ಮೈಸೂರು: ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳಿಂದ ಆಟೋ ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೆಂಪಿಸಿದ್ದನಹುಂಡಿ ಗ್ರಾಮದ ಉಮೇಶ್ (23) ಹಾಗೂ ಮಂಚಳ್ಳಿಹುಂಡಿಯ ಶಿವಾನಂದ(21) ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ನಾಲ್ವರ ಪತ್ತೆಕಾರ್ಯ ನಡೆದಿದೆ.
ಆಟೋ ಬಾಡಿಗೆ ಪಡೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಲಕನಿಗೆ ಹಲ್ಲೆ ನಡೆಸಿ ಕದ್ದೊಯ್ತುತ್ತಿದ್ದ ಆರು ಜನರ ತಂಡ ಆಟೋ, ಹಣ, ಇನ್ನಿತರ ವಸ್ತುಗಳನ್ನು ದೋಚುತ್ತಿದ್ದರು. ಸಿಕ್ಕ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು 5 ಸುಲಿಗೆ, 2 ದೇವಸ್ಥಾನದಲ್ಲಿ ಕಳವು ಹಾಗೂ ಮೂರು ಬೈಕ್ ಅಪರಿಸಿದ್ದರು.
ಬಿಳಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು, ವರುಣ ಠಾಣೆಯ 2, ನಂಜನಗೂಡು ಗ್ರಾಮಾಂತರ ಠಾಣೆಯ 3 ಪ್ರಕರಣ, ಜಯಪುರ ಠಾಣೆಯ ಒಂದು ಪ್ರಕರಣ, ಹುಲ್ಲಹಳ್ಳಿ ಠಾಣೆಯ ಒಂದು ಹಾಗೂ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯ 2 ಪ್ರಕರಣಗಳನ್ನು ಭೇದಿಸಿದಂತಾಗಿದೆ.
ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶೇಖರ್, ಪಿಎಸ್‌ಐಗಳಾದ ಚಂದ್ರ, ಬಸಪ್ಪ ಕೊರವಿ, ಸಿಬ್ಬಂದಿ ಮಹೇಶ್, ಪ್ರಸನ್ನ ಕುಮಾರ್, ಸುನಿಲ್ ಕುಮಾರ್, ಪವನ್ ಕುಮಾರ್, ವಿಶ್ವನಾಥ್, ಗೀತಾ, ಸಂಜಯ್, ಕೃಷ್ಣಮೂರ್ತಿ ಇತರರು ಭಾಗವಹಿಸಿದ್ದರು.