ಮೈಸೂರು ಜಿಲ್ಲೆಯ ಏಳು ಗ್ರಾಮಗಳಲ್ಲಿ ಮಾದರಿ ಸೌರ ಗ್ರಾಮ ಸ್ಪರ್ಧೆ

Solar Electricity
Published on

ಮೈಸೂರು: ಜಿಲ್ಲೆಯ ಏಳು ಗ್ರಾಮಗಳನ್ನು ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಮಾದರಿ ಸೌರ ಗ್ರಾಮ’ ಯೋಜನೆಯಡಿ ಸ್ಪರ್ಧಾ ಗ್ರಾಮಗಳೆಂದು ಗುರುತಿಸಿದ್ದು, ಅಂತಿಮವಾಗಿ ಆಯ್ಕೆಯಾದ ಗ್ರಾಮಕ್ಕೆ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯ(ಎಂಎನ್‌ಆರ್‌ಇ)ದಿಂದ 1 ಕೋಟಿ ರೂ. ಪ್ರೋತ್ಸಾಹಧನ ಲಭಿಸಲಿದೆ.

ಮೈಸೂರಿನ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಮಿತಿ(ಡಿಎಲ್‌ಸಿ) ಸಭೆಯಲ್ಲಿ ಏಳು ಗ್ರಾಮಗಳನ್ನು ಯೋಜನೆಗೆ ಗುರುತಿಸಲಾಗಿದೆ.

ಜಿಲ್ಲೆಯ ವರಕೊಡು, ಬಿಳಿಕೆರೆ, ಗಂಧನಹಳ್ಳಿ, ಸಾಲಿಗ್ರಾಮ, ತಾಂಡವಪುರ, ಮೂಗೂರು ಮತ್ತು ಬೆಟ್ಟದಪುರ ಗ್ರಾಮಗಳನ್ನು ಮಾದರಿ ಸೌರ ಗ್ರಾಮ ಯೋಜನೆಯ ಸ್ಪರ್ಧಾ(ಅಚಿಟಿಜಜಚಿಣ) ಗ್ರಾಮಗಳೆಂದು ಪರಿಗಣಿಸಲಾಗಿದೆ.

ಸ್ಪರ್ಧಾ ಅವಧಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ವಸತಿ ಮನೆಗಳಿಗೆ ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ ಅಡಿಯಲ್ಲಿ ಛಾವಣಿ ಸೌರಶಕ್ತಿ ಅಳವಡಿಕೆ, ಇತರ ಗ್ರಾಹಕರಿಗೆ ಸಬ್ಸಿಡಿರಹಿತ ಯೋಜನೆ ಅಡಿಯಲ್ಲಿ ಛಾವಣಿ ಸೌರಶಕ್ತಿ ಅಳವಡಿಕೆಗೆ ಪ್ರೋತ್ಸಾಹ ವಿತರಣೆ, ನೀರಾವರಿ ಪಂಪ್‌ಸೆಟ್‌ಗಳಿಗೆ ಪಿಎಂ-ಕುಸುಮ್ ಯೋಜನೆ ಅಡಿಯಲ್ಲಿ ಅನುಷ್ಠಾನಕ್ಕೆ ಪ್ರೋತ್ಸಾಹಿಸುವುದು, ಸರ್ಕಾರಿ ಕಟ್ಟಡಗಳ ಮೇಲೆ ಸೌರ ಶಕ್ತಿ ಅಳವಡಿಕೆ, ಕುಡಿಯುವ ನೀರಿನ ಹಾಗೂ ಬೀದಿ ದೀಪಗಳಿಗೆ ಸೌರಶಕ್ತಿ ಅಳವಡಿಸಲಾಗುತ್ತದೆ.

ಈಗಾಗಲೇ ಶುರುವಾಗಿರುವ ಈ ಸ್ಪರ್ಧೆಯು ಪ್ರಸಕ್ತ ವರ್ಷದ ಡಿಸೆಂಬರ್ 31ರವರೆಗೆ ನಡೆಯಲಿದ್ದು, ಸ್ಪರ್ಧೆಯ ಅಂತ್ಯದಲ್ಲಿ ಮೌಲ್ಯಮಾಪನದ ಆಧಾರದ ಮೇಲೆ ಗರಿಷ್ಠ ನವೀಕರಿಸಬಹುದಾದ ಇಂಧನ ಬಳಸಿದ ಗ್ರಾಮವನ್ನು ಮಾದರಿ ಸೌರ ಗ್ರಾಮ ಎಂದು ಘೋಷಿಸಲಾಗುವುದು.

ಹೀಗೆ ಆಯ್ಕೆಯಾದ ಗ್ರಾಮಕ್ಕೆ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಮೈಸೂರಿನ ಸೆಸ್ಕ್ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net