

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಒಂದಾಗಿರುವ ‘ಯುವ ನಿಧಿ’ ಯೋಜನೆಗೆ ನೋಂದಣಿ ಆಗಲು ಪದವೀಧರರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ...!
ಅರಿವು ಮೂಡಿಸುವ ಕೆಲಸ, ಪ್ರಚಾರದ ಬಳಿಕವೂ ಈ ಯೋಜನೆಯ ಲಾಭ ಪಡೆದುಕೊಳ್ಳಲು ಯುವಜನರು ನಿರಾಸಕ್ತಿ ತೋರುತ್ತಿದ್ದು, ಇದು ಚಿಂತಿಗೀಡು ಮಾಡಿದೆ.
ಜಿಲ್ಲೆಯಲ್ಲಿ ಯುವ ನಿಧಿಗಳ ಫಲಾನುಭವಿಗಳ ಸಂಖ್ಯೆ 6,948 ಆಗಿದೆ. ಈ ಪೈಕಿ ಸ್ನಾತಕ ಪದವೀಧರರ ಸಂಖ್ಯೆಯೇ ಅಧಿಕ. ಬಿ.ಎ., ಬಿ.ಕಾಂ, ಬಿ.ಎಸ್ಸಿಯಂತಹ ಸ್ನಾತಕ ಪದವಿ ಪೂರೈಸಿರುವ ಸಂಖ್ಯೆಯೇ 6819ರಷ್ಟಾಗಿದೆ. ಡಿಪ್ಲೊಮಾದವರ ಸಂಖ್ಯೆ ಬರೀ 129 ಮಾತ್ರ ಆಗಿದೆ.
ಉಳಿದ ಗ್ಯಾರಂಟಿಯಂತಿಲ್ಲ ಉತ್ಸಾಹ
ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆಯ ಲಾಭ ಪಡೆದುಕೊಳ್ಳಲು ಫಲಾನುಭವಿಗಳು ಮುಗಿಬೀಳುತ್ತಿದ್ದಾರೆ. ಆದರೆ, ಯುವ ನಿಧಿ ಯೋಜನೆ ವಿಷಯದಲ್ಲಿ ಮಾತ್ರ ವ್ಯತರಿಕ್ತ ಪರಿಸ್ಥಿತಿ ಇದೆ. ಯುವನಿಧಿ ಸೌಲಭ್ಯ ಪಡೆದುಕೊಳ್ಳಲು ಯುವಜನರು ಮುಂದೆ ಬರುತ್ತಿಲ್ಲ. ಈ ಯೋಜನೆ ಲಾಭ ಪಡೆಯುವುದಕ್ಕಿಂತ ಉನ್ನತ ಶಿಕ್ಷಣ ಮತ್ತು ಉದ್ಯೋಗ ಸೇರ್ಪಡೆ ಕಡೆ ಹೆಚ್ಚಿನ ಒಲವು ತೊರುತ್ತಿರುವುದೇ ಇದಕ್ಕೆ ಕಾರಣ. ಇದು ಸಹ ಉತ್ತಮ ಬೆಳವಣಿಗೆಯೇ ಆಗಿದೆ.
ಬ್ಯಾಂಕ್ ಖಾತೆಗೆ ಹಣ ಜಮಾ:
ಈ ಯೋಜನೆಯಡಿ ನಿರುದ್ಯೋಗಿ ಪದವೀಧರ ಹಾಗೂ ಡಿಪ್ಲೊಮಾ ಪದವೀಧರರಿಗೆ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷದವರೆಗೆ ಪ್ರತಿ ತಿಂಗಳು ಸರ್ಕಾರವು ಭತ್ಯೆ ನೀಡುತ್ತದೆ. ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ. ನೀಡಿದರೆ, ಡಿಪ್ಲೊಮಾ ಪದವೀಧರರಿಗೆ 1,500 ರೂ. ನೀಡಲಾಗುತ್ತದೆ.
2023ರಲ್ಲಿ ಪದವಿ, ಡಿಪ್ಲೊಮಾ ಉತ್ತೀರ್ಣರಾಗಿ 180 ದಿನಗಳಾದರೂ ಉದ್ಯೋಗ ಸಿಗದೆ ನಿರುದ್ಯೋಗಿಯಾಗಿರುವವರು ಈ ಯೋಜನೆಗೆ ಅರ್ಹರು. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣಪತ್ರಗಳು ಹಾಗೂ ರೇಷನ್ ಕಾರ್ಡ್ ಅಗತ್ಯವಾಗಿದ್ದು, ಅರ್ಜಿಯನ್ನು ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಸೇವಾಸಿಂಧು ಪೋರ್ಟಲ್‌ನಲ್ಲಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಯೋಜನೆಯ ಹಣವನ್ನು ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ನಿರುದ್ಯೋಗ ಕುರಿತು ಸ್ವಯಂಘೋಷಣೆ ಕಡ್ಡಾಯ
ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರಿಗೆ ಈ ಹಣ ದೊರೆಯುವುದಿಲ್ಲ. ಅಲ್ಲದೆ ಅಪ್ರೆಂಟಿಸ್ ಹುದ್ದೆಯಲ್ಲಿರುವವರಿಗೂ ಈ ಯೋಜನೆಯ ಲಾಭ ಸಿಗುವುದಿಲ್ಲ. ಯೋಜನೆಗೆ ಅರ್ಜಿ ಸಲ್ಲಿಸುವವರು ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಇದ್ದರೂ ಯುವನಿಧಿ ಯೋಜನೆ ಲಾಭವನ್ನು ಮುಂದುವರಿಸಿಕೊಂಡು ಹೋದರೆ ದಂಡ ವಿಧಿಸಲಾಗುತ್ತದೆ.
ಈ ಕಾರಣಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾವು ನಿರುದ್ಯೋಗಿಗಳೆಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಇನ್ನು ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಜತೆಗೆ ತಾವು ಉತ್ತರಿಸಿದ ದಿನಾಂಕದಿಂದ 6 ತಿಂಗಳ ತಮ್ಮ ಅಧಿಕೃತ ಬ್ಯಾಂಕ್ ಖಾತೆಯ ವಹಿವಾಟು ಸ್ಟೇಟ್‌ಮೆಂಟ್ ಪ್ರತಿಯನ್ನು ಸಲ್ಲಿಸಬೇಕು. ಒಂದು ವೇಳೆ ಬ್ಯಾಂಕ್‌ಗೆ ಪ್ರತಿ ಸಲ್ಲಿಸದಿದ್ದರೆ ಅರ್ಜಿ ತಿರಸ್ಕಾರವಾಗುತ್ತದೆ.
ಯುವನಿಧಿ ಯೋಜನೆ ಪಡೆಯುತ್ತಿರುವ ಅಭ್ಯರ್ಥಿಗಳು ಪ್ರತಿ ತಿಂಗಳು 25ನೇ ತಾರೀಕಿನಂದು ಸ್ವಯಂ ಘೋಷಣೆ ಮಾಡಿಕೊಳ್ಳುವುದು ಕಡ್ಡಾಯ. ಸ್ವಯಂ ಘೋಷಣೆ ಮಾಡದೆ ಇರುವ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆಯಾಗುವುದಿಲ್ಲ. ಅನರ್ಹರು ಯೋಜನೆಯೊಳಗೆ ನುಸುಳಿ ಲಾಭ ಪಡೆದುಕೊಳ್ಳದಂತೆ ಹೀಗೆ ಕಡಿವಾಣ ಹಾಕಲಾಗಿದೆ. ಇದು ಸಹ ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಆಗದಿರುವುದಕ್ಕೆ ಮುಖ್ಯ ಕಾರಣವಾಗಿದೆ.
ಇನ್ನೂ ಹೆಚ್ಚಾಗಲಿ ಪ್ರಚಾರ:
ಯುವ ನಿಧಿ ಯೋಜನೆ ನೋಂದಣಿ ಬಗ್ಗೆ ಅಭ್ಯರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ವ್ಯಾಪಕವಾಗಿ ಆಗಬೇಕಿದೆ. ಜಿಲ್ಲೆಯ ಎಲ್ಲ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಸಂಸ್ಥೆಯಲ್ಲಿ 2023ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ಪಡೆದ ವಿದ್ಯಾರ್ಥಿಗಳಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಬೇಕಿದೆ. ಈ ಮೂಲಕ ಹೆಚ್ಚಿನ ಸಂಖ್ಯೆಯ ಯುವಜನತೆಗೆ ಇದರ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಪ್ರಥಮ ದರ್ಜೆ ಕಾಲೇಜು, ಡಿಪ್ಲೊಮಾ ಕಾಲೇಜುಗಳಲ್ಲಿ ಹೆಚ್ಚಿನ ಪ್ರಚಾರವನ್ನೂ ಕೈಗೊಂಡು ತಿಳಿವಳಿಕೆ ನೀಡುವ ಕೆಲಸವೂ ಆಗಬೇಕಿದೆ.
ಇಲ್ಲಿ ಮಹಿಳೆಯರದ್ದೇ ಪಾರುಪತ್ಯ:
ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳಲ್ಲಿ ಮಹಿಳೆಯರೇ ಅಧಿಕ. ಯುವ ನಿಧಿ ಯೋಜನೆಯ ಲಾಭ ಪಡೆಯುವಲ್ಲಿಯೂ ಮಹಿಳೆಯರ ಪಾರುಪತ್ಯವೇ ಮುಂದುವರಿದಿದ್ದು, ಇವರ ಸಂಖ್ಯೆ 3,717ರಷ್ಟಿದೆ. ಇನ್ನೂ ಪುರುಷ ಫಲಾನುಭವಿಗಳ ಸಂಖ್ಯೆ 3,231 ಆಗಿದೆ. ಮಹಿಳೆಯರಿಗೆ ಹೋಲಿಕೆ ಮಾಡಿದ ಪುರುಷರ ಸಂಖ್ಯೆ 486 ಕಡಿಮೆ ಇದೆ.
ಒಬಿಸಿಗಳದ್ದು ಸಿಂಹಪಾಲು:
ಯುವ ನಿಧಿ ಲಾಭ ಪಡೆದುಕೊಳ್ಳುವಲ್ಲಿ ಹಿಂದುಳಿದ ವರ್ಗಗಳ(ಒಬಿಸಿ) ಯುವ ಜನರ ಸಿಂಹಪಾಲು ಇದೆ. ಇವರ ಸಂಖ್ಯೆ 4,264ರಷ್ಟು ಇದೆ. 1499 ಪರಿಶಿಷ್ಟ ಜಾತಿ, 713 ಪರಿಶಿಷ್ಟ ಪಂಗಡ, 472 ಸಾಮಾನ್ಯ ಫಲಾನುಭವಿಗಳು ಯುವ ನಿಧಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಯೋಜನೆಗೆ ನೋಂದಣಿಯಾಗಿರುವ ಅರ್ಜಿಗಳ ಪರಿಶೀಲನೆ, ವಿಲೇವಾರಿ ಕೆಲಸವನ್ನು ತ್ವರಿತಗತಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನಡೆಯುತ್ತಿದೆ. ಇತ್ತೀಚೆಗೆ ಬಂದ 542 ಅರ್ಜಿಗಳಲ್ಲಿ ಪೈಕಿ 489 ಅರ್ಜಿಗಳಿಗೆ ಅನುಮೋದನೆ ದೊರೆತಿದೆ. 47 ಅರ್ಜಿಗಳು ತಿರಸ್ಕೃತಗೊಂಡಿದೆ. 6 ಅರ್ಜಿಗಳ ಬಾಕಿ ಉಳಿದಿವೆ.
ಹಿಂದೆ ಬಿದ್ದಿರುವ ಗ್ರಾಮಾಂತರ ಪ್ರದೇಶ
ಯುವ ನಿಧಿ ಯೋಜನೆ ಲಾಭ ಪಡೆದುಕೊಳ್ಳಲು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಯುವ ಜನರು ಮುಂದಾಗುತ್ತಿಲ್ಲ. ಹೀಗಾಗಿ, ಗ್ರಾಮಾಂತರ ತಾಲೂಕುಗಳ ಫಲಾನುಭವಿಗಳ ಸಂಖ್ಯೆ ನಾಲ್ಕಂಕಿ ದಾಟಿಲ್ಲ. ಸರಗೂರು, ಸಾಲಿಗ್ರಾಮ ತಾಲೂಕಿನಲ್ಲಿ 150 ಸಂಖ್ಯೆಯನ್ನೂ ಮಿರಿಲ್ಲ. ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ನಂಜನಗೂಡು, ಪಿರಿಯಾಪಟ್ಟಣ, ತಿ.ನರಸೀಪುರ ತಾಲೂಕಿನಲ್ಲಿ ಫಲಾನುಭವಿಗಳ ಸಂಖ್ಯೆ 800 ಗಡಿ ಸಹ ದಾಟಿಲ್ಲ. ಮೈಸೂರು ತಾಲೂಕು ಮಾತ್ರ ಮುಂಚೂಣಿಯಲ್ಲಿ ಇದೆ.
ಯುವ ನಿಧಿ ಯೋಜನೆ ಫಲಾನುಭವಿಗಳ ಪಟ್ಟಿ
ಎಚ್.ಡಿ.ಕೋಟೆ 489
ಹುಣಸೂರು 658
ಕೆ.ಆರ್.ನಗರ 533
ಮೈಸೂರು 2907
ನಂಜನಗೂಡು 767
ಪಿರಿಯಾಪಟ್ಟಣ 587
ಸಾಲಿಗ್ರಾಮ 150
ತಿ.ನರಸೀಪುರ 738
ಸರಗೂರು 119
ಒಟ್ಟು 6948
ಜಾತಿವಾರು ಫಲಾನುಭವಿಗಳ ಪಟ್ಟಿ
ಪರಿಶಿಷ್ಟ ಜಾತಿ 1499
ಪರಿಶಿಷ್ಟ ಪಂಗಡ 713
ಒಬಿಸಿ 4264
ವಿದ್ಯಾವಾರು ಅಭ್ಯರ್ಥಿಗಳ ಪಟ್ಟಿ
ಪದವಿ 6819
ಡಿಪ್ಲೊಮಾ 129
ಯುವ ನಿಧಿ ಯೋಜನೆ ಕುರಿತು ಜಾಗೃತಿ, ಪ್ರಚಾರ ಸಹ ಮಾಡಲಾಗುತ್ತಿದೆ. ಈ ಮೂಲಕ ಯುವ ಜನರನ್ನು ಯೋಜನೆಯತ್ತ ಆಕರ್ಷಿಸಲಾಗುತ್ತಿದೆ. ಕೆಲಸ ಮತ್ತು ಉನ್ನತ ಶಿಕ್ಷಣ ಸೇರ್ಪಡೆಯಿಂದ ಈ ಯೋಜನೆಗೆ ಯುವ ಜನರು ನೋಂದಣಿ ಮಾಡಿಕೊಳ್ಳುತ್ತಿಲ್ಲ. ಡಿ.ಎಂ.ರಾಣಿ, ಸಹಾಯಕ ನಿರ್ದೇಶಕಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ