

ಮಂಜುನಾಥ ಟಿ.ಭೋವಿ ಮೈಸೂರು
ಮುಂದಿನ ವಿಧಾನಸಭೆ ಚುನಾವಣೆಯ ಮೂಡ್‌ನತ್ತ ಜಿಲ್ಲೆಯ ರಾಜಕೀಯ ವಾಲುತ್ತಿದ್ದು, ಗುಪ್ತಗಾಮಿನಿಯಂತೆ ಅಖಾಡವನ್ನು ಹದ ಮಾಡಿಕೊಳ್ಳುವ ಕಾರ್ಯವೂ ಸಾಂಗವಾಗಿ ನಡೆದಿದೆ.
2023ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಐದಾರು ತಿಂಗಳಿನಲ್ಲಿ ಎಲೆಕ್ಷನ್ ಪರ್ವ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯತ್ತ ರಾಜಕೀಯ ನಾಯಕರ ಚಿತ್ತ ನೆಟ್ಟಿದ್ದು, ಮಹಾಸಮರಕ್ಕಾಗಿ ಈಗಿನಿಂದಲೇ ಸಿದ್ಧತೆಗಳು ಗರಿಗೆದರಿವೆ.
ಮೈಕೊಡವಿ ಎದ್ದು ಚುರುಕಾಗಿರುವ ಟಿಕೆಟ್ ಆಕಾಂಕ್ಷಿಗಳು, ಹಾಲಿ-ಮಾಜಿ ಶಾಸಕರು ಮತದಾರರ ಭೇಟಿಗೆ ನಾನಾ ಕಾರಣ ಹುಡುಕುತ್ತಿದ್ದಾರೆ. ಗ್ರಾಮಗಳತ್ತ ಮುಖ ಮಾಡಿದ್ದಾರೆ.
ಮೈಸೂರು ಜಿಲ್ಲೆ ಹಳೇ ಮೈಸೂರು ಪ್ರಾಂತ್ಯದ ರಾಜಕೀಯ ಶಕ್ತಿಕೇಂದ್ರ. ಇಲ್ಲಿ ಹಿಡಿತ ಸಾಧಿಸಿದ ಪಕ್ಷ ಸುತ್ತಲಿನ ಜಿಲ್ಲೆಗಳಲ್ಲೂ ನಿಯಂತ್ರಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರಮುಖ ಪಕ್ಷಗಳೆಲ್ಲ ಮೈಸೂರು ಜಿಲ್ಲೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿವೆ. ಜಿಲ್ಲೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಇಲ್ಲಿ ಮೇಲುಗೈ ಸಾಧಿಸಿ ಸಂಖ್ಯಾಬಲ ವೃದ್ಧಿಸಿಕೊಳ್ಳಲು ಹವಣಿಸುತ್ತಿವೆ. ಆದ್ದರಿಂದ ಮುಂದಿನ ಎಲೆಕ್ಷನ್ ಜಿದ್ದಾಜಿದ್ದಿನಿಂದ ಕೂಡಿರುವುದು ನಿಶ್ಚಿತ. ಅದಕ್ಕಾಗಿ ತೆರೆಮರೆಯಲ್ಲಿ ಸಿದ್ಧತೆಗಳನ್ನು ಹುರಿಯಾಳುಗಳು ಮಾಡಿಕೊಳ್ಳುತ್ತಿದ್ದಾರೆ.
ಗೆಲುವಿನ ಸಂಕಲ್ಪ:
ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇರ ಎದುರಾಳಿಗಳು. 2018ರ ಚುನಾವಣೆಯಲ್ಲಿ ಕೈ ಪಡೆಯನ್ನು ಮಣ್ಣು ಮುಕ್ಕಿಸಿದ್ದ ಜೆಡಿಎಸ್ ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿತ್ತು. ಒಟ್ಟು 11 ಕ್ಷೇತ್ರಗಳ ಪೈಕಿ 5 ಕಡೆ ಜೆಡಿಎಸ್ ಜಯ ದಾಖಲಿಸಿ ಜಿಲ್ಲೆಯ ರಾಜಕಾರಣದ ಮೇಲೆ ಹಿಡಿತ ಸಾಧಿಸಿತ್ತು. 2013ರಲ್ಲಿ 3 ಸ್ಥಾನ ಪಡೆದಿದ್ದ ಪಕ್ಷ ತನ್ನ ಬಲವನ್ನು 5ಕ್ಕೆ ಹಿಗ್ಗಿಸಿಕೊಂಡಿತ್ತು. 2013ರಲ್ಲಿ 8 ಸ್ಥಾನ ಗೆದ್ದಿದ್ದ ಕಾಂಗ್ರೆಸ್ 2018ರಲ್ಲಿ ಕೇವಲ 3 ಸ್ಥಾನ ಗಳಿಸಿ ಹಿನ್ನಡೆ ಅನುಭವಿಸಿತ್ತು. 2013ರಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಬಿಜೆಪಿ 2018ರಲ್ಲಿ 3 ಸ್ಥಾನ ಗಿಟ್ಟಿಸಿಕೊಂಡಿತ್ತು.
ಬಳಿಕ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದೊಂದಿಗೆ ಮುನಿಸಿಕೊಂಡ ಅಂದಿನ ಹುಣಸೂರು ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ 2019ರಲ್ಲಿ ಹುಣಸೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ ಸೋತರು. ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಗೆದ್ದರು. ಈ ಮೂಲಕ ಸದ್ಯ ಜಿಲ್ಲೆಯ ತಲಾ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಬಲ ಕಾಯ್ದುಕೊಂಡಿವೆ. 3 ಕ್ಷೇತ್ರಗಳಲ್ಲಿ ಬಿಜೆಪಿಯ ನಿಯಂತ್ರಣ ಮುಂದುವರಿದಿದೆ. ಮುಂದಿನ ಚುನಾವಣೆಯಲ್ಲಿ ಈ ಮೂರೂ ಪಕ್ಷಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಳ್ಳಲು ಸಂಕಲ್ಪ ಮಾಡಿವೆ. ಆದ್ದರಿಂದ ಎಲೆಕ್ಷನ್ ಕಾವು ತೀವ್ರವಾಗುವುದು ಪಕ್ಕಾ ಆಗಿದೆ.
ಎಲೆಕ್ಷನ್ ಜಪ:
ಪ್ರಮುಖ ಮೂರು ಪಕ್ಷಗಳಿಗೆ ಮುಂದಿನ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಧಿಕಾರದ ಗದ್ದುಗೆ ಹಿಡಿಯಲು ಮೈಸೂರು ಜಿಲ್ಲೆ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಹೆಚ್ಚು ಸ್ಥಾನ ಗಳಿಸುವ ಪಕ್ಷ ರಾಜ್ಯದ ಅಧಿಕಾರ ಹಿಡಿಯಲಿದೆ. ಅದಕ್ಕಾಗಿ ಸಕಲ ಶಸ್ತ್ರಾಸ್ತ್ರದೊಂದಿಗೆ ಮೂರೂ ಪಕ್ಷಗಳು ಮತಹೋರಾಟಕ್ಕೆ ಧುಮುಕುವುದು ನಿಶ್ಚಿತ. ಈ ನಿಟ್ಟಿನಲ್ಲಿ ಎಲೆಕ್ಷನ್ ಮೈದಾನವನ್ನು ಸಜ್ಜುಗೊಳಿಸಲು ಈಗಿನಿಂದಲೇ ಮುಂದಾಗಿವೆ. ಮೂರು ಪಕ್ಷಗಳ ನಾಯಕರು ಮೇಲಿಂದ ಮೇಲೆ ಜಿಲ್ಲೆಗೆ ದೌಡಾಯಿಸುತ್ತಿದ್ದಾರೆ. ಅವರ ನಡೆ-ನುಡಿಗಳು ಚುನಾವಣೆಯನ್ನೇ ಕೇಂದ್ರೀಕರಿಸಿವೆ. ದಸರಾದ ಬಳಿಕ ಇದೆಲ್ಲ ಖುಲ್ಲಂಖುಲ್ಲಾ ನಡೆಯುತ್ತಿದೆ.
ಜೆಡಿಎಸ್ ಹೊಸ ಹುರುಪು:
ಜಿಲ್ಲೆಯ ಪ್ರಮುಖ ನಾಯಕ, ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್‌ನಲ್ಲೇ ಉಳಿದುಕೊಂಡಿರುವುದು ಆ ಪಕ್ಷಕ್ಕೆ ಆನೆ ಬಲ ಬಂದಿದೆ. ವರಿಷ್ಠರ ಜತೆ ಮುನಿಸಿಕೊಂಡು 3 ವರ್ಷಗಳಿಂದ ಜೆಡಿಎಸ್‌ನಿಂದ ಅಂತರ ಕಾಯ್ದಕೊಂಡಿದ್ದ ಜಿಟಿಡಿ ಅವರ ಮನವೊಲಿಸುವ ಮೂಲಕ ಜಿಲ್ಲೆಯಲ್ಲಿ ಪಕ್ಷಕ್ಕೆ ಅನುಕೂಲಕರ ಸನ್ನಿವೇಶ ಸೃಷ್ಟಿಯಾಗಿದೆ. ಚಾಮುಂಡೇಶ್ವರಿ, ಚಾಮರಾಜ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ ಕ್ಷೇತ್ರಗಳ ಹಿಡಿತ ಹೊಂದಿರುವ ಜಿಟಿಡಿಯಿಂದ ಜೆಡಿಎಸ್‌ಗೆ ನವಚೈತನ್ಯಬಂದಿದ್ದು, ಹೊಸ ಹುರುಪಿನೊಂದಿಗೆ ಅವರ ನೇತೃತ್ವದಲ್ಲಿ ಎಲೆಕ್ಷನ್ ಎದುರಿಸಲು ಆ ಪಕ್ಷ ಅಣಿಯಾಗಿದೆ.
ಮಂಕಾದ ಕಮಲ ಪಡೆ:
ಜೆಡಿಎಸ್‌ನಲ್ಲಿ ನಡೆದ ಆಂತರಿಕ ಬೆಳವಣಿಗೆಯಿಂದ ಆಡಳಿತಾರೂಢ ಬಿಜೆಪಿ ಕೊಂಚ ಮಂಕಾಗಿದೆ. ಜಿಟಿಡಿ ಸೆಳೆದು ಸಂಖ್ಯಾಬಲ ವೃದ್ಧಿಸಿಕೊಳ್ಳವ ಬಿಜೆಪಿ ಲೆಕ್ಕಾಚಾರ ಕೈಕೊಟ್ಟಿದೆ. ಪಕ್ಷ ಸಂಘಟನೆ ವಿಸ್ತರಿಸಿಕೊಳ್ಳಲು ವರಿಷ್ಠರ ಸೂಚನೆಯಂತೆ ಜೆಡಿಎಸ್, ಕಾಂಗ್ರೆಸ್‌ನ ಪ್ರಮುಖ ನಾಯಕರನ್ನು ಸೆಳೆದುಕೊಳ್ಳಲು ಬಿಜೆಪಿಗೆ ಇನ್ನೂ ಸಾಧ್ಯವಾಗಿಲ್ಲ. ಇಡೀ ಜಿಲ್ಲೆಯ ಮೇಲೆ ಹಿಡಿತ ಹೊಂದಿರುವ ಜನಪ್ರಿಯ ನಾಯಕರ ಕೊರತೆಯಿಂದಲೂ ಕಮಲ ಪಡೆಯ ಸಂಘಟನೆ ಕಳೆಗುಂದಿದೆ. ಆದಾಗ್ಯೂ, ಈ ಸಲವೂ ಮೋದಿ ಟ್ರಂಪ್ ಕಾರ್ಡ್ ಮೇಲೆಯೇ ಚುನಾವಣೆ ಎದುರಿಸಲು ಮುಂದಾಗಿದೆ.
ಕೈ ಭರ್ಜರಿ ತಯಾರಿ:
ಬಿಜೆಪಿಯ ಆಡಳಿತದ ವಿರೋಧಿ ಅಲೆಯಿಂದಾಗಿ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಎಲೆಕ್ಷನ್‌ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅನುಭವಿಸಿದ ಸೋಲು ಈಗಲೂ ಕಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಸೋಲಿನ ಮುಯ್ಯಿ ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಬದಲಿಗೆ ವರುಣದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದು ನಿಜವಾದರೆ ಜಿಲ್ಲೆಯ ಚುನಾವಣಾ ಕಣ ರಣರೋಚಕವಾಗಲಿದ್ದು, ಅವರ ಸ್ಪರ್ಧೆಯಿಂದ ಕಾಂಗ್ರೆಸ್ ಪಕ್ಷಕ್ಕೆ ನವಹುರುಪು ಬರಬಹುದು. ಅವರ ಪ್ರಭಾವ ಉಳಿದ ಕ್ಷೇತ್ರಗಳಿಗೂ ವಿಸ್ತರಣೆ ಆಗಬಹುದು.
ಹಾಲಿ ಶಾಸಕರ ಸುತ್ತಾಟ
ಹಾಲಿ ಶಾಸಕರು ಮತ್ತೊಂದು ಅಗ್ನಿಪರೀಕ್ಷೆಗೆ ಅಣಿಯಾಗುತ್ತಿದ್ದಾರೆ. ಟಿಕೆಟ್ ಪಡೆದುಕೊಳ್ಳಲು ತಮ್ಮ ಸಾಧನೆಯ ಪಟ್ಟಿಯನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ, ಕಾಮಗಾರಿಗಳ ಭೂಮಿಪೂಜೆ, ಸಭೆ-ಸಮಾರಂಭ, ಮದುವೆ ಇನ್ನಿತರ ಕಾರ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಾಲಂಗೋಚಿ ಪಕ್ಷಗಳೂ ರೆಡಿ:
ಜಿಲ್ಲೆಯ 11 ಕ್ಷೇತ್ರಗಳಲ್ಲೂ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತವರು, ಹೊಸ ಅಭ್ಯರ್ಥಿಗಳು ಕ್ಷೇತ್ರದ ಜನರತ್ತ ಎಡತಾಕುತ್ತಿದ್ದಾರೆ. ಮತದಾರರ ಗಮನ ಸೆಳೆಯಲು ವಿವಿಧ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದರೊಂದಿಗೆ ಆಮ್ ಆದ್ಮಿ ಪಾರ್ಟಿ, ಎಸ್‌ಡಿಪಿಐ, ಬಿಎಸ್‌ಪಿ ಪ್ರಮುಖ ಪಕ್ಷಗಳೊಂದಿಗೆ ಸೆಣಸಲು ಮುಂದಾಗಿವೆ.