ಮೈಸೂರು ನಗರಕ್ಕೆ ನಾಲ್ಕು ತಹಸೀಲ್ದಾರ್ ಹುದ್ದೆ ಸೃಜಿಸಿ

76df00fb-783d-443a-8f6f-2b678ac703b9
Published on

ಮೈಸೂರು ; ಬೆಂಗಳೂರು ಮಾದರಿಯಲ್ಲಿ ಮೈಸೂರು ನಗರಕ್ಕೆ ನಾಲ್ಕು ತಹಸೀಲ್ದಾರ್ ಹುದ್ದೆಯನ್ನು ಸೃಷ್ಟಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಶಾಸಕ ಜಿ.ಟಿ.ದೇವೇಗೌಡ ನಗರದಲ್ಲಿ ಮಂಗಳವಾರ ಮನವಿ ಸಲ್ಲಿಸಿದರು.


ಮೈಸೂರು ತಾಲೂಕು ತಹಸೀಲ್ದಾರ್ ವ್ಯಾಪ್ತಿಗೆ ಚಾಮರಾಜ, ಕೃಷ್ಣರಾಜ, ನರಸಿಂಹರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳ ಜತೆಗೆ ವರುಣ ವಿಧಾನಸಭಾ ಕ್ಷೇತ್ರದ ವರುಣ ಹೋಬಳಿ ಬರಲಿದೆ. ಕಾರ್ಯಭಾರ ಹೆಚ್ಚಿಗೆ ಇರುವುದರಿಂದ ತಹಸೀಲ್ದಾರ್‌ಗೆ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದ್ದು, ರೈತರ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ.

ತಹಸೀಲ್ದಾರ್‌ಗೆ ಮೈಸೂರು ನಗರದ ಜಮೀನುಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣಗಳಿದ್ದು, ವಾರಕ್ಕೆ 3 ದಿನ ಹೈಕೋರ್ಟ್‌ಗೆ ಹೋಗುತ್ತಾರೆ. ಇದರಿಂದ ತಾಲೂಕಿನ ರೈತರ ಕೆಲಸ-ಕಾರ್ಯಗಳು ಆಗದೆ ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ ಮೈಸೂರು ನಗರದ ನಾಲ್ಕು ಭಾಗಗಳಿಗೆ ಒಂದರಂತೆ ಹೊಸ ತಹಸೀಲ್ದಾರ್ ಹುದ್ದೆಯನ್ನು ಸೃಜಿಸಬೇಕು ಎಂದು ವಿನಂತಿಸಿದರು.


ಮೈಸೂರು ತಾಲೂಕಿನಲ್ಲಿ ರೈತರು ನೂರಾರು ವರ್ಷಗಳಿಂದ ಜಮೀನುಗಳನ್ನು ಉಳುಮೆ ಮಾಡುತ್ತ ಬಂದಿದ್ದು, ನಗರ ಪ್ರದೇಶದಿಂದ 10 ಕಿ.ಮೀ. ಒಳಗೆ ಇರುವ ಜಮೀನುಗಳಿಗೆ ಸಾಗುವಳಿ ನೀಡುತ್ತಿಲ್ಲ. ಈ ರೈತರ ಅನುಕೂಲಕ್ಕಾಗಿ ರೈತರು ಉಳುಮೆ ಮಾಡುತ್ತಿರುವ ಜಮೀನಿನ ಪೈಕಿ ಅರ್ಧ ಸರ್ಕಾರ ವಹಿಸಿಕೊಂಡು ಬಾಕಿ ಜಮೀನನ್ನು ರೈತರಿಗೆ ಉಳುವೆ ಮಾಡುವ ಸಲುವಾಗಿ ಸಕ್ರಮ ಮಾಡಿಕೊಡುವಂತೆ ಕೋರಿದರು.


ಮೈಸೂರು ತಾಲೂಕಿನ ಜಯಪುರ ಹೋಬಳಿ ಚಿಕ್ಕನಹಳ್ಳಿ, ಹಾರೋಹಳ್ಳಿ, ಗುಮ್ಮಚನಹಳ್ಳಿ, ಎಸ್.ಕಲ್ಲಹಳ್ಳಿ, ಅರಸನಕೆರೆ, ಮಾರ್ಬಳ್ಳಿ, ಮಾರ್ಬಳ್ಳಿಹುಂಡಿ, ಮಾವಿನಹಳ್ಳಿ, ಮದ್ದೂರು, ಮದ್ದೂರುಹುಂಡಿ ಗ್ರಾಮಗಳಲ್ಲಿ ರೈತರು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಜಮೀನುಗಳಲ್ಲಿ ಉಳುಮೆ ಮಾಡುತ್ತಿದ್ದು, ಅರಣ್ಯ ಇಲಾಖೆಯವರ ಎನ್‌ಒಸಿ ನೀಡದೆ, ಈ ರೈತರಿಗೆ ಸಾಗುವಳಿ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಂದಾಯ ಇಲಾಖೆ, ಭೂಮಾಪನ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿ, ಜಂಟಿ ಸರ್ವೇ ಮಾಡಿಸಿ, ರೈತರಿಗೆ ಎನ್‌ಒಸಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರಲ್ಲಿ ವಿನಂತಿಸಿದರು.


ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರತಿ ಗ್ರಾಮಗಳಲ್ಲಿ ಲಭ್ಯ ಇರುವ ಸರ್ಕಾರಿ ಜಮೀನುಗಳನ್ನು ಸ್ಮಶಾನಕ್ಕೆ ಮತ್ತು ಆಶ್ರಯ ಬಡಾವಣೆ ನಿರ್ಮಾಣಕ್ಕಾಗಿ ಕಾಯ್ದಿರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.


ಮೈಸೂರು ನಗರ ಪ್ರದೇಶದಲ್ಲಿರುವ ಕೆರೆಗಳು, ರಾಜ ಕಾಲುವೆಗಳು ಒತ್ತುವರಿ ಮಾಡಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಒಂದು ಕಾರ್ಯಪಡೆ ರಚಿಸಿ, ಕೂಡಲೇ ಕೆರೆಗಳು ಮತ್ತು ರಾಜಕಾಲುವೆಗಳನ್ನು ಸರ್ವೇ ಮಾಡಿಸಿ, ಒತ್ತುವರಿ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net