ಮೈಸೂರು ಪಾಲಿಕೆ ನೂತನ ಆಯುಕ್ತರಾಗಿ ಅಸಾದ್ ಉರ್ ರೆಹಮಾನ್ ಶರೀಫ್ ಅಧಿಕಾರ ಸ್ವೀಕಾರ

23
Published on

ಮೈಸೂರು : ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ನೂತನ ಆಯುಕ್ತರಾಗಿ ಅಸಾದ್ ಉರ್ ರೆಹಮಾನ್ ಶರೀಫ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ


ರಾಜ್ಯ ಸರ್ಕಾರ ಗುರುವಾರ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರನ್ನು ಸ್ಥಳ ನಿಗದಿ ಮಾಡದೆ ವರ್ಗಾವಣೆ ಮಾಡಿದೆ. ಇವರಿಂದ ತೆರವಾಗಿರುವ ಸ್ಥಾನಕ್ಕೆ ಬೆಂಗಳೂರಿನಲ್ಲಿ ಮುನಿಸಿಪಲ್ ಆಡಳಿತಾತ್ಮಕ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿದ್ದ ಅಸಾದ್ ಉರ್ ರೆಹಮಾನ್ ಶರೀಫ್ ಅವರನ್ನು ವರ್ಗಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಗುರುವಾರವೇ ಆಗಮಿಸಿ ಅಧಿಕಾರ ವಹಿಸಿಕೊಂಡರು. ನೂತನ ಆಯುಕ್ತರನ್ನು ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು.


ಸಾಂಸ್ಕೃತಿಕ ನಗರಿ ಮೈಸೂರಿಗೆ ತನ್ನದೇ ಆದ ಇತಿಹಾಸ ಇದೆ. ಪಾಲಿಕೆ ಸದಸ್ಯರು ಅಧಿಕಾರಿಗಳ ಸಹಕಾರದೊಂದಿಗೆ ಉತ್ತಮ ಕೆಲಸ ಮಾಡುವ ಆಲೋಚನೆ ಇದೆ. ಕುಡಿಯುವ ನೀರು, ಮೂಲಸೌಕರ್ಯ ಕಲ್ಪಿಸಲು ಆದ್ಯತೆ ಕೊಡಲಾಗುವುದು ಎಂದು ನೂತನ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ತಿಳಿಸಿದ್ದಾರೆ.


ನಗರ ಪಾಲಿಕೆಯ 48ನೇ ಆಯುಕ್ತರಾಗಿ ಐಎಎಸ್ ಅಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಶಿಲ್ಪಾನಾಗ್ ಅವರಿಂದ ಅಧಿಕಾರ ಸ್ವೀಕರಿಸಿದ್ದರು. 2 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು.


2004ರ ಬ್ಯಾಂಚ್‌ನ ಕೆಎಎಸ್ ಅಧಿಕಾರಿ ಆಗಿರುವ ಅಸಾದ್ ಉರ್ ರೆಹಮಾನ್ ಶರೀಫ್ ಅವರು ಈ ಹಿಂದೆ 16 ವರ್ಷಗಳ ಕಾಲ 5 ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರಿನಲ್ಲಿ ಪ್ರಾಜೆಕ್ಟ್ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸಿದ್ದ ಇವರು, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಾಗಿ, ತುಮಕೂರು ಪಾಲಿಕೆಯ ಆಯುಕ್ತರಾಗಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ, ಗುಂಡ್ಲುಪೇಟೆಯಲ್ಲೂ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಮೈಸೂರು ಪಾಲಿಕೆಯ 49ನೇ ಆಯುಕ್ತರಾಗಿ ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net