ಮೈಸೂರು: ನನೆಗುದಿಗೆ ಬಿದ್ದ ಬಜೆಟ್ ಘೋಷಣೆಗಳು

Budget 1
Published on
mysore
ಮಂಜುನಾಥ ತಿಮ್ಮಯ್ಯ ಮೈಸೂರು

ರಾಜ್ಯ ಸರ್ಕಾರ ಕಳೆದ ಬಾರಿ ಬಜೆಟ್‌ನಲ್ಲಿ ಮೈಸೂರು ಜಿಲ್ಲೆಗೆ ಘೋಷಣೆ ಮಾಡಿರುವ ಯೋಜನೆಗಳ ಪೈಕಿ ಅರ್ಧದಷ್ಟು ಮಾತ್ರ ಕಾರ್ಯರೂಪಕ್ಕೆ ಬಂದಿವೆ. ಉಳಿದವುಗಳು ನನೆಗುದಿಗೆ ಬಿದ್ದಿವೆ...!

2025-26ನೇ ಸಾಲಿನ ಆಯವಯ್ಯ ಮಂಡಿಸಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕಳೆದ ಬಜೆಟ್‌ನಲ್ಲಿ ಏನು ಕೊಟ್ಟರು? ಅದರಲ್ಲಿ ಎಷ್ಟು ಯೋಜನೆಗಳು ಜಾರಿಯಾಗಿವೆ? ಎಷ್ಟು ನೆರವೇರಿಲ್ಲ ಎಂಬುದರ ಕುರಿತು ಅವಲೋಕನ ಇಲ್ಲಿದೆ.

2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾದ ಪ್ರಮುಖ ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ. ಇನ್ನೂ ಕೆಲವು ಅನುಮೋದನೆಗೆ ಎದುರು ನೋಡುತ್ತಿವೆ. ಕೆಲ ಕಾಮಗಾರಿಗಳು ಈಗಾಗಲೇ ಶುರುವಾಗಿವೆ. ಇನ್ನೂ ಕೆಲವುಗಳು ಪೇಚಿಗೆ ಸಿಲುಕಿಕೊಂಡಿವೆ.

ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರವು ಆರ್ಥಿಕ ಸಹಕಾರ ನೀಡಿದೆ. ಆದಾಗ್ಯೂ, ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ಮೇಲ್ಸೇತುವೆ, ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಚಾಲನೆ ದೊರೆತಿಲ್ಲ.

ಮಹಾರಾಣಿ ಕಾಲೇಜಿಗೆ ಶುಕ್ರದೆಸೆ:

ಮಹಾರಾಣಿ ಕಾಲೇಜುಗಳಿಗೆ ಘೋಷಣೆಗಿಂತ ಹೆಚ್ಚು ಅನುದಾನ ನೀಡಿ ಅಭಿವೃದ್ಧಿಗೆ ಅನುವು ಮಾಡಿಕೊಡಲಾಗಿದೆ. 170 ಕೋಟಿ ರೂ. ಘೋಷಿಸಲಾಗಿತ್ತು. ಆದರೆ, 219 ಕೋಟಿ ರೂ. ಕೆಲಸಗಳಿಗೆ ನ.13ರಂದು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಇದರೊಂದಿಗೆ ಮಹಾರಾಣಿ ಕಾಲೇಜುಗಳ ಪಾಲಿಗೆ ಸಿಎಂ ಕೊಡುಗೈ ದಾನಿಯಾಗಿದ್ದಾರೆ.

170 ಕೋಟಿ ರೂ. ವೆಚ್ಚದಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಮತ್ತು ಕಲಾ ಕಾಲೇಜಿನ ನೂತನ ವಸತಿನಿಲಯ ಕಟ್ಟಡ, ವಿಜ್ಞಾನ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದು, 49 ಕೋಟಿ ರೂ. ವೆಚ್ಚದಲ್ಲಿ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನ 3, 4ನೇ ಅಂತಸ್ತಿನ ಕಟ್ಟಡ ಹಾಗೂ ವಸತಿನಿಲಯದ 3ನೇ ಅಂತಸ್ತಿನ ಕಟ್ಟಡ ನಿರ್ಮಾಣವೂ ಪ್ರಾರಂಭವಾಗಿದೆ.

ಶತಮಾನೋತ್ಸವ ಉಡುಗೊರೆ:

ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ‘ಶತಮಾನೋತ್ಸವ ಉಡುಗೊರೆ’ ದೊರೆತಿದೆ. ಕೆ.ಆರ್.ಆಸ್ಪತ್ರೆಯಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಹ್ಯೂಮನ್ ಮಿಲ್ಕ್ ಬ್ಯಾಂಕ್ ಘಟಕ ಸ್ಥಾಪಿಸಲಾಗುತ್ತಿದೆ.

ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ನಗರದಲ್ಲಿ ಆಧುನಿಕ ತುರ್ತು ಆರೈಕೆ ಕೇಂದ್ರ (ಕ್ರಿಟಿಕಲ್ ಕೇರ್ ಬ್ಲಾಕ್) ನಿರ್ಮಾಣವಾಗಿಲ್ಲ. ನೆಫ್ರೋ - ಮೂತ್ರಶಾಸ್ತ್ರ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿಲ್ಲ.

ಆರಂಭವಾಗದ ಶೀತಲಗೃಹ:

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಶೀತಲಗೃಹ ಇನ್ನೂ ನಿರ್ಮಾಣವಾಗಿಲ್ಲ. ಶೀಘ್ರದಲ್ಲೇ ಸಚಿವ ಸಂಪುಟದ ಒಪ್ಪಿಗೆ ದೊರೆಯುವ ನಿರೀಕ್ಷೆ ಇದೆ. ಯೋಜನಾ ವೆಚ್ಚವೂ ತಗ್ಗಿದೆ. 40 ಕೋಟಿ ರೂಪಾಯಿಂದ 16 ಕೋಟಿ ರೂ.ಇಳಿಕೆಯಾಗಿದೆ. ಜೈವಿಕ ಸಿಎನ್‌ಜಿ ಸ್ಥಾವರ ಸ್ಥಾಪಿಸುವ ಮೂಲಕ ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಾಗುತ್ತಿದೆ.

ದೇವರಾಜ, ಲ್ಯಾನ್ಸ್‌ಡೌನ್‌ಗೆ ಬಿಡಿದ ಗ್ರಹಣ:

ಲ್ಯಾನ್ಸ್‌ಡೌನ್, ದೇವರಾಜ ಮಾರುಕಟ್ಟೆಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ಉಭಯ ಕಟ್ಟಡಗಳನ್ನು ಪಾರಂಪರಿಕ ಶೈಲಿಯಲ್ಲೇ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಸಿಎಂ ಘೋಷಿಸಿದ್ದರು. ಇದು ಇನ್ನೂ ನನಸಾಗಿಲ್ಲ.

ಇತ್ತೀಚಿನ ಸಭೆಯಲ್ಲಿ ಸಿಎಂ, ‘ಲಾನ್ಸ್‌ಡೌನ್ ಕಟ್ಟಡವನ್ನು ತೆರವುಗೊಳಿಸಿ ಅದೇ ಮಾದರಿಯಲ್ಲಿ ಕಟ್ಟಡ ಕಾಮಗಾರಿ ಆರಂಭಿಸಬೇಕು. ಈ ಕುರಿತಾದ ಕಾನೂನು ತೊಡಕು ಬಗೆಹರಿಸಬೇಕು. ದೇವರಾಜ ಮಾರುಕಟ್ಟೆಯನ್ನು ತೆರವುಗೊಳಿಸಬೇಕು’ ಎಂದು ಸೂಚಿಸಿದ್ದಾರೆ. ಇದು ಯಾವಾಗ ಜಾರಿಗೆ ಬರಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಪಾಲಿಕೆಗೆ ದೊರೆಯದ ಇನ್ನೂರು ಕೋಟಿ ರೂ.:

ರಾಜ್ಯದ 10 ಪಾಲಿಕೆಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 2,000 ಕೋಟಿ ರೂ. ಒದಗಿಸಲಾಗುವುದು ಎಂದು ಘೋಷಿಸಲಾಗಿತ್ತು. ಇದರಲ್ಲಿ ಮೈಸೂರು ಪಾಲಿಕೆಗೂ 200 ಕೋಟಿ ರೂ. ದೊರೆಯಲಿದೆ ಎಂಬ ನಿರೀಕ್ಷೆ ಇತ್ತು. ಅದು ಸಹ ಇನ್ನೂ ದೊರೆತಿಲ್ಲ.

ಅಡಕತ್ತರಿಯಲ್ಲಿ ಸಿಲುಕಿರುವ ಯೋಜನೆಗಳು:

ಮೈಸೂರು ನಗರದ ಹೊರವಲಯದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ಕಾರ್ಯಸಾಧ್ಯತಾ ವರದಿ ತಯಾರಿಸಲು ಕ್ರಮ ವಹಿಸಿಲ್ಲ. ಮುಡಾ ನಿವೇಶನ ಹಂಚಿಕೆ ಹಗರಣದಲ್ಲೇ ಕಳೆದುಹೋಗಿದೆ. ಇನ್ನೂ ಈ ಕುರಿತು ಸಿಎಂಗೆ ಯೋಚನೆ ಮಾಡಲು ಸಮಯ ದೊರೆತಂತಿಲ್ಲ.

ಜವಳಿ ಪಾರ್ಕ್, ಹುಣಸೂರು ತಾಲೂಕಿನ ಮರದೂರು ಕೆರೆ ತುಂಬಿಸುವ ಯೋಜನೆ, ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳು ನಿರ್ಮಾಣವೂ ಆಗಿಲ್ಲ. ಕೆ.ಆರ್.ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಏತ ನೀರಾವರಿ ಯೋಜನೆ ಕುರಿತು ಯಾವುದೇ ಪ್ರಕ್ರಿಯೆ ನಡೆದಿಲ್ಲ. ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಬಿನಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್ ನಿರ್ಮಾಣವಾಗಿಲ್ಲ

ರನ್‌ವೇ ವಿಸ್ತರಣೆ ಅಡೆತಡೆ:

ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಅನುಷ್ಠಾನಕ್ಕೆ ಬರುವ ಯೋಜನೆಗಳು ಇನ್ನೂ ತೆವಳುತ್ತಿವೆ. ಅದರಲ್ಲಿ ಮುಖ್ಯವಾದ ಮೈಸೂರು ವಿಮಾನ ನಿಲ್ದಾನದ ರನ್‌ವೇ ವಿಸ್ತರಣೆಗೆ ಅಡೆತಡೆಗಳೂ ನಿವಾರಣೆಯಾಗಿಲ್ಲ.

ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಲಿದೆ. ಇನ್ನೂ 46 ಎಕರೆ ಭೂಸ್ವಾಧೀನ ಆಗಬೇಕಿದೆ. ಈಗಾಗಲೇ 111 ಎಕರೆ ಭೂಸ್ವಾಧೀನಕ್ಕೆ ಪರಿಹಾರ ಪಾವತಿಯಾಗಿದ್ದು, 95 ಎಕರೆ ಪಾವತಿ ಬಾಕಿ ಇದೆ. ಇದಕ್ಕಾಗಿ ರಾಜ್ಯ ಸರ್ಕಾರವು 169 ಕೋಟಿ ರೂ. ಬಿಡುಗಡೆ ಮಾಡಿದೆ.

ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೆರವು ಘೋಷಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಇದಕ್ಕೆ ಅನುಮೋದನೆ ದೊರೆತಿದೆ. ಆದರೆ, ಕುಕ್ಕರಹಳ್ಳಿ ಬಳಿ, ಕೆ.ಆರ್.ಎಸ್.ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಇನ್ನೂ ಆರಂಭವಾಗಲಿಲ್ಲ.

ಚಾಲನೆ ದೊರೆತ ಯೋಜನೆಗಳು

* ಮಹಾರಾಣಿ ವಿಜ್ಞಾನ ಮತ್ತು ಕಲಾ ಕಾಲೇಜಿನ ನೂತನ ವಸತಿನಿಲಯ ಕಟ್ಟಡ, ವಿಜ್ಞಾನ ಕಾಲೇಜಿನ ನೂತನ ಕಟ್ಟಡ ನಿರ್ಮಾಣ * ಮಹಾರಾಣಿ ವಾಣಿಜ್ಯ ಕಾಲೇಜಿನ 3, 4ನೇ ಅಂತಸ್ತಿನ ಕಟ್ಟಡ ಹಾಗೂ ವಸತಿನಿಲಯದ 3ನೇ ಅಂತಸ್ತಿನ ಕಟ್ಟಡ ನಿರ್ಮಾಣ * ಕೆ.ಆರ್.ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ * ಹ್ಯೂಮನ್ ಮಿಲ್ಕ್ ಬ್ಯಾಂಕ್ ಘಟಕ ಸ್ಥಾಪನೆ * ಎಪಿಎಂಸಿಯಲ್ಲಿ 40 ಕೋಟಿ ರೂ.ವೆಚ್ಚದಲ್ಲಿ ಶೀತಲಗೃಹ ನಿರ್ಮಾಣ * ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆಯನ್ನಾಗಿ ರೂಪಿಸಲು ಜೈವಿಕ ಸಿಎನ್‌ಜಿ ಸ್ಥಾವರ ಸ್ಥಾಪನೆ

ನನೆಗುದಿಗೆ ಬಿದ್ದಿರುವ ಯೋಜನೆಗಳು

* ಲ್ಯಾನ್ಸ್‌ಡೌನ್, ದೇವರಾಜ ಮಾರುಕಟ್ಟೆ ಕಟ್ಟಡ ಅಭಿವೃದ್ಧಿ * ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ಕಾರ್ಯಸಾಧ್ಯತಾ ವರದಿ * ಆಧುನಿಕ ತುರ್ತು ಆರೈಕೆ ಕೇಂದ್ರ (ಕ್ರಿಟಿಕಲ್ ಕೇರ್ ಬ್ಲಾಕ್) * ನೆಫ್ರೋ - ಮೂತ್ರಶಾಸ್ತ್ರ ಆಸ್ಪತ್ರೆ ಮೇಲ್ದರ್ಜೆಗೆ * ಮೈಸೂರು ಪಾಲಿಕೆಗೆ 200 ಕೋಟಿ ರೂ. * ಮಣಿಪಾಲ್ ಆಸ್ಪತ್ರೆಯ ಜಂಕ್ಷನ್‌ನಲ್ಲಿ ಮೇಲ್ಸೇತುವೆ * ಕುಕ್ಕರಹಳ್ಳಿ ಬಳಿ, ಕೆ.ಆರ್.ಎಸ್.ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ * ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ * ಕಬಿನಿಯಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್

2023-24ರ ಘೋಷಣೆಗಳೂ ಈಡೇರಿಲ್ಲ:

ಸಿದ್ದರಾಮಯ್ಯ ಅವರು 2ನೇ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮಂಡಿಸಿದ 2023-24ನೇ ಸಾಲಿನ ಬಜೆಟ್‌ನ ಘೋಷಣೆಗಳೂ ಬಹಳಷ್ಟು ಈಡೇರಿಲ್ಲ.

ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಟ್ರಾಮಾ ಕೇರ್ ಸೆಂಟರ್‌ಗೆ 30 ಕೋಟಿ ರೂ., ಸುಟ್ಟ ಗಾಯಗಳ ಘಟಕ ಸ್ಥಾಪನೆ, ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಸ್ಥಾಪನೆ, ಕಿದ್ವಾಯಿ ಆಸ್ಪತ್ರೆ ಸ್ಥಾಪನೆಯ ಬೇಡಿಕೆಗಳು ನನಸಾಗಿವೆ.

ಉಳಿದಂತೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದ ಉನ್ನತೀಕರಣ, ಫಿಲ್ಮ್ ಸಿಟಿ, ಚಾಮುಂಡಿವಿಹಾರ ಕ್ರೀಡಾಂಗಣದ ಬಳಿ ಕಲಾಗ್ಯಾಲರಿ, ಸೈಕ್ಲಿಂಗ್ ವೇಲೋಡ್ರೋಮ್, ಅತ್ಯಾಧುನಿಕ ಕೌಶಲ ಪ್ರಯೋಗಾಲಯ, ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆಗಳ ಬ್ರಾೃಂಡಿಂಗ್‌ಗಾಗಿ ಕಾರ್ಯಕ್ರಮ ಈ ಯಾವುದೂ ನೆರವೇರಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net