

ಮೈಸೂರು: ವರ್ಗಾವಣೆ ಕ್ರಮವನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರಾತ್ರಿಯಿಡೀ ಪ್ರತಿಭಟನೆ ನಡೆಸಿದ ಮಹಿಳೆಯನ್ನು ಭಾನುವಾರ ಸಂಜೆ ಬಂಧಿಸಲಾಗಿದೆ.
ಶನಿವಾರ ರಾತ್ರಿಯಿಂದ ಧರಣಿ ನಡೆಸುತ್ತಿದ್ದ ‘ಡಿ’ ಗ್ರೂಪ್ ನೌಕರರಾದ ಮಧು ಬಂಧಿತರು. ತನಗಾದ ಅನ್ಯಾಯದ ವಿರುದ್ಧ ಧರಣಿ ನಡೆಸುತ್ತಿದ್ದ ಇವರ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
‘ನನ್ನ ಪತಿ ಸುರೇಶ್ ಕಂದಾಯ ಇಲಾಖೆ ನೌಕರರಾಗಿದ್ದರು. 6 ವರ್ಷಗಳ ಹಿಂದೆ ಅವರು ಮೃತಪಟ್ಟಿದ್ದು, ಅನುಕಂಪದ ಆಧಾರದ ಮೇಲೆ ನನಗೆ ಡಿ ಗ್ರೂಪ್ ನೌಕರಿ ನೀಡಲಾಗಿದೆ. ಮೊದಲಿಗೆ ಬೆಂಗಳೂರಿನ ಕೆ.ಆರ್.ಪುರಂನ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾನು, ನಂತರ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದೆ. ಈ ನಡುವೆ, ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು, ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ ಮೈಸೂರು ಡಿಸಿ ಕಚೇರಿ, ನಂಜನಗೂಡು ತಾಲೂಕು ಕಚೇರಿ, ಚಿಕ್ಕಯ್ಯನಛತ್ರ ನಾಡಕಚೇರಿ ಹಾಗೂ ಸಿದ್ಧಾರ್ಥನಗರದ ನೂತನ ಡಿಸಿ ಕಚೇರಿಗೆ ನಿಯೋಜಿಸಲಾಗಿದೆ. ಇದೀಗ ಮತ್ತೆ ನಂಜನಗೂಡು ತಾಲೂಕು ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ತೊಂದರೆ ಕೊಡಲಾಗುತ್ತಿದೆ’ ಎಂದು ಮಹಿಳೆ ಆರೋಪಿಸಿದ್ದಾರೆ.