ಮೈಸೂರು ನಗರ, ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಮುಕ್ತ ಮಾಡಲು ತಾಕಿತ್ತು

10
Published on

ಮೈಸೂರು: ಮೈಸೂರು ನಗರ ಮತ್ತು ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಬೇಕು. ಈ ಕೆಲಸ ಪ್ರಸಕ್ತ ದಸರಾಕ್ಕೂ ಮುನ್ನವೇ ಆಗಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.

ಕಸ ವಿಲೇವಾರಿ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮೈಸೂರು, ಚಾಮುಂಡಿಬೆಟ್ಟವನ್ನು ಮಾದರಿ ಪ್ಲಾಸ್ಟಿಕ್‌ಮುಕ್ತ ಪ್ರದೇಶವಾಗಿ ರೂಪಿಸಬೇಕು. ಇದು ರಾಜ್ಯದ ಇತರ ಪ್ರವಾಸಿ, ಧಾರ್ಮಿಕ ತಾಣಗಳಿಗೂ ಪ್ರೇರಣೆ ಮತ್ತು ಮಾದರಿ ಆಗಬೇಕು ಎಂದರು.

ಚಾಮುಂಡಿಬೆಟ್ಟ ಧಾರ್ಮಿಕವಷ್ಟೇ ಅಲ್ಲ, ಜೀವವೈವಿಧ್ಯತೆಗಳ ತಾಣ. ಇಲ್ಲಿನ ಸೂಕ್ಷ್ಮಪರಿಸರವನ್ನು ಸಂರಕ್ಷಿಸುವಲ್ಲಿ ಕಾಳಜಿ ವಹಿಸಬೇಕಿದೆ. ಆದ್ದರಿಂದ ತಿರುಪತಿ ಮಾದರಿಯಲ್ಲಿ ಚಾಮುಂಡಿಬೆಟ್ಟದ ಪ್ರವೇಶದಲ್ಲಿ ಪ್ಲಾಸ್ಟಿಕ್ ಒಯ್ಯುವುದನ್ನು ತಡೆಯಬೇಕು. ಚೆಕ್‌ಪೋಸ್ಟ್ ತೆರೆದು ಪರಿಶೀಲಿಸಬೇಕು ಎಂದು ಸೂಚಿಸಿದರು.

ಲೈಸೆನ್ಸ್ ರದ್ದುಗೊಳಿಸಿ:

ಚಾಮುಂಡಿಬೆಟ್ಟದಲ್ಲಿ ಹೂವು ಖರೀದಿ ಮಾಡಿದಾಗ ನನಗೇ ಪ್ಲಾಸ್ಟಿಕ್‌ನಲ್ಲಿ ಅದನ್ನು ಹಾಕಿಕೊಟ್ಟರು. ಅಷ್ಟು ಸಲೀಸಾಗಿ ಇದು ಬಿಕರಿಯಾಗುತ್ತಿದೆ. ಅಲ್ಲಿನ ಗ್ರಾಮ ಪಂಚಾಯಿತಿ, ದೇವಸ್ಥಾನ ಮಂಡಳಿ ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕ್ರಮವಹಿಸಬೇಕು. ಅದಕ್ಕಾಗಿ ಮೊದಲು ಅಲ್ಲಿರುವ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ, ಅವರಿಗೆ ಷರತ್ತುಬದ್ಧವಾಗಿ ಪರವಾನಗಿ ನೀಡಿ. ಒಂದು ವೇಳೆ, ನಿಯಮ ಉಲ್ಲಂಘಿಸಿದರೆ ಅವರ ಲೈಸೆನ್ಸ್ ರದ್ದುಗೊಳಿಸಬೇಕು ಎಂದು ನಿರ್ದೇಶಿಸಿದರು.

ಬೆಟ್ಟದಲ್ಲಿ ತ್ಯಾಜ್ಯ ಸಂಸ್ಕರಣೆಗೆ ಅವಕಾಶವಿಲ್ಲ:

ಚಾಮುಂಡಿಬೆಟ್ಟದ ಮೇಲೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ತ್ಯಾಜ್ಯ ಸಂಸ್ಕರಣೆಗೆ ಅವಕಾಶವಿಲ್ಲ. ಹೀಗೆ ಮಾಡಿದರೆ ಅಲ್ಲಿನ ಪರಿಸರ ಹಾಳಾಗಲಿದೆ. ಜಲಮೂಲಕ್ಕೂ ಧಕ್ಕೆಯಾಗಲಿದೆ. ಬೆಟ್ಟದ ಕೆಳಭಾಗದಲ್ಲಿ ಅಥವಾ ನಗರಪಾಲಿಕೆ ಸೂಚಿಸುವ ಸ್ಥಳದಲ್ಲಿ ಕಸ ಹಾಕಿ. ಅದಕ್ಕೂ ಮುನ್ನ ಬೆಟ್ಟದ ಮೇಲಿರುವ ತ್ಯಾಜ್ಯ ಸಂಸ್ಕರಣೆಯ ಶೆಡ್ಡು ತೆರವುಗೊಳಿಸಬೇಕು ಎಂದು ಸೂಚಿಸಿದರು.


ಮೈಸೂರು ಪ್ಲಾಸ್ಟಿಕ್ ಮುಕ್ತವಾಗಲಿ:
ಮೈಸೂರು ಸಹ ಪ್ಲಾಸ್ಟಿಕ್ ಮುಕ್ತ ನಗರವಾಗಬೇಕು ಎಂದು ಸೂಚಿಸಿದರು.
ಮೈಸೂರು ಹೆಸರಿಗಷ್ಟೇ ಸ್ವಚ್ಛ ನಗರಿ ಆಗಬಾರದು. ಅದು ಕಾರ್ಯರೂಪಕ್ಕೆ ಬರಬೇಕು, ಅದರ ಪರಿಣಾಮ ಬೀದಿಯಲ್ಲಿ ಕಾಣಬೇಕು. ಅದಕ್ಕಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ತಿಳಿಸಿದರು.


ಪ್ಲಾಸ್ಟಿಕ್ ಬಳಕೆ ನಿಷೇಧ ಮೊದಲು ಸರ್ಕಾರಿ ಕಚೇರಿಗಳಿಂದಲೇ ಆರಂಭವಾಗಬೇಕು. ಪ್ಲಾಸ್ಟಿಕ್ ನೀರಿನ ಬಾಟಲ್‌ಗಳ ಬಳಕೆಗೆ ಕಡಿವಾಣ ಹಾಕಿ 20 ಲೀಟರ್ ಕ್ಯಾನ್ ಇಟ್ಟು ಪೇಪರ್ ಕಪ್ ಬಳಸಬೇಕು. ಸಿಬ್ಬಂದಿ ಮನೆಯಿಂದಲೇ ನೀರಿನ ಬಾಟಲಿ ತರುವಂತೆ ಸೂಚಿಸಬೇಕು ಎಂದರು.


ಹೋಟೆಲ್‌ಗಳಲ್ಲಿ ನೀರಿನ ಬಾಟಲ್ ನಿಷೇಧಿಸಿ:
ಹೋಟೆಲ್‌ಗಳಲ್ಲಿ ನೀರಿನ ಬಾಟಲ್ ಬಳಕೆಯನ್ನು ನಿಷೇಧಿಸಬೇಕು. ಹಸಿರು ಕ್ಯಾಂಪಸ್ ಆಗಿ ರೂಪಿಸಲು ಶಿಕ್ಷಣ ಸಂಸ್ಥೆಗಳಿಗೆ ಉತ್ತೇಜಿಸಬೇಕು ಎಂದು ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.


ಮಾರುಕಟ್ಟೆ, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ ನಿರ್ಬಂಧಿಸಬೇಕು. ಬಟ್ಟೆ ಬ್ಯಾಗ್ ಬಳಕೆಗೆ ಪ್ರೋತ್ಸಾಹಿಸಬೇಕು. ರಿಯಾಯಿತಿ ದರದಲ್ಲಿ ಬಟ್ಟೆ ಬ್ಯಾಗ್ ಮಾರಾಟ ಮಾಡಬೇಕು. ಇದನ್ನು ಉತ್ಪಾದನೆ ಮಾಡಲು ಮಹಿಳಾ ಸಂಘಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net