

ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಬುಧವಾರ ನಿರ್ವಿಘ್ನ ಹಾಗೂ ಶಾಂತವಾಗಿ ನೆರವೇರಿತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ವಿ.ಸೋಮಣ್ಣ, ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ತನ್ವೀರ್ ಸೇಠ್ ಸೇರಿದಂತೆ 143 ಅಭ್ಯರ್ಥಿಗಳ ಹಣೆಬರಹ ಮತಯಂತ್ರದಲ್ಲಿ ಭದ್ರವಾಗಿದೆ. ಮೇ 13ರಂದು ನಡೆಯುವ ಮತ ಎಣಿಕೆಯಲ್ಲಿ ಇವರ ಭವಿಷ್ಯ ಹೊರಬೀಳಲಿದೆ.
ಜಿಲ್ಲೆಯ 11 ಕ್ಷೇತ್ರಗಳಲ್ಲಿ 2,905 ಮತಗಟ್ಟೆ ಸ್ಥಾಪಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅರೆಸೇನಾ ಪಡೆ ಮತ್ತು ಪೊಲೀಸರ ಭದ್ರತೆಯ ನೆರಳಿನಲ್ಲಿ ಸುಸೂತ್ರವಾಗಿ ವೋಟಿಂಗ್ ಜರುಗಿತು. ಮತದಾನವನ್ನು ಯಶಸ್ವಿಗೊಳಿಸಲು 13 ಸಾವಿರ ಸರ್ಕಾರಿ ಸಿಬ್ಬಂದಿ ಶ್ರಮಿಸಿದರು.
ಬೆಳಗ್ಗೆ 7ಕ್ಕೆ ಪ್ರಾರಂಭವಾದ ಮತದಾನ ಮೊದಲು ನೀರಸವಾಗಿ ಸಾಗಿತು. ಬೆಳಗ್ಗೆ 10ರ ಬಳಿಕ ಬಿರುಸುಗೊಂಡು ಮಧ್ಯಾಹ್ನದ ಹೊತ್ತಿಗೆ ಚುರುಕುಗೊಂಡಿತು. ಗ್ರಾಮಾಂತರ ಪ್ರದೇಶದಲ್ಲಿ ಮತದಾನ ತುರಿಸಿನಿಂದ ಕೂಡಿದ್ದರೆ, ನಗರ ಪ್ರದೇಶದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರಜ್ಞಾವಂತರಿಗಿಂತ ಹಳ್ಳಿಯ ಅನಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಜ್ಞಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಿದರು.
ಪ್ರತಿ ಮತಗಟ್ಟೆಯಲ್ಲೂ ಮತದಾರರು ಸರತಿಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮತಗಟ್ಟೆಗಳಲ್ಲಿ ಪ್ರಜಾಪ್ರಭುತ್ವ ಹಬ್ಬದ ಸಡಗರ ಮೇಳೈಸಿತ್ತು.
ಮತದಾರರು ಮಧ್ಯಾಹ್ನದ ಬಿಸಿಲನ್ನೂ ಸಹಿಸಿಕೊಂಡು ಮತದಾನ ಮಾಡಿದರು. ಮೂರ‌್ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿದಿದ್ದರೂ ಬುಧವಾರ ಬಿಸಿಲಿನ ತಾಪ ತುಸು ಏರಿಕೆಯಾಗಿತ್ತು. ಬಹುತೇಕ ಮತಗಟ್ಟೆಗಳಲ್ಲಿ ಸರತಿ ಸಾಲು ಕಂಡುಬಂದಿತು.
ಮತಗಟ್ಟೆ ಕೇಂದ್ರ ಸಮೀಪದಲ್ಲಿ ಮುಖಂಡರಿಂದ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವೊಲಿಸುವ ಅಂತಿಮ ಹಂತದ ಯತ್ನ ಕಂಡುಬಂತು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಗುಂಪು ಗುಂಪಾಗಿ ಮತದಾರರ ಮನವೊಲಿಸಿದರು. ಉಳಿದಂತೆ ಇತರ ಅಭ್ಯರ್ಥಿಗಳು, ಅವರ ಕಾರ್ಯಕರ್ತರೂ ಅಷ್ಟಾಗಿ ಕಾಣಲಿಲ್ಲ.
ಜಿಲ್ಲಾಡಳಿತದಿಂದ ಮತದಾನದ ಚೀಟಿಯನ್ನು ಮೊದಲೇ ನೀಡಿದ್ದರಿಂದ ನಿಗದಿತ ಮತಗಟ್ಟೆಗೆ ಬಂದ ಸಾರ್ವಜನಿಕರು ತಮ್ಮ ಜವಾಬ್ದಾರಿ ನಿರ್ವಹಿಸಿದರು. ತಪ್ಪಾದ ಕೇಂದ್ರಕ್ಕೆ ಬಂದವರಿಗೆ ಸ್ವಯಂ ಸೇವಕರು ಸೂಕ್ತ ಮಾರ್ಗದರ್ಶನ ನೀಡಿದರು.