

ಮಂಜುನಾಥ ಟಿ.ಭೋವಿ ಮೈಸೂರು
ಬೆಳಕಿನ ಚಿತ್ತಾರದಿಂದ ಪಾರಂಪರಿಕ ನಗರಿ ಮೈಸೂರು ಮಿಂದೇಳುವಂತೆ ಮಾಡುವ ದಸರಾ ದೀಪಾಲಂಕಾರ ಈ ಸಲ ವಿಶಿಷ್ಟವಾಗಿರಲಿದೆ. ಇದಕ್ಕೆ ನಾವೀನ್ಯದ ಸ್ಪರ್ಶ ನೀಡುವ ಮೂಲಕ ಇನ್ನಷ್ಟು ಆಕರ್ಷಣೀಯಗೊಳಿಸಲಾಗುತ್ತಿದೆ.
ಇದೇ ಮೊದಲ ಬಾರಿಗೆ ಲೇಸರ್ ಬೆಳಕಿನ ಮೂಲಕ ಅಲಂಕಾರ ಮಾಡಲಾಗುತ್ತಿದೆ. ಇದರಿಂದ ಸಾಂಸ್ಕೃತಿಕ ನಗರಿ ನಕ್ಷತ್ರದಂತೆ ಮಿನುಗಲಿದೆ. ಕೋವಿಡ್ ಸಂಕ್ರಮಣದ ಕಾರಣಕ್ಕೆ ಕಳೆದ ಎರಡು ವರ್ಷ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸರಳವಾಗಿ ನಡೆಯಿತು. ಆದರೆ, ದೀಪಾಲಂಕಾರ ಮಾತ್ರ ಅದ್ದೂರಿ ಇತ್ತು. ಇಡೀ ನಗರ ಝಗಮಗಿಸುತ್ತಿತ್ತು. ದೀಪಗಳ ಅಂದ-ಚಂದವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ಮುಗಿಬೀಳುತ್ತಿದ್ದರು. ಇದೀಗ ಕರೊನಾ ಕಾರ್ಮೋಡ ಕರಗಿರುವುದರಿಂದ ಈ ಸಲದ ದಸರಾವನ್ನು ಅದ್ದೂರಿ ಆಚರಣೆ ಮಾಡಲಾಗುತ್ತದೆ. ಅಂದ್ಮೇಲೆ ದಸರಾ ದೀಪಾಲಂಕಾರ ಕೂಡ ಇನ್ನಷ್ಟು ಭರ್ಜರಿಯಾಗಿಯೇ ಇರಲಿದೆ. ಅದಕ್ಕಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ಸಿದ್ಧತೆ ಮಾಡಿಕೊಳ್ಳುತ್ತಿದೆ.
1,31,805 ಯೂನಿಟ್ ಬೇಕು:
ಕಳೆದ ವರ್ಷದಂತೆ ಈ ಬಾರಿಯೂ ವಿದ್ಯುತ್ ಮಿತಿ ಬಳಕೆಯ, ಪರಿಸರ ಸ್ನೇಹಿ ಎಲ್‌ಇಡಿ ಬಲ್ಬ್ ಬಳಸಿ ಆಕರ್ಷಕ ದೀಪಾಲಂಕಾರ ಮಾಡಲು ಸೆಸ್ಕ್ ತಯಾರಿ ಮಾಡಿಕೊಳ್ಳುತ್ತಿದೆ. ಈ ಹಿಂದೆ ಉಪಯೋಗಿಸುತ್ತಿದ್ದ ಬುರುಡೆ ಬಲ್ಬ್‌ಗೆ ಬದಲಾಗಿ ಪ್ರಸ್ತುತ ಉಪಯೋಗಿಸುತ್ತಿರುವ ಎಲ್‌ಇಡಿ ಬಲ್ಬ್ ಬಳಕೆಯನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ವಿದ್ಯುತ್ ಉಳಿತಾಯಕ್ಕೆ ಯೋಜನೆ ರೂಪಿಸಲಾಗಿದೆ.
2019ರಲ್ಲಿ 1,07,550 ಯೂನಿಟ್ ಬಳಕೆಯಾಗಿದ್ದರೆ, ಎಲ್‌ಇಡಿ ಬಳಕೆ ಶುರು ಮಾಡಿದ್ದರಿಂದ 2020ರಲ್ಲಿ 88,605 ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. 2021ರಲ್ಲಿ 1,35,000 ಯೂನಿಟ್ ಬಳಕೆಯಾಗಿತ್ತು. ದೀಪಾಲಂಕಾರದ ವ್ಯಾಪ್ತಿ ಪ್ರದೇಶ ವಿಸ್ತಾರವಾದರೂ ವಿದ್ಯುತ್ ಬಳಕೆ ಪ್ರಮಾಣ ಕಳೆದ ಸಲಕ್ಕಿಂತ ಕಡಿಮೆಯಾಗಿದೆ. ಈ ಬಾರಿ 1,31,805 ಯೂನಿಟ್ ಬೇಡಿಕೆ ಇದೆ.
124 ಕಿ.ಮೀ. ದೀಪಾಲಂಕಾರ:
ಪ್ರತಿ ವರ್ಷದಂತೆ ಅರಮನೆಯ ಸುತ್ತಲಿನ ಪ್ರಮುಖ ರಸ್ತೆಗಳು, ರಾಜಮಾರ್ಗ, ಚಾಮರಾಜ ಜೋಡಿ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಅಲ್ಲದೆ ಹೆಚ್ಚುವರಿಯಾಗಿ ನಗರದ ಪ್ರಮುಖ ಪ್ರದೇಶಗಳ ರಸ್ತೆಗಳು, ಬೆಂಗಳೂರು-ಮೈಸೂರು ರಸ್ತೆಯ ಮಣಿಪಾಲ ಆಸ್ಪತ್ರೆ ವೃತ್ತದಿಂದ ಮಿಲೇನಿಯಂ ವೃತ್ತದವರೆಗೆ, ಹುಣಸೂರು ರಸ್ತೆ, ಬನ್ನೂರು ರಸ್ತೆ, ನಂಜನಗೂಡು ರಸ್ತೆ, ಮೈಸೂರು ನಗರದ ಇತರ ಪ್ರಮುಖ ರಸ್ತೆಗಳು ಸೇರಿದಂತೆ 127 ರಸ್ತೆಗಳಿಗೆ ದೀಪಾಲಂಕಾರ ಮಾಡಲು ಉದ್ದೇಶಿಸಲಾಗಿದೆ. ಕಳೆದ ಸಲ ಸರಳ ದಸರಾದಲ್ಲೇ 113 ಕಿ.ಮೀ. ಉದ್ದ ದೀಪಾಲಂಕಾರ ಮಾಡಲಾಗಿತ್ತು. ಪ್ರಸ್ತುತ ಅದ್ದೂರಿ ದಸರಾದಲ್ಲಿ ಇದು ಇನ್ನಷ್ಟು ವಿಸ್ತಾರವಾಗಿದೆ. 124 ಕಿ.ಮೀ. ಉದ್ದ ರಸ್ತೆಗಳು ದೀಪಗಳಿಂದ ಬೆಳಗಲಿವೆ. ಸ
89 ವೃತ್ತಗಳಿಗೆ ಬೆಳಕಿನ ಸಿಂಗಾರ:
ನಗರದ ಪ್ರಮುಖ ವೃತ್ತಗಳಾದ ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ, ಜಯಚಾಮರಾಜ ಒಡೆಯರ್ ವೃತ್ತ, ರಾಮಸ್ವಾಮಿ ವೃತ್ತ, ಮಿಲೇನಿಯಂ ವೃತ್ತ, ಡಾ.ಅಂಬೇಡ್ಕರ್ ವೃತ್ತ, ರೈಲ್ವೆ ನಿಲ್ದಾಣದ ಎದುರಿನ ಬಾಬು ಜಗಜೀವನರಾಮ್ ವೃತ್ತ ಸೇರಿದಂತೆ 96 ವೃತ್ತಗಳಿಗೆ ಬೆಳಕಿನ ಸಿಂಗಾರ ಮಾಡಲಾಗುತ್ತದೆ. ಕಳೆದ ಬಾರಿ 89 ವೃತ್ತಗಳು ದೀಪಗಳ ಸಿಂಗಾರ ಮಾಡಲಾಗಿತ್ತು
30 ಪ್ರತಿಕೃತಿಗಳು:
ದೇಶದ ಮತ್ತು ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ದಸರಾ ಅಂಬಾರಿ, ಅಶೋಕಸ್ತಂಭ, ಇಂಡಿಯಾ ಗೇಟ್, ಕೆಆರ್‌ಎಸ್ ಅಣೆಕಟ್ಟೆ, ಹಂಪಿ ಕಲ್ಲಿನರಥ, ಪೇಜಾವರಶ್ರೀಗಳು, ಕನಕದಾಸರು, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಛೋಪ್ರಾ, ಸ್ವಾಮಿ ವಿವೇಕಾನಂದ, ವಿವಿಧ ಭಂಗಿಗಳ ಯೋಗಾಸನದ ಪ್ರತಿಕೃತಿಗಳನ್ನು ವಿದ್ಯುತ್ ದೀಪಗಳಿಂದ ನಗರದ ವಿವಿಧ ಸ್ಥಳಗಳಲ್ಲಿ ಕಳೆದ ಬಾರಿ ನಿರ್ಮಿಸಲಾಗಿತ್ತು. 28 ಪ್ರತಿಕೃತಿಗಳು ಗಮನ ಸೆಳೆದಿದ್ದವು. ಈ ಸಲವೂ ಇದೇ ರೀತಿಯ ವಿಭಿನ್ನ, ಹೊಸ ಪ್ರತಿಕೃತಿಗಳ ರಚನೆ ಉದ್ದೇಶಿಸಲಾಗಿದೆ. 30 ಪ್ರತಿಕೃತಿಗಳು ಈ ಬಾರಿ ಇರಲಿವೆ. ಅದು ಯಾರದು? ಯಾವುದರ ಪ್ರತಿಕೃತಿ ಮಾಡಬೇಕೆಂಬುದು ಇನ್ನೂ ತೀರ್ಮಾನವಾಗಬೇಕಿದೆ.
4.81 ಕೋಟಿ ರೂ. ಬಜೆಟ್:
ದಸರಾ ದೀಪಾಲಂಕಾರದ ಬಜೆಟ್ ಪ್ರತಿ ವರ್ಷ ಹೆಚ್ಚುತ್ತಿದೆ. ಅದ್ದೂರಿ ದಸರಾ ನಡೆದ 2019ರಲ್ಲಿ 4.35 ಕೋಟಿ ರೂ. ಖರ್ಚಾಗಿತ್ತು. ಸರಳ ದಸರಾ ನಡೆದ 2020 ಮತ್ತು 2021 ಕ್ರಮವಾಗಿ 3.36 ಕೋಟಿ ರೂ. ಹಾಗೂ 4.37 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಈ ಸಲ ಈ ಪ್ರಮಾಣ ಇನ್ನಷ್ಟು ಏರಿಕೆಯಾಗಿದೆ. 4.81 ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ.
ದೀಪಗಳ ದಾರಿಯಲ್ಲಿ ಸಾಗುವ ಜಂಬೂಸವಾರಿ: ಈ ಸಲ ದೀಪಾಲಂಕಾರದಲ್ಲಿ ಜಂಬೂಸವಾರಿ ಮೆರವಣಿಗೆ ಸಾಗುವ ಸಾಧ್ಯತೆ ಇದೆ. ಅಕ್ಟೋಬರ್ 5ರಂದು ಮಧ್ಯಾಹ್ನ 2.36ರಿಂದ 2.50ರ ಒಳಗೆ ಮುಖ್ಯಮಂತ್ರಿ ಅವರು ನಂದಿಧ್ವಜ ಪೂಜೆಯೊಂದಿಗೆ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡುವರು. ಸಂಜೆ 5.07ರಿಂದ 5.18ರ ಒಳಗೆ ಆನೆ ಹೊತ್ತು ಸಾಗುವ ಅಂಬಾರಿಯಲ್ಲಿ ಪ್ರತಿಷ್ಠಿತ ಚಾಮುಂಡೇಶ್ವರಿಗೆ ಸಿಎಂ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ ಅರಮನೆಯಿಂದ ಬನ್ನಿಮಂಟಪ ವರೆಗೆ 5 ಕಿಮೀ ಕ್ರಮಿಸಲು ಆನೆಗಳಿಗೆ ಒಂದೂವರೆ ತಾಸು ಆಗಲಿದೆ. ಕತ್ತಲು ಕವಿದು ಅಷ್ಟೊತ್ತಿಗೆ ಅಲಂಕೃತ ದೀಪಗಳು ಬೆಳಗಲಿವೆ. ಹೀಗಾಗಿ, ಮೊದಲ ಬಾರಿಗೆ ಅಂಬಾರಿ ಆನೆ ವರ್ಣರಂಜಿತ ದೀಪದ ದಾರಿಯಲ್ಲಿ ಸಾಗಲಿದೆ.
ಈ ಸಲದ ದಸರಾ ದೀಪಾಲಂಕಾರಕ್ಕೆ ಹೊಸ ಸ್ಪರ್ಶ ನೀಡಲಾಗುವುದು. ಲೇಸರ್ ದೀಪಾಲಂಕಾರ ಈ ಸಲದ ವಿಶೇಷ. ಜತೆಗೆ, ಮುಖ್ಯದ್ವಾರ, ವೃತ್ತ, ರಸ್ತೆಗಳು ದೀಪಗಳಿಂದ ಸಿಂಗಾರ ಮಾಡಿ ಪ್ರವಾಸಿಗರನ್ನು ಆಕರ್ಷಿಸಲಾಗುವುದು.ಜಯವಿಭವಸ್ವಾಮಿ, ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್ (ದಸರಾ ದೀಪಾಲಂಕಾರ ಸಮಿತಿ ವಿಶೇಷಾಧಿಕಾರಿ)
ದಸರಾ ದೀಪಾಲಂಕಾರದ ಕುರಿತು ತಯಾರಿ ನಡೆದಿದೆ. ಕ್ರಿಯಾಯೋಜನೆ ರೂಪಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ಅಂತಿಮವಾಗಲಿದೆ.ಎಸ್.ನಾಗೇಶ್, ಅಧೀಕ್ಷಕ ಇಂಜಿನಿಯರ್, ಸೆಸ್ಕ್(ದಸರಾ ದೀಪಾಲಂಕಾರ ಸಮಿತಿ ಕಾರ್ಯಾಧ್ಯಕ್ಷ)