ ಬರಲಿದೆ ಎಂದರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉದ್ಯಮಿ ಅದಾನಿ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹಾಯದಿಂದಲೇ ಅದಾನಿ ಸಂಪತ್ತು ಹೆಚ್ಚಳವಾಗಿದೆ. ಎಲ್ಐಸಿಯಲ್ಲಿ ಅದಾನಿ ಗ್ರೂಪ್ ಹೂಡಿಕೆ ಮಾಡಲು ಅವಕಾಶ ನೀಡುವಂತೆ ಮೋದಿ ಪತ್ರ ನೀಡಿದ್ದಾರೆ. ಅದಾನಿ ನಡೆಸಿರುವ ಅಕ್ರಮ ಬಯಲಿಗೆ ಬಂದ ನಂತರ ಅದಾನಿ ಕಂಪನಿಗಳ ಷೇರುಗಳು ಕುಸಿತ ಕಂಡಿವೆ. ಈ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರ ಏತಕ್ಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದು, ಅವರಿಗೆ ನಾನು ನ್ಯಾಯಾಲಯದಲ್ಲಿ ಉತ್ತರ ನೀಡುತ್ತೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಇಳಿಸಲು ನಿಮ್ಮ ಪಾತ್ರ ಅಪಾರವಾದದ್ದು. ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಆದರೂ ಇಬ್ಬರು ಟವಲ್ ಹಾಕಿ ಕಾಯುತ್ತಿದ್ದಾರೆ. ಒಬ್ಬರು ಬಿ.ಎಲ್. ಸಂತೋಷ್, ಮತ್ತೊಬ್ಬರು ಪ್ರಹ್ಲಾದ್ ಜೋಶಿ. ಈ ಬಗ್ಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net