ಮೈಸೂರು: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ‘ಮೈಸೂರು ಪೊಲೀಸರು ಬೆಸ್ಟ್’ ಎಂದು ಕರೆ ಮಾಡಿದ ಹಲವರು ಫೋನ್‌ಇನ್ ಕಾರ್ಯಕ್ರಮದಲ್ಲಿ ಪೊಲೀಸ್ ಕಮೀಷನರ್ ರಮೇಶ್ ಬಾನೋತ್ ಅವರನ್ನು ಅಭಿನಂದಿಸಿದರು.
ಬೆಂಗಳೂರಿನಿಂದ ಕರೆ ಮಾಡಿದ ಶಿಬು ಅವರು, ಕೆಲ ದಿನಗಳ ಹಿಂದೆ ಕುಟುಂಬ ಸಹಿತ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದೆ. ಹೋಟೆಲ್‌ವೊಂದರಲ್ಲಿ ಊಟ ಮಾಡುವಾಗ ನನ್ನ ಮಗಳ ಮೊಬೈಲ್ ಕಳವಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಬೆಂಗಳೂರಿಗೆ ವಾಸಪ್ ಆಗಿದ್ದೆ. ಮೂರು ದಿನಗಳ ಬಳಿಕ ಕರೆ ಮಾಡಿದ ಪೊಲೀಸರು, ನಿಮ್ಮ ಮೊಬೈಲ್ ಸಿಕ್ಕಿದ್ದು, ತೆಗೆದುಕೊಂಡು ಹೋಗುವಂತೆ ತಿಳಿಸಿದರು. ಠಾಣೆಗೆ ಹೋಗಿ ಮೊಬೈಲ್ ಪಡೆದು ಕೃತಜ್ಞತೆ ಸಲ್ಲಿಸಿದಾಗ, ಇದು ನಮ್ಮ ಡ್ಯೂಟಿ ಎಂದು ಹೇಳುವ ಮೂಲಕ ಮೈಸೂರು ಪೊಲೀಸರು ಉದಾರತೆ ಸಲ್ಲಿಸಿದರು. ಇದಕ್ಕಾಗಿ ಇಲ್ಲಿನ ಪೊಲೀಸರನ್ನು ಅಭಿನಂದಿಸುತ್ತೇನೆ ಎಂದರು.
ಚಂದ್ರನಾಯಕ ಅವರು ಕರೆ ಮಾಡಿ ಆನ್‌ಲೈನ್‌ನಲ್ಲಿ ತಮ್ಮ ಹಣ ಹೋಗಿದ್ದು, ಕೇವಲ ಅರ್ಧ ಗಂಟೆಯಲ್ಲಿಯೇ 1.4 ಲಕ್ಷ ರೂ. ವಾಪಸ್ ಕೊಡಿಸಿದರು. ಇದು ಮರೆಯಲಾಗದ ಕ್ಷಣ. ಮೈಸೂರು ಪೊಲೀಸರು ಮಾದರಿ ಎಂದು ಅಭಿನಂದನೆ ಸಲ್ಲಿಸಿದರು.
ಕರೆ ಮಾಡಿದವರಿಗೆ ಕೃತಜ್ಞತೆ ಹೇಳಿದ ರಮೇಶ್ ಬಾನೋತ್, ಪೊಲೀಸರ ಕೆಲಸಕ್ಕೆ ಅಭಿನಂದನೆ ಸಲ್ಲಿಸುವವರು ಕಡಿಮೆ. ಜನರ ಪ್ರೀತಿ ತುಂಬಿದ ಮಾತುಗಳು ನಮಗೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೋತ್ಸಾಹಿಸುತ್ತವೆ. ಆನ್‌ಲೈನ್ ವಂಚನೆ ತಡೆಯುವಲ್ಲಿ ಮೈಸೂರು ಪೊಲೀಸರು ಮುಂಚೂಣಿಯಲ್ಲಿದ್ದು, ಸುಮಾರು 1.50 ಕೋಟಿ ರೂ.ಗಳಷ್ಟು ಹಣವನ್ನು ವಾಪಸ್ ಕೊಡಿಸಿದ್ದಾರೆ. ಉತ್ತಮ ಕೆಲಸ ಮಾಡಲು ಜನರ ಸಹಕಾರ, ಪ್ರೋತ್ಸಾಹದ ಮಾತುಗಳು ಬೇಕು ಎಂದು ಹೇಳಿದರು.