ಮೈಸೂರು ಪಾಲಿಕೆಯಲ್ಲಿ ಆರ್ಥಿಕ ಶಿಸ್ತೇ ಇಲ್ಲ: ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ಅಸಮಾಧಾನ

mysore
Published on

ಮೈಸೂರು: ಕಳೆದ ಎರಡು ಮೂರು ವರ್ಷದಿಂದ ಅನುದಾನವಿಲ್ಲದೆ ಕಾಮಗಾರಿ ಕೈಗೊಂಡು ಮೈಸೂರು ಮಹಾನಗರ ಪಾಲಿಕೆಯನ್ನು 450 ಕೋಟಿ ರೂ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದ್ದವರು ಯಾರು? ಇದಕ್ಕೆ ಅವಕಾಶ ಕೊಟ್ಟವರು ಯಾರು? ಇಷ್ಟು ಹಣ ಹೇಗೆ ಹೊಂದಿಸುತ್ತಿರಿ?

ಪಾಲಿಕೆ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ಕೇಳಿದ ಖಡಕ್ ಪ್ರಶ್ನೆಗಳು ಇವು.

ನಗರ ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಇಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅನುದಾನವಿಲ್ಲದೆ ಕಾಮಗಾರಿ ಕೈಗೊಳ್ಳಲಾಗಿದೆ. 2023ರಲ್ಲಿ 40 ಕೋಟಿ ಬಿಲ್ ಬಾಕಿ ಇತ್ತು. ಒಂದು ವರ್ಷ ಎರಡು ತಿಂಗಳಲ್ಲಿ ಬಾಕಿ ಮೊತ್ತ 450 ಕೋಟಿ ರೂ.ಗೆ ಹೆಚ್ಚಳವಾಗಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಸರ್ಕಾರದ ಗಮನಕ್ಕೆ ತಂದಿದ್ದೀರಾ? ದುಡ್ಡು ಕೊಡುವವರು ಯಾರು? ಎಲ್ಲ ಮೂಲಗಳಿಂದ ಹಣ ಸಂಗ್ರಹಿಸಿದರೂ 300 ಕೋಟಿ ರೂ. ಕೊರತೆ ಬರುತ್ತದೆ.ಈ ಹಣ ನೀಡುವವರು ಯಾರು? ಎಂದು ಕಿಡಿಕಾರಿದರು.

ಇದೀಗ ನಮ್ಮ ತಲೆ ಮೇಲೆ ನೂರಾರು ಕೋಟಿ ರೂ. ಹೊರೆ ಹಾಕಿದ್ದೀರಿ? ರಾಜ್ಯದ ಯಾವುದೇ ಪಾಲಿಕೆಯಲ್ಲಿ 15ರಿಂದ 20 ಕೋಟಿ ರೂ. ಮಾತ್ರ ಬಾಕಿ ಇದೆ. ಇದೇನು ಮೈಸೂರು ಪಾಲಿಕೆಯಲ್ಲಿ ಇಷ್ಟೊಂದು ಅಧ್ವಾನವಾಗಿದೆ. ಹೀಗಾದರೆ ಹೇಗೆ ? ಎಂದು ಪ್ರಶ್ನಿಸಿದರು.

ಹಣಕಾಸಿನ ಕೊರತೆಯಿಂದಾಗಿ ಕಾಮಗಾರಿ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಕೆ.ಹರೀಶ್‌ಗೌಡ, ಕಾಮಗಾರಿ ನಿಲ್ಲಿಸಿದರೆ ಜನರಿಗೆ ಉತ್ತರ ಕೊಡುವವರು ಯಾರು? ಎಂದು ಪ್ರಶ್ನಿಸಿದರು.

ಇದಕ್ಕೆ ಮತ್ತೊಬ್ಬ ಶಾಸಕ ಟಿ.ಎಸ್.ಶ್ರೀವತ್ಸ ಸಹ ಧ್ವನಿಗೂಡಿಸಿದರು. ಆಗ ಮಧ್ಯ ಪ್ರವೇಶಿಸಿದ ಸಚಿವರು. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 150 ಕೋಟಿ ರೂ., ಕುಕ್ಕರಹಳ್ಳಿ, ದಳವಾಯಿ ಕೆರೆ ಅಭಿವೃದ್ಧಿಗೆ 40 ಕೋಟಿ ರೂ. ನೀಡಲಾಗಿದೆ. ಎಸ್‌ಟಿಪಿ, ಯುಜಿಡಿ ಕಾಮಗಾರಿಗಳು ಸೇರಿದಂತೆ ವಿವಿಧ ಕೆಲಸಗಳಿಗೆ ಅಂದಾಜು 1300 ಕೋಟಿ ರೂ. ನೀಡಲಾಗುತ್ತದೆ. ಹೆಚ್ಚುವರಿ ಬಾಕಿ 300 ಕೋಟಿ ರೂ.ಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು. ಆದರೆ ಹಳೇ ಕಾಮಗಾರಿ ಪೂರ್ಣಗೊಳಿಸದೆ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಬಾರದು ಎಂದು ತಾಕೀತು ಮಾಡಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕಾಮಗಾರಿ ಆರಂಭಿಸಿ ಅನುದಾನ ಇಲ್ಲವೆಂದು ನಿಲ್ಲಿಸಲಾಗಿದೆ. ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸಬಾರದು. ಮುಂಬರುವ ದಿನಗಳಲ್ಲಿ ಮುಡಾ 50:50 ಅನುಪಾತದಲ್ಲಿ ಜಮೀನು ಕೊಟ್ಟವರಿಗೆ ಅದೇ ಜಾಗದಲ್ಲಿ ನಿವೇಶನ ಕೊಡುವಂತೆ ತೀರ್ಮಾನ ಮಾಡಬೇಕು ಎಂದರು.

ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ನೀರಿನ ಕಂದಾಯ 1.5ರಿಂದ 2 ಲಕ್ಷ ರೂ. ಬಾಕಿ ಇದೆ. ಮನೆ ಮಾರಿದರೂ ಕಂದಾಯ ಪಾವತಿಸಲು ಕಷ್ಟವಾಗುತ್ತದೆ. ಅಸಲಿಗಿಂತ ಬಡ್ಡಿಯೇ ಅಧಿಕವಾಗಿದೆ. ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಕೋರಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಶಾಸಕನಾಗಿ ಒಂದು ಬೀದಿ ದೀಪ ಹಾಕಿಸಲು ಸಾಧ್ಯವಾಗುತ್ತಿಲ್ಲ. ಖಾಸಗಿ ಕಂಪನಿಗೆ ಒಪ್ಪಂದ ಮಾಡಿಕೊಂಡಿದ್ದು ಸಮಸ್ಯೆ ಕೇಳುವವರು ಇಲ್ಲವರಾಗಿದ್ದಾರೆ ಎಂದು ಹೇಳಿದರು. ಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಡಿ.ಎಸ್.ರಮೇಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಇನ್ನಿತರರಿದ್ದರು.

ಬಾಕಿ ಬಿಲ್ ಪಾವತಿಗೆ 4 ವರ್ಷ ಬೇಕು

ಬಾಕಿ ಇರುವ ಎಲ್ಲ ಹಳೇ ಬಿಲ್‌ಗಳ ಪಾವತಿಗೆ ಕನಿಷ್ಠ 4 ವರ್ಷ ಬೇಕಾಗುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ತಿಳಿಸಿದರು.

2017ರಿಂದ ವಿವಿಧ ಕಾಮಗಾರಿಗಳ ಬಿಲ್ ಬಾಕಿ ಉಳಿದಿದೆ. 2022, 2023, 2024ರಲ್ಲಿ ಅವಧಿಯ ಬಿಲ್‌ಗಳ ಬಾಕಿ ಹೆಚ್ಚಿದೆ. ವಿವಿಧ ಮೂಲಗಳಿಂದ ಪಾಲಿಕೆ ವರ್ಷಕ್ಕೆ ಒಂದು ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಇದರಲ್ಲಿ ಅಗತ್ಯ ವೆಚ್ಚ, ವೇತನಕ್ಕೆ ಬಹುತೇಕ ಹಣ ಖರ್ಚಾಗುತ್ತದೆ. ಕೇವಲ 70-80 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಖರ್ಚು ಮಾಡುವಷ್ಟು ಹಣ ದೊರೆಯುತ್ತಿದೆ. ಹೀಗಾಗಿ, ಬಿಲ್ ಬಾಕಿ ಪಾವತಿ ಕಷ್ಟಕರವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಹಿಂದೆ ಪಾಲಿಕೆ ಆಯುಕ್ತರಾಗಿದ್ದ, ಈಗ ಜಿಲ್ಲಾಧಿಕಾರಿಯಾಗಿರುವ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವಧಿಯಲ್ಲೂ ಅನುದಾನ ಲಭ್ಯತೆವಿಲ್ಲದ್ದರೂ 60 ಕೋಟಿ ರೂ. ಕಾಮಗಾರಿ ಕೈಗೊಳ್ಳಲಾಗಿದೆ ಎಂದಾಗ ಸಚಿವರು ಕಕ್ಕಾಬಿಕ್ಕಿಯಾದರು. ಈ ಸಂದರ್ಭದಲ್ಲಿ ಡಿಸಿ ಅಲ್ಲೇ ಇದ್ದರು.

ತೆರಿಗೆ ಕಟ್ಟದಿದ್ದರೆ ಮನೆಗೆ ಬೀಗ ಹಾಕಿ

ಆಸ್ತಿ ತೆರಿಗೆ ಪಾವತಿಸದಿದ್ದರೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಂತೆ ಮನೆ ಬೀಗ ಹಾಕುವ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನೀರಿನ ತೆರಿಗೆ ಪಾವತಿಸದ್ದರೂ ನೀರಿನ ಸಂಪರ್ಕ ಕಡಿತ ಮಾಡಿ ಎಂದು ಸಚಿವ ಬಿ.ಎಸ್.ಸುರೇಶ್ ತಾಕೀತು ಮಾಡಿದರು.

ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಶೇ. 81, ಕುಡಿಯುವ ನೀರು ತೆರಿಗೆಯಿಂದ ಶೇ. 60 ಸಂಗ್ರಹವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸರಿಯಾಗಿ ಏಕೆ ತೆರಿಗೆ ಸಂಗ್ರಹಿಸುತ್ತಿಲ್ಲ. ಹೀಗಾದರೆ ಆಡಳಿತ ನಡೆಸುವುದಾದರೂ ಹೇಗೆ? ಯಾವ ಶಾಸಕರು ತೆರಿಗೆ ಸಂಗ್ರಹ ಮಾಡಬೇಡಿ ಎಂದು ಹೇಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ಬಿ-ಖಾತಾ ಅಭಿಯಾನ ಆರಂಭಿಸಿ

ಅನಧಿಕೃತ ಮತ್ತು ಕಂದಾಯ ಬಡಾವಣೆಗಳಲ್ಲಿ ಮನೆ ನಿರ್ಮಾಣಕ್ಕೆ ಬಿ-ಖಾತಾ ವಿತರಣೆಗೆ ಚಾಲನೆ ಕೊಡಬೇಕು. ಅದಕ್ಕಾಗಿ ಅಭಿಯಾನವನ್ನೇ ಕೈಗೊಳ್ಳಬೇಕು. ಇದರಿಂದ ಪಾಲಿಕೆಗೆ ಮೊದಲ ವರ್ಷ 100 ಕೋಟಿ ರೂ., ಬಳಿಕ ಪ್ರತಿ ವರ್ಷ 50 ಕೋಟಿ ರೂ.ಆದಾಯ ಬರುತ್ತದೆ. ಖಾತೆ ಕೊಡದಿದ್ದರೆ ಯಾರು ತೆರಿಗೆಯನ್ನೇ ಪಾವತಿಸುವುದಿಲ್ಲ ಎಂದು ಸಚಿವರು ಹೇಳಿದರು.

ಬಿ ಖಾತೆಗೆ ಸೇಲ್ ಡೀಡ್ ಕೊಡಬೇಕೆಂಬ ನಿಯಮಕ್ಕೆ ಶಾಸಕರ ಅಪಸ್ವರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನೂ ಕಾನೂನಿನ ಪ್ರಕಾರ ಮಾಡಲಾಗಲ್ಲ. ದಾಖಲೆ ಇದ್ದವರಿಗೆ ಮೊದಲು ಖಾತೆ ಕೊಡಿ, ತದನಂತರ ವಿದ್ಯುತ್, ನೀರಿನ ಬಿಲ್ ಇದ್ದವರಿಗೆ ಬಿ ಖಾತೆ ಕೊಡುವಂತೆ ಸೂಚಿಸಿದರು. ಮೈಸೂರು ನಗರದಲ್ಲಿ 28 ಸಾವಿರ ಅನಧಿಕೃತ ನಿವೇಶನಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net