

ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹೊರೆ ಇಳಿಕೆಯಾಗಿದೆಯೇ..?
ಈ ಪ್ರಶ್ನೆಗೆ ಉತ್ತರ ಹುಡುಕಲು ಹೋದರೆ ನಿರಾಶೆಯಾಗುತ್ತದೆ. ಭಾರದ ಬ್ಯಾಗ್ ಹೊತ್ತು ಶಾಲೆಗಳಿಗೆ ಹೋಗುವ ಮಕ್ಕಳನ್ನು ಗಮನಿಸಿದರೆ ಇಲ್ಲ ಎಂಬ ಉತ್ತರ ಸಿಗುತ್ತದೆ. ಬ್ಯಾಗ್ ಹೊರೆ ಇಳಿಸುವ ಬಗ್ಗೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಜಿಲ್ಲೆಯಲ್ಲಿ ಎಲ್ಲಿಯೂ ಪಾಲನೆಯಾಗುತ್ತಿಲ್ಲ...!
ಸರ್ಕಾರಿ ಶಾಲಾ ಮಕ್ಕಳು ಬ್ಯಾಗ್‌ನ ಭಾರ ಕೊಂಚ ಕಡಿಮೆ ಇದೆ. ಐಸಿಎಸ್‌ಇ ಮತ್ತು ಸಿಬಿಎಸ್‌ಇ ಪಠ್ಯಕ್ರಮಗಳ ಬೋಧನೆ ಮಾಡುವ ಬಹುತೇಕ ಖಾಸಗಿ ಶಾಲೆಯಗಳಲ್ಲಿ ಪುಸ್ತಕ ಚೀಲದ ಭಾರ ಅತಿಹೆಚ್ಚಿದೆ.
ಜಿಲ್ಲೆಯಲ್ಲಿ 3,446 ಶಾಲೆಗಳಲ್ಲಿ ಅಂದಾಜು 4.21 ಲಕ್ಷ ಮಕ್ಕಳು 1ರಿಂದ 10ನೇ ತರಗತಿವರೆಗೆ ಓದುತ್ತಿದ್ದಾರೆ. 2112 ಸರ್ಕಾರಿ, 114 ಸಮಾಜ ಕಲ್ಯಾಣ ಮತ್ತು ಗಿರಿಜನ ಇಲಾಖೆ, 267 ಅನುದಾನಿತ, 927 ಅನುದಾನ ರಹಿತ, 16 ಕೇಂದ್ರ ಸರ್ಕಾರದ (ಕೇಂದ್ರೀಯ ವಿದ್ಯಾಲಯ, ನವೋದಯ, ಟಿಬೆಟೀಯನ್ ಶಾಲೆ) ಶಾಲೆಗಳಿವೆ. ಈ ಪೈಕಿ ಅನುದಾನ ರಹಿತ ಖಾಸಗಿ ಶಾಲೆಯಲ್ಲೇ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಓದುತ್ತಿದ್ದಾರೆ. ಇಲ್ಲಿ ಮಕ್ಕಳ ಸಂಖ್ಯೆ ಸುಮಾರು 2.06 ಲಕ್ಷ ಇದೆ.
ಕವಡೆ ಕಾಸಿನ ಕಿಮ್ಮತ್ತೂ ಇಲ್ಲ: ಶಿಕ್ಷಣ ಇಲಾಖೆ ಆದೇಶದಂತೆ 1ರಿಂದ 2ನೇ ತರಗತಿಯ ಮಕ್ಕಳಿಗೆ 1.5ರಿಂದ 2 ಕೆಜಿ, 3ರಿಂದ 5ನೇ ತರಗತಿ ಮಕ್ಕಳಿಗೆ 2ರಿಂದ 3 ಕೆಜಿ, 6ರಿಂದ 8ನೇ ತರಗತಿ ಮಕ್ಕಳಿಗೆ 3ರಿಂದ 4 ಕೆಜಿ ಹಾಗೂ 9ರಿಂದ 10ನೇ ತರಗತಿಯ ಮಕ್ಕಳಿಗೆ 4ರಿಂದ 5 ಕೆಜಿವರೆಗೆ ಬ್ಯಾಗ್ ತೂಕ ನಿಗದಿಪಡಿಸಲಾಗಿದೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ. ಆದರೆ, ಇದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ.
ವಿದ್ಯಾರ್ಥಿಗಳಿಗೆ ಭಾಷೆ, ಗಣಿತ, ಪರಿಸರ ವಿಜ್ಞಾನ ವಿಷಯ ಹೊರತುಪಡಿಸಿ ಮತ್ಯಾವುದೇ ಪಠ್ಯಕ್ರಮ ನಿಗದಿಪಡಿಸಬಾರದು. ಆದರೆ, ಕಂಪ್ಯೂಟರ್, ಸಾಮಾನ್ಯ ಜ್ಞಾನ ಸೇರಿದಂತೆ ಇನ್ನಿತರ ಪುಸ್ತಕಗಳು ಬ್ಯಾಗ್‌ನೊಳಗೆ ಸೇರಿಕೊಂಡಿವೆ. ಶಬ್ದಕೋಶ, ಸಮಾನಾರ್ಥಕ ಪದಕೋಶ, ಅಟ್ಲಾಸ್, ಜ್ಞಾನ-ವಿಜ್ಞಾನ ಕೋಶಗಳಂತಹ ಪರಾಮರ್ಶ ಸಾಮಗ್ರಿಗಳು ಮಕ್ಕಳು ಈಗಲೂ ತೆಗೆದುಕೊಂಡು ಹೋಗುತ್ತಿದ್ದಾರೆ. ಇವುಗಳನ್ನು ಶಾಲೆಯಲ್ಲೇ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯ ಮಾಡಿಲ್ಲ.
ಶಿಕ್ಷಣದ ಬುನಾದಿ ಹಂತವಾಗಿರುವ 1, 2ನೇ ಕ್ಲಾಸ್‌ನ ವಿದ್ಯಾರ್ಥಿಗಳು ಸಕ್ರಿಯವಾಗಿ ಶಾಲೆಗಳಲ್ಲೇ ಚಟುವಟಿಕೆ ಮೂಲಕ ಕಲಿಯಲು ಆದ್ಯತೆ ನೀಡಬೇಕು. ಈ ವಿದ್ಯಾರ್ಥಿಗಳಿಗೆ ಹೋಮ್‌ವರ್ಕ್ ನೀಡಬಾರದು ಎಂದು ಇಲಾಖೆ ಸೂಚನೆಯನ್ನೂ ಉಲ್ಲಂಘಿಸಲಾಗುತ್ತಿದೆ. 3ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲಿಕಾ ಬಲವರ್ಧನೆ ಚಟುವಟಿಕೆಗಳನ್ನು ಶಾಲೆಗಳಲ್ಲೇ ನಿರ್ವಹಿಸಬೇಕು. ಅಗತ್ಯವಿರುವ ಹಾಗೂ ಪೂರಕವಾಗಿರುವಂತಹ ಚಟುವಟಿಕೆಗಳಿಗೆ ಸೀಮಿತ ಪ್ರಮಾಣದಲ್ಲಿ ಹೋಮ್‌ವರ್ಕ್ ನೀಡಬೇಕು. ಈ ಯಾವ ಸೂಚನೆಗಳೂ ಪಾಲನೆಯಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪುಸ್ತಕಗಳನ್ನು ತರುವುದನ್ನು ತಪ್ಪಿಸಲು ರೂಪಿಸುವ ವೇಳಾಪಟ್ಟಿ ಏನೂ ಪ್ರಯೋಜನಕ್ಕೆ ಬರುತ್ತಿಲ್ಲ ಎನ್ನುತ್ತಾರೆ ಪಾಲಕರಾದ ಗೀತಾ.
1ರಿಂದ 10ನೇ ತರಗತಿಯವರೆಗೆ ಈ ರೀತಿಯ ಭಾರವನ್ನು ಹೊತ್ತ ಮಕ್ಕಳ ಗತಿ ಏನಾಗಬೇಕು? ಶಾಲೆಗೆ ಹೋಗುವ ಮಕ್ಕಳ ಮೂಳೆಗಳು ಸಂಪೂರ್ಣವಾಗಿ ಬೆಳೆದಿರುವುದಿಲ್ಲ. ಹಾಗೆಯೇ ಮಾಂಸ ಖಂಡಗಳು ಕೂಡ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಹೀಗಿರುವಾಗ ಮಿತಿಮೀರಿ ಭಾರವನ್ನು ಬೆನ್ನ ಮೇಲೆ ಹಾಕಿದಾಗ ಮಾಂಸ ಖಂಡಗಳಿಗೆ ದಣಿವಾಗುತ್ತದೆ.
ಇದೇ ಕಾರಣಕ್ಕೆ ಶಾಲೆಗೆ ಹೋಗುವ ಮಕ್ಕಳು ಕೆಲವೊಮ್ಮೆ ರಾತ್ರಿಯ ವೇಳೆ ಬೆನ್ನುನೋವು ಎಂದು ಅಳುತ್ತವೆ. ಆಗಾಗ್ಗೆ ಶಾಲೆ ತಪ್ಪಿಸುತ್ತವೆ. ಇದರೊಂದಿಗೆ ಸಹಜವಾಗಿ ‘ಎಸ್’ ಆಕಾರದಲ್ಲಿರುವ ಬೆನ್ನು ಮೂಳೆಯ ಮೇಲೆ ಒತ್ತಡ ಹೆಚ್ಚಾಗಿ ಅದು ಸರಿಯಾಗಿ ಬೆಳೆಯದೆ ವಕ್ರವಾಗುವ ಸಾಧ್ಯತೆಯೂ ಇದೆ.
ಬೆನ್ನಿನ ಮೇಲೆ ಭಾರ ಹೆಚ್ಚಾದಾಗ ದೇಹ ಮುಂದೆ ಬಾಗುತ್ತದೆ. ಕಾಲಿನ ಮೇಲೆ ವಿಪರೀತ ಒತ್ತಡ ಹೆಚ್ಚುತ್ತದೆ. ಇದೆಲ್ಲದರ ಪರಿಣಾಮವಾಗಿ ಮಕ್ಕಳಲ್ಲಿ ಮಂಡಿ ನೋವು, ಕತ್ತಿನ ಸೆಳೆತ, ಕೈಗಳಲ್ಲಿ ಮರಗಟ್ಟುವಿಕೆ, ತಲೆಸುತ್ತು ಆಗಾಗ್ಗೆ ಕಾಣಿಸಿಕೊಳ್ಳಬಹುದು. ಇದು ಮುಂದುವರಿದಲ್ಲಿ ದೇಹದ ಸಮತೋಲನದಲ್ಲೇ ವ್ಯತ್ಯಾಸ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ವೈದ್ಯ ಡಾ.ಸಿ.ಎಂ.ಮಂಜುನಾಥ.
ಶಾಲೆಗಳು, ಶಿಕ್ಷಕರು, ಪಾಲಕರು ಜವಾಬ್ದಾರಿ ತೆಗೆದುಕೊಂಡು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಇಲ್ಲವಾದರೆ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಿಯಮ ಪಾಲಿಸಬೇಕು. ಅಟ್ಲಾಸ್, ಶಬ್ದಕೋಶ, ಗ್ರಾಫ್‌ಬುಕ್, ಗ್ರಾಮಬುಕ್ ಇಟ್ಟುಕೊಳ್ಳಲು ಶಾಲೆಯಲ್ಲಿ ಲಾಕರ್ ವ್ಯವಸ್ಥೆ ಮಾಡಬೇಕು. ಹೀಗೆ ಸಣ್ಣ ಸಣ್ಣ ವಿಷಯ ಕುರಿತು ಯೋಚಿಸಿ ಕ್ರಮ ವಹಿಸಬೇಕಿದೆ.
ಶಾಲೆಗೆ ಮಕ್ಕಳು ಓದಲು ಪಠ್ಯ ಪುಸ್ತಕಗಳು, ಬರೆಯಲು ನೋಟ್‌ಬುಕ್ ತೆಗೆದುಕೊಂಡು ಹೋಗಲೇಬೇಕು. ಪೆನ್, ಪೆನ್ಸಿಲ್, ರಬ್ಬರ್, ಸ್ಕೆಲ್ ಮತ್ತಿತರ ಸಾಮಗ್ರಿಗಳೂ ಅಗತ್ಯ. ಏನೇ ಆದರೂ ಸ್ಕೂಲ್ ಬ್ಯಾಗ್‌ನ ತೂಕ, ಮಗುವಿನ ತೂಕದ ಶೇ.10 ಮಾತ್ರ ಇರಬೇಕು. ಅಂದರೆ 20 ಕೆಜಿ ತೂಕದ ಮಗು ಹೊರುವ ಬ್ಯಾಗ್‌ನ ಭಾರ 2 ಕೆ.ಜಿ. ಮೀರಬಾರದು. ಆದರೆ, ಈಗ ಹೊರುತ್ತಿರುವ ಭಾರ 6 ಕೆ.ಜಿಗಿಂತ ಹೆಚ್ಚು. ಅಂದರೆ ಮೂರು ಪಟ್ಟು ಅಧಿಕ. ಶಾಲಾ ಬ್ಯಾಗ್ ತೂಕವನ್ನು ನಿಗದಿಪಡಿಸಲಾಗಿದೆ. ಪ್ರತಿ ತಿಂಗಳ 3ನೇ ಶನಿವಾರವನ್ನು ಬ್ಯಾಗ್ ರಹಿತ ದಿನ ಅಥವಾ ಸಂಭ್ರಮ ಶನಿವಾರ ಕಾರ್ಯಕ್ರಮವನ್ನೂ ಜಾರಿಗೆ ತರಲಾಗಿದೆ. ಆದರೆ, ಹೆಚ್ಚಾಗಿ ಖಾಸಗಿ ಶಾಲೆಗಳಲ್ಲಿ ಪಾಲನೆಯಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತದೆ. ಹೀಗಾಗಿ, ಮತ್ತೊಮ್ಮೆ ಸುತ್ತೋಲೆ ಹೊರಡಿಸುವ ಮಕ್ಕಳಿಗೆ ಬ್ಯಾಗ್ ತೂಕ ಇಳಿಸಲು ಕ್ರಮ ವಹಿಸಲಾಗುವುದು. ಎಸ್.ಟಿ.ಜವರೇಗೌಡ, ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ