ಮೈಸೂರು ದಸರಾದಲ್ಲಿ ಆಕರ್ಷಿಸಿದ ಮಕ್ಕಳ ಕಲಾಥಾನ್

mysore
Published on

ಮೈಸೂರು: ಜಾನಪದ ಶ್ರೀಮಂತಿಕೆ ಬಿಂಬಿಸುವ ವಿಶಿಷ್ಟ ವೇಷಭೂಷಣದೊಂದಿಗೆ ಚಿಣ್ಣರು ರಂಜಿಸಿದರು. ಇದರೊಂದಿಗೆ ಮಕ್ಕಳ ದಸರಾ ಅಂಗವಾಗಿ  ನಗರದ ಪ್ರಮುಖ ಬೀದಿಯಲ್ಲಿ ನಡೆದ ವರ್ಣರಂಜಿತ ‘ಮಕ್ಕಳ ಕಲಾಥಾನ್’ ಕಲಾ ಸಿರಿತನಕ್ಕೆ ಸಾಕ್ಷಿಯಾಯಿತು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಶುರುವಾದ ಮಕ್ಕಳ ಕಲಾಥಾನ್‌ನಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯ ಸಾವಿರಾರು ಮಕ್ಕಳು ಭಾಗಿಯಾಗಿ ಸಂಭ್ರಮಿಸಿದರು.

ಮೆರವಣಿಗೆಯಲ್ಲಿ ಸಾಗಿದ ಪ್ರೌಢಶಾಲಾ ಮಕ್ಕಳು ಜಾನಪದ ನೃತ್ಯ, ಸಾಂಸ್ಕೃತಿಕ ನೃತ್ಯ, ಗಾರುಡಿ ಗೊಂಬೆ, ಹುಲಿವೇಷ, ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತ ಹಾಗೂ ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳು, ಸ್ವಾತಂತ್ರೃ ಹೋರಾಟಗಾರರು ಮತ್ತು ಪರಿಸರ ಸಂರಕ್ಷಣೆಯಂತಹ ವಿಷಯಗಳನ್ನೊಳಗೊಂಡ ವಿವಿಧ ವೇಷಭೂಷಣದೊಂದಿಗೆ ಹಾದಿಹೋಕರನ್ನು ಆಕರ್ಷಿಸಿದರು.

ಜತೆಗೆ, ಜಿಲ್ಲೆಯ ಹಲವು ತಾಲೂಕು ಮಕ್ಕಳು ವಿಭಿನ್ನ ಜಾನಪದ ಕಲೆಯನ್ನು ಪ್ರತಿಬಿಂಬಿಸಿದರು. ಎಚ್.ಡಿ.ಕೋಟೆಯಿಂದ ಸೋಲಿಗರ ಹಾಡಿ ಮಕ್ಕಳ ಕುಣಿತ, ಮೈಸೂರು ತಾಲೂಕಿನಿಂದ ವೀರಗಾಸೆ, ಮೈಸೂರು ದಕ್ಷಿಣದಿಂದ ಯಕ್ಷಗಾನ, ಹುಣಸೂರಿನಿಂದ ಪೂಜಾ ಕುಣಿತ, ಕೆ.ಆರ್.ನಗರದಿಂದ ಹುಲಿ ವೇಷ, ಮೈಸೂರು ಉತ್ತರ ತಾಲೂಕಿನಿಂದ ಸೂಫಿ ನೃತ್ಯ, ನಂಜನಗೂಡಿನಿಂದ ಗಾರುಡಿ ಗೊಂಬೆ, ಪಿರಿಯಾಪಟ್ಟಣದಿಂದ ಡೊಳ್ಳು ಕುಣಿತ, ತಿ.ನರಸೀಪುರದಿಂದ ಚರ್ಮ ವಾದ್ಯ ವಿಶೇಷ ಎನಿಸಿತು.

ಮೆರವಣಿಗೆಯಲ್ಲಿ ಒನಕೆ ಓಬವ್ವ, ಝಾನ್ಸಿ ಲಕ್ಷ್ಮೀ ಬಾಯಿ ವೇಷ ತೊಟ್ಟ ಮಕ್ಕಳು ಸಾಗುವ ಮೂಲಕ ಗಮನ ಸೆಳೆದರು. ಮೆರವಣಿಗೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಶಿಸ್ತುಬದ್ಧರಾಗಿ ಸಾಗಿದರು.

ನಾಡದೇವತೆ ತಾಯಿ ಚಾಮುಂಡೇಶ್ವರಿ ಭಾವಚಿತ್ರವಿರುವ ರಥ ಮೆರವಣಿಗೆ ಹಿಂದೆ ಸಾಗಿತು. ಬಾಲ ವಿಜ್ಞಾನಿ ಆರ್.ರಕ್ಷಿತ ಸೇರಿದಂತೆ ಶೈಕ್ಷಣಿಕವಾಗಿ ಸಾಧನೆ ಮಾಡಿರುವ ಕೆಲವು ವಿದ್ಯಾರ್ಥಿಗಳು ರಥದಲ್ಲಿ ಸಾಗಿದರು. ಮೆರವಣಿಗೆಯು ಚಾಮರಾಜ ಒಡೆಯರ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಕೆ.ಆರ್.ವೃತ್ತ, ದೇವರಾಜ ಅರಸ ರಸ್ತೆ, ಜೆಎಲ್‌ಬಿ ರಸ್ತೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ, ವಿನೋಭಾ ರಸ್ತೆ ಮೂಲಕ ಕಲಾಮಂದಿರ ತಲುಪಿತು.

ಮಕ್ಕಳ ಕಲಾಥಾನ್ ಗೆ ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಸೇರಿದಂತೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net