

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ನಾಡಹಬ್ಬ ದಸರಾ ಮಹೋತ್ಸವಕ್ಕೂ ಮುನ್ನವೇ ಕ್ರೀಡಾಕೂಟ ಆಯೋಜನೆ ಮಾಡುವ ಜಿಲ್ಲಾಡಳಿತದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಹೀಗಾಗಿ, ಈ ಸಲವೂ ದಸರಾ ಸಂದರ್ಭದಲ್ಲಿ ಎಂದಿನಂತೆ ಕ್ರೀಡಾ ಚಟುವಟಿಕೆಗಳು ನಡೆಯಲಿವೆ.
ಹಿಂದಿನ ತಪ್ಪುಗಳಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತದ ಪರ್ಯಾಯ ವ್ಯವಸ್ಥೆಗೆ ರಾಜ್ಯ ಸರ್ಕಾರ ಕೆಂಪು ನಿಶಾನೆ ತೋರಿದೆ. ಹೀಗಾಗಿ, ಪ್ರಸ್ತಕ ಸಾಲಿನ ದಸರಾ ಮಹೋತ್ಸವ ನಡೆಯಲಿರುವ ಅ.15ರಿಂದ 24ರ ಅವಧಿಯಲ್ಲೇ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಲಿವೆ. ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ನಾಡಹಬ್ಬ ದಸರಾ ಮಹೋತ್ಸವ ಜಾಗತಿಕ ಮಟ್ಟದ ಉತ್ಸವವಾಗಿ ಹೆಸರುವಾಸಿಯಾಗಿದೆ. ಪ್ರತಿ ವರ್ಷವೂ ದಸರೆಗೆ ಒಂದೊಂದು ಹೊಸ ಕಾರ್ಯಕ್ರಮಗಳು ಸೇರ್ಪಡೆಯಾಗುತ್ತಿವೆ. ಆದ್ದರಿಂದ ದಸರಾ ಸಂದರ್ಭದಲ್ಲಿ ಹತ್ತಾರು ಕಾರ್ಯಕ್ರಮಗಳು ಹತ್ತಾರು ಕಡೆ ಅದ್ದೂರಿಯಾಗಿ ವರ್ಣರಂಜಿತವಾಗಿ ನಡೆಯುತ್ತವೆ.
ದಸರೆಗೆ ಮುನ್ನ ನಡೆಯುವ ಯುವ ಸಂಭ್ರಮದಿಂದ ಹಿಡಿದು ಜಂಬೂಸವಾರಿ ಮೆರವಣಿಗೆವರೆಗೆ ವೈವಿಧ್ಯಮಯ ಹಾಗೂ ವಿಶಿಷ್ಟ ಕಾರ್ಯಕ್ರಮಗಳ ಸುರಿಮಳೆಯೇ ಆಗುತ್ತದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ಆಯಾ ಇಲಾಖೆಗಳು ತಮ್ಮ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿರುತ್ತವೆ. ಬೇರೆ ಕಡೆಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ.
ಇಂತಹ ಗಡಿಬಿಡಿಯಲ್ಲಿ ಕ್ರೀಡಾಕೂಟ ವ್ಯವಸ್ಥಿತವಾಗಿ ಆಯೋಜನೆ ಆಗುತ್ತಿಲ್ಲ. ಅವಸರ, ಆತುರ, ಕೊನೇ ಹಂತ ತಯಾರಿಯಿಂದಾಗಿ ಪ್ರತಿ ವರ್ಷವೂ ಕ್ರೀಡಾಕೂಟದಲ್ಲಿ ಅವ್ಯವಸ್ಥೆ ರಾರಾಜಿಸುತ್ತದೆ, ಲೋಪದೋಷಗಳು ವಿಜೃಂಭಿಸುತ್ತವೆ.
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ ಸೇರಿದಂತೆ ವಿವಿಧೆಡೆ ದಸರಾ ಕ್ರೀಡಾಕೂಟ ನಡೆಯುತ್ತದೆ. ಒಳಾಂಗಣ, ಹೊರಾಂಗಣ, ಗುಂಪು ಹಾಗೂ ವೈಯಕ್ತಿಕ ಕ್ರೀಡಾ ವಿಭಾಗದಲ್ಲಿ ಅಂದಾಜು 27 ಬಗೆಯ ಕ್ರೀಡಾ ಚಟುವಟಿಕೆಗಳನ್ನು ನಡೆಸಬೇಕಾಗುತ್ತದೆ. ಇದರ ನಿರ್ವಹಣೆ ಕಷ್ಟಕರ ಎನಿಸಿದೆ.
ಪ್ರತಿ ವರ್ಷ ಕ್ರೀಡಾಪಟುಗಳು ತೊಂದರೆ ಅನುಭವಿಸುವುದು ಸಾಮಾನ್ಯ ಎನಿಸಿದೆ. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು, ಅಧಿಕಾರಿಗಳು, ತೀರ್ಪುಗಾರರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂದಾಜು 6ರಿಂದ 7 ಸಾವಿರ ಜನರು ಭಾಗವಹಿಸುತ್ತಾರೆ. ಇವರೆಲ್ಲರಿಗೂ ವಸತಿ, ಊಟ, ಉಪಾಹಾರ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸುವುದು ಸವಾಲಿನ ಕೆಲಸ.
ಈ ಪೈಕಿ ಎಲ್ಲರಿಗೂ ಸೂಕ್ತ ವಾಸ್ತವ್ಯ ವ್ಯವಸ್ಥೆ ಮಾಡುವುದು ಬಲು ಪ್ರಯಾಸ. ದಸರಾ ಸಂದರ್ಭದಲ್ಲಿ ನಗರದ ಬಹುತೇಕ ಹೋಟೆಲ್, ವಸತಿಗೃಹ ಕೊಠಡಿಗಳು ಪ್ರವಾಸಿಗರಿಂದ ಭರ್ತಿಯಾಗಿರುತ್ತವೆ. ಹೀಗಾಗಿ ಕ್ರೀಡಾಪಟುಗಳಿಗೆ ಉಳಿದುಕೊಳ್ಳಲು ಕೊಠಡಿಗಳೇ ದೊರೆಯುವುದಿಲ್ಲ.
ಇದರಿಂದ ವಿವಿಧ ಊರುಗಳಿಂದ ಬರುವ ಕ್ರೀಡಾಪಟುಗಳು ವಸತಿ ದೊರೆಯದೆ ಪರದಾಡುತ್ತಾರೆ. ವಸತಿ ದೊರೆತರೂ ಮೂಲಸೌಕರ್ಯಗಳಿಲ್ಲದ ಕಡೆ ವ್ಯವಸ್ಥೆ ಮಾಡಲಾಗುತ್ತದೆ. ಈ ಕುರಿತು ಪ್ರತಿವರ್ಷ ದೂರು, ಆಕ್ಷೇಪ, ಅವಾಂತರಗಳು ಕೇಳಿಬರುತ್ತವೆ.
ಹಳೆಯ ತಪ್ಪುಗಳಿಂದ ಪಾಠ ಕಲಿತುಕೊಂಡಿರುವ ಜಿಲ್ಲಾಡಳಿತ ಈ ಸಲ ನಾಡಹಬ್ಬ ದಸರಾ ಮಹೋತ್ಸವಕ್ಕೂ ಮುನ್ನವೇ ಕ್ರೀಡಾಕೂಟ ಆಯೋಜನೆ ಮಾಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಕ್ರೀಡಾ ಸಚಿವ ಬಿ.ನಾಗೇಂದ್ರ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ‘ದಸರಾ ಸಂದರ್ಭದಲ್ಲಿ ಹತ್ತಾರು ಕಾರ್ಯಕ್ರಮಗಳು ನಡೆಯುತ್ತವೆ. ಅವುಗಳೊಂದಿಗೆ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಲು ಆಗುವುದಿಲ್ಲ. ಹಲವು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಕ್ರೀಡಾಪಟುಗಳು ಬರಲಿದ್ದಾರೆ. ಅವರಿಗೆ ವಾಸ್ತವ್ಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವುದು ಕಷ್ಟಕರ. ಅಂತಹ ಸನ್ನಿವೇಶದಲ್ಲಿ ಕ್ರೀಡಾಕೂಟದ ವ್ಯವಸ್ಥೆ ಕಡೆಗೆ ಹೆಚ್ಚು ಗಮನ ನೀಡಲು ಸಾಧ್ಯವಾಗುವುದಿಲ್ಲ’ ಎಂದು ಮನವರಿಕೆ ಮಾಡಿಕೊಟ್ಟಿದ್ದರು.
ಈ ಹಿನ್ನೆಲೆಯಲ್ಲಿ ದಸರಾಕ್ಕೂ ಮುನ್ನವೇ ಕ್ರೀಡಾಕೂಟ ಆಯೋಜನೆಗೆ ಕ್ರೀಡಾ ಸಚಿವರು, ಇಲಾಖೆಯ ಆಯುಕ್ತ ಶಶಿಕುಮಾರ್ ಸಹಮತ ವ್ಯಕ್ತಪಡಿಸಿದ್ದರು. ಈ ಕುರಿತು ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಸಮಾಲೋಚನೆ ನಡೆಸಲಾಗಿದೆ.
ಆದರೆ, ಅಂತಿಮವಾಗಿ ಈ ಪ್ರಸ್ತಾವನೆಯನ್ನು ಕೈಬಿಡಲಾಗಿದ್ದು, ಪ್ರತಿ ವರ್ಷದಂತೆ ದಸರಾದಲ್ಲೇ ಕ್ರೀಡಾಕೂಟ ಆಯೋಜನೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ಸಂಬಂಧ ಕ್ರೀಡಾ ಇಲಾಖೆಯಿಂದ ಸುತ್ತೋಲೆ ಬಂದಿದೆ. ಈ ಪ್ರಕಾರವೇ ಕ್ರೀಡಾಕೂಟಕ್ಕೆ ಸಿದ್ಧತೆ ನಡೆದಿದೆ. ಹೀಗಾಗಿ, ಈ ಸಲವೂ ಅದೇ ರಾಗ, ಅದೇ ಹಾಡು ಎಂಬಂತೆ ಸಮಸ್ಯೆಗಳು ಪುನರಾವರ್ತನೆಯಾಗುವುದು ನಿಶ್ಚಿತ ಎನಿಸಿದೆ.
ಹೆಚ್ಚಿನ ಅನುದಾನಕ್ಕೆ ಮನವಿ
ದಸರಾ ಕ್ರೀಡಾಕೂಟಕ್ಕೆ ಪ್ರತ್ಯೇಕವಾಗಿ ಹೆಚ್ಚಿನ ಅನುದಾನ ನೀಡುವಂತೆ ಜಿಲ್ಲಾಡಳಿತ ಮನವಿ ಸಲ್ಲಿಸಿದೆ. ಕಳೆದ ವರ್ಷ ದಸರಾ ಕ್ರೀಡೆಗೆ 5 ಕೋಟಿ ರೂ. ಬಜೆಟ್ ನಿಗದಿ ಮಾಡಲಾಗಿತ್ತು. ಅದು 7 ಕೋಟಿ ರೂ.ಗೆ ಏರಿಕೆ ಆಗಿತ್ತು. ಈ ಸಲ ಅದಕ್ಕಿಂತ ಹೆಚ್ಚಿನ ಅನುದಾನ ನೀಡಬೇಕು. ಅದನ್ನು ದಸರಾ ಅನುದಾನದೊಂದಿಗೆ ಸೇರಿಸಬಾರದು ಎಂದು ಜಿಲ್ಲಾಡಳಿತ ಕೇಳಿಕೊಂಡಿದೆ.
ಚಾಮುಂಡಿ ವಿಹಾರ ದುರಸ್ತಿ ಮಾಡಿ:
ಕ್ರೀಡಾಕೂಟ ನಡೆಯುವ ಪ್ರಮುಖ ಮೈದಾನವಾದ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಅನೇಕ ಸಮಸ್ಯೆ, ಅವ್ಯವಸ್ಥೆಗಳಿವೆ. ಅದನ್ನು ದಸರಾಕ್ಕೂ ಮುನ್ನವೇ ಸರಿಪಡಿಸಬೇಕಿದೆ. ಕೆಲ ದುರಸ್ತಿ ಕೆಲಸವೂ ಆಗಬೇಕಿದೆ. ಕೆಲವೆಡೆ ಬಣ್ಣ ಸಹ ಬಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂಬುದು ಕ್ರೀಡಾಪಟುಗಳ ಆಗ್ರಹವಾಗಿದೆ.
ದಸರಾ ಮಹೋತ್ಸವಕ್ಕೂ ಮುನ್ನವೇ ಕ್ರೀಡಾಕೂಟ ಆಯೋಜನೆಗೆ ರಾಜ್ಯ ಸರ್ಕಾರದಿಂದ ಸಮ್ಮತಿ ದೊರೆತಿಲ್ಲ. ಹೀಗಾಗಿ ದಸರಾ ಸಂದರ್ಭದಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗುವುದು. ಈ ಕುರಿತು ಇತ್ತೀಚೆಗೆ ನಮ್ಮ ಇಲಾಖೆಯಿಂದ ಸುತ್ತೋಲೆ ಬಂದಿದೆ.
ಭಾಸ್ಕರ್ ನಾಯಕ್
ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ