

ಮೈಸೂರು: ಎಲ್ಲ ಕಡೆಯಿಂದಲೂ ಸುಲಭ ಸಂಪರ್ಕ ಸಾಧಿಸಲು ಅವಕಾಶ ಇರುವ ಮೈಸೂರಿನಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮುಕ್ತ ಅವಕಾಶವಿದೆ ಮತ್ತು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಂಸದ ಪ್ರತಾಪಸಿಂಹ ಅಭಿಪ್ರಾಯಪಟ್ಟರು.
ಸ್ಕಾಲ್ ಇಂಟರ್ ನ್ಯಾಷನಲ್ ಇಂಡಿಯಾ, ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸೋದ್ಯಮವನ್ನು ಉತ್ತೇಜಿಸಲು ಅಕ್ಟೋಬರ್‌ನಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿರುವ ‘ಸ್ಕಾಲ್ ಇಂಡಿಯಾ ಕಾಂಗ್ರೆಸ್’ನ ಅಂಗವಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ಟನ್ ರೇಸರ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜರ ಕಾಲದಿಂದಲೂ ಮೈಸೂರು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುತ್ತ ಬರುತ್ತಿದ್ದು, ಇದು ಇನ್ನಷ್ಟು ಅಭಿವೃದ್ಧಿಯಾಗಬೇಕು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಆಕರ್ಷಿಸಬಲ್ಲ ಹಾಗೂ ಅನುಕೂಲವಿರುವ ಪ್ರವಾಸಿ ತಾಣಗಳಿವೆ. ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಎರಡು ಅಂತಾರಾಷ್ಟ್ರೀಯ ವನ್ಯಜೀವಿ ಧಾಮ, ಜಲಾಶಯ, ಬೃಂದಾವನ ಸೇರಿದಂತೆ ಹಲವು ಪ್ರಸಿದ್ಧ ಪ್ರವಾಸಿ ತಾಣಗಳು ಪ್ರಮುಖವಾಗಿವೆ ಎಂದರು.
ಶಿಕ್ಷಣಕ್ಕೂ ಹೇಳಿ ಮಾಡಿಸಿದಂತಹ ನಗರವಾದ ಮೈಸೂರಿನಲ್ಲಿ ಯೋಗ, ಆರೋಗ್ಯಕ್ಕೂ ಪೂರಕ ವಾತಾವರಣವಿದೆ. ಹಾಗಾಗಿ ಆರೋಗ್ಯ ಪ್ರವಾಸೋದ್ಯಮಕ್ಕೂ ಒತ್ತು ನೀಡಬೇಕು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೈಸೂರಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು.
ಮೈಸೂರು-ಬೆಂಗಳೂರು ನಡುವೆ ಜೋಡಿ ರೈಲ್ವೆ ಮಾರ್ಗ, ದಶಪಥ ರಸ್ತೆಯಿಂದ ಸಂಪರ್ಕ ಇನ್ನಷ್ಟು ಸುಗಮವಾಗಿದೆ. ಅಲ್ಲದೆ, ಮೈಸೂರು ವಿಮಾನ ನಿಲ್ದಾಣದ ರನ್ ವೇ ಮೇಲ್ದರ್ಜೆಗೆ ಏರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಅನೇಕ ನಗರಗಳಿಂದ ಮೈಸೂರನ್ನು ನೇರವಾಗಿ ಸಂಪರ್ಕಿಸಲು ಅವಕಾಶ ಸಿಗಲಿದೆ ಎಂದರು.
ಮೈಸೂರಿನಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಇದ್ದರೂ, ಪ್ರವಾಸಿಗರು ನಗರದಲ್ಲಿ ತಂಗುತ್ತಿಲ್ಲ. ಪ್ರವಾಸಿಗರು ಒಂದೆರಡು ದಿನಗಳ ಕಾಲ ಉಳಿಯುವಂತೆ ಮಾಡಿದರೆ ವ್ಯಾಪಾರ ವಹಿವಾಟು ಹೆಚ್ಚಾಗುತ್ತದೆ. ರಾತ್ರಿಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪ್ರವಾಸಿಗರಿಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನು ನೀಡಲು ಪ್ರವಾಸೋದ್ಯಮಿಗಳು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಕೆ.ಎಂ. ಸವಿತಾ ಮಾತನಾಡಿ, ಸ್ಕಾಲ್ ಇಂಡಿಯಾ ಕಾಂಗ್ರೆಸ್‌ನ ಪರಿಕಲ್ಪನೆ, ಯೋಜನೆ ಕೇಳಿದರೆ ಸಂತಸವಾಗುತ್ತದೆ. ಪ್ರವಾಸೋದ್ಯಮಕ್ಕೆ ಪೂರಕವಾಗುವಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು. ಇದಕ್ಕೆ ನಮ್ಮ ಇಲಾಖೆಯ ಸಹಕಾರ ಇದೆ ಎಂದು ತಿಳಿಸಿದರು.
ಸ್ಕಾಲ್ ಇಂಡಿಯಾ ಕಾಂಗ್ರೆಸ್‌ನ ಚೇರ್‌ಮನ್ ಸುದೀಪ್ತಾ ದೇಬ್ ಮಾತನಾಡಿ, ಕರ್ನಾಟಕದ ಅತಿ ದೊಡ್ಡ ನಗರಗಳಾದ ಬೆಂಗಳೂರು ಹಾಗೂ ಮೈಸೂರಿನಲ್ಲಿ ಅಕ್ಟೋಬರ್ 4 ರಿಂದ 8ರವರೆಗೆ ಸ್ಕಾಲ್ ಇಂಡಿಯಾ ಕಾಂಗ್ರೆಸ್ ನಡೆಯಲಿದೆ. ಸ್ಕಾಲ್‌ನ ಇತಿಹಾಸದಲ್ಲೇ ಇದೊಂದು ವಿನೂತನ ಪ್ರಯತ್ನ. ಎರಡೂ ನಗರಗಳನ್ನು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯನ್ನಾಗಿ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಇದರ ಭಾಗವಾಗಿ ಚರ್ಚೆಗಳು, ಎಕ್ಸಿಬಿಷನ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸ್ಕಾಲ್ ಇಂಟರ್ ನ್ಯಾಷನಲ್ ಇಂಡಿಯಾ ಅಧ್ಯಕ್ಷ ಕಾರ್ಲ್ ವಾಝ್, ಸ್ಕಾಲ್ ಬೆಂಗಳೂರು ವಿಭಾಗದ ಅಧ್ಯಕ್ಷ ಅಯ್ಯಪ್ಪ ಸೋಮಯ್ಯ, ಸ್ಕಾಲ್ ಮೈಸೂರು ವಿಭಾಗದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಉಪಾಧ್ಯಕ್ಷ ಸಿ.ಎ.ಜಯಕುಮಾರ್, ಪುಣೆ ವಿಭಾಗದ ಅಭಿಜಿತ್ ಚರ್ತುವೇದಿ, ಜೈಪುರದ ರೀನಾ ಚರ್ತುವೇದಿ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಸ್ಕಾಲ್ ಇಂಡಿಯಾ ಕಾಂಗ್ರೆಸ್‌ನ ಲೋಗೋ, ವೆಬ್‌ಸೈಟ್ ಬಿಡುಗಡೆ ಮಾಡಲಾಯಿತು.