ಮೈಸೂರು ಜಿಲ್ಲೆ ಮೇಲೆಯೂ ಅಮೆರಿಕ ಸುಂಕಾಸ್ತ್ರ ಎಫೆಕ್ಟ್!

tax-3
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮೇಲೆ ಝಳಪಿಸಿರುವ ಪ್ರತಿಕಾರದ ಸುಂಕದ ಅಸ್ತ್ರ ಪರಿಣಾಮ ಮೈಸೂರು ಮೇಲೆಯೂ ಆಗಲಿದೆ. ಇದು ಜಿಲ್ಲೆಯ ರಫ್ತು ಉದ್ಯಮದ ಮೇಲೆ ಪೆಟ್ಟು ಬೀಳುವ ಸಾಧ್ಯತೆ ಇದೆ.

ಭಾರತದ ಮೇಲೆ ಶೇ.27ರಷ್ಟು ಪ್ರತಿ ಸುಂಕವನ್ನು ಅಮೆರಿಕ ಹೇರಿದೆ. ಇದರ ಬೆನ್ನಲ್ಲೆ ಜಿಲ್ಲೆಯಿಂದ ಯುಎಸ್‌ಎಗೆ ರವಾನೆಯಾಗುವ ರಫ್ತು ಉತ್ಪನ್ನಗಳು ದುಬಾರಿಯಾಗಲಿದ್ದು, ಇದರಿಂದಾ ಅಮೆರಿಕ ಜನರು ಮೈಸೂರಿನ ಉತ್ಪನ್ನಗಳ ಖರೀದಿ ತಗ್ಗಿಸಬಹುದು. ಇದರಿಂದ ಬೇಡಿಕೆ ಕುಸಿಯಲಿದೆ.

ಜಿಲ್ಲೆಯಿಂದ 83 ರಫ್ತು ಉದ್ಯಮಗಳಿವೆ. ಈ ಪೈಕಿ ಅರ್ಧದಷ್ಟು ಸ್ಥಳೀಯ ಕೈಗಾರಿಕೆಗಳು ಅಮೆರಿಕಕ್ಕೆ ತಮ್ಮ ಉತ್ಪನ್ನಗಳು ಮಾರಾಟ ಮಾಡುತ್ತಿವೆ. ಇದು ಪ್ರತಿ ತಿಂಗಳು ಲಕ್ಷಾಂತರ ಡಾಲರ್ ಲೆಕ್ಕದಲ್ಲಿ ವಹಿವಾಟು ನಡೆದುಕೊಂಡು ಬಂದಿದೆ. ಇಷ್ಟು ದಿನ ಲಾಭ ಗಳಿಕೆ ಕಂಡ ರಫ್ತು ಉದ್ದಿಮೆದಾರರು, ಸುಂಕ ಏರಿಕೆಯಿಂದ ಮುಂದೇನು ಆಗಲಿದೆ ಎಂಬ ಆತಂಕ ಮೂಡಿದೆ.

ಜಿಲ್ಲೆಯಿಂದ ತಹೇವಾರಿ ವಸ್ತುಗಳು ಅಮೆರಿಕಕ್ಕೆ ರಫ್ತು ಆಗುತ್ತಿವೆ. ಬೃಹತ್ ಕೈಗಾರಿಕೆಗಳಿಂದ ಹಿಡಿದು ಸಣ್ಣ, ಮಧ್ಯಮ ಕೈಗಾರಿಕೆಗಳು ವಿವಿಧ ಬಗೆಯ ವಸ್ತುಗಳನ್ನು ಕಳುಹಿಸಿ ಕೊಡುತ್ತಿವೆ. ಅಗರಬತ್ತಿ, ಇಂಜಿನಿಯರಿಂಗ್, ಆಟೋಮೊಬೈಲ್ ವಸ್ತುಗಳು ರಫ್ತಾಗುತ್ತಿದೆ. ಈ ಪೈಕಿ ಐಟಿ ಉತ್ಪನ್ನಗಳೇ ಅಧಿಕ. ಹೆಬ್ಬಾಳು ಕೈಗಾರಿಕೆ ಪ್ರದೇಶದಲ್ಲಿ ಇನ್ಫೋಸಿಸ್ ಕಂಪನಿಯೊಂದೇ ಹೆಚ್ಚಿನ ಪ್ರಮಾಣದಲ್ಲಿ ಸಾಫ್ಟ್‌ವೇರ್ ಅಮೆರಿಕಕ್ಕೆ ಮಾರಾಟ ಮಾಡುತ್ತಿದೆ.

ಹೂಟಗಳ್ಳಿಯಲ್ಲಿರುವ ಆಟೋಮೋಟಿವ್ ಎಕ್ಸೆಲ್ ಕಂಪನಿ, ಮೆರಿಟೋರ್ ಎಚ್‌ವಿಎಸ್, ಹೆಬ್ಬಾಳ ಕೈಗಾರಿಕೆ ಪ್ರದೇಶದಲ್ಲಿರುವ ಎಂಎಚ್‌ಐ-ವಿಎಸ್‌ಟಿ ಕಂಪನಿ, ರೆಕಾನ್ ಮಷಿನ್ ಟೂಲ್ ಕಂಪನಿ, ಬೆಳವಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಟ್ರೈಟನ್ ವಾಲ್ವಸ್ ಕಂಪನಿ, ಯಾದವಗಿರಿ ಕೈಗಾರಿಕೆ ಪ್ರದೇಶದಲ್ಲಿರುವ ವಿಐಪಿ ಇನೋವೇಷನ್ ಸಲ್ಯೂಷನ್ ಕಂಪನಿ, ನಂಜನಗೂಡಿನಲ್ಲಿರುವ ಬ್ರೇಕ್ಸ್ ಇಂಡಿಯಾ ಕಂಪನಿ, ಕೆಆರ್‌ಎಸ್ ರಸ್ತೆಯಲ್ಲಿರುವ ಲೈಫ್ ಟ್ರೋನಿಕ್ಸ್ ವಿಜಯ ಇಂಡಿಯಾ ಕಂಪನಿಗಳು ವಿವಿಧ ಬಗೆಯ ಇಂಜನಿಯರಿಂಗ್ ವಸ್ತುಗಳನ್ನು ನಿರಂತರವಾಗಿ ಅಮೆರಿಕಕ್ಕೆ ಮಾರಾಟ ಮಾಡಿಕೊಂಡು ಬಂದಿದ್ದು, ಇದರಿಂದ ಹೆಚ್ಚಿನ ವಹಿವಾಟು ನಡೆಸುವ ಮೂಲಕ ಲಾಭ ಗಳಿಸಿವೆ.

ನಿತ್ಯ ಬಳಕೆಗೆ ಉಪಯೋಗವಾಗುವ ಬಟ್ಟೆಗಳೂ ಯುಎಸ್‌ಎಗೆ ರವಾನಿಯಾಗುತ್ತಿವೆ. ಪಾಲಿಸ್ಟರ್, ಉಣ್ಣೆ ಬಟ್ಟೆಗಳು ಸೇರಿದಂತೆ ಗಾರ್ಮೆಂಟ್ಸ್ ಉತ್ಪನ್ನಗಳು ಇದರಲ್ಲಿ ಸೇರಿವೆ. ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ರೇಷ್ಮೆ ಬಟ್ಟೆಗಳೂ ಇಲ್ಲಿಯಿಂದಲೇ ರಫ್ತು ಮಾಡಲಾಗುತ್ತಿದೆ. ನಗರದ ಮಾನದಂಡವಾಡಿ ರಸ್ತೆಯಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮ ನಿಗಮ(ಕೆಎಸ್‌ಐಸಿ) ಕೈಗಾರಿಕೆಯಲ್ಲಿ ಉತ್ಪಾದನೆಯಾಗುವ ರೇಷ್ಮೆ ಸೀರೆಗಳು, ರೇಷ್ಮೆಯಿಂದ ತಯಾರಿಸುವ ಬಟ್ಟೆಗಳು ಅಮೆರಿಕದಲ್ಲಿ ಹೆಚ್ಚಿನ ಬೇಡಿಕೆ ಇದೆ. ನಜರ್‌ಬಾದ್‌ನಲ್ಲಿರುವ ಸಿಲ್ಕ್ ಎಂಪೋರಿಯಂ, ಸಿದ್ದಪ್ಪ ವೃತ್ತದಲ್ಲಿರುವ ಝೆನಿತ್ ಎಕ್ಸ್‌ಫೋರ್ಟ್ಸ್ ಕಂಪನಿ ಸಹ ರೇಷ್ಮೆ ಉತ್ಪನ್ನಗಳು ಮಾರಾಟ ಮಾಡಿಕೊಂಡು ಬಂದಿವೆ.

ಹೆಬ್ಬಾಳದಲ್ಲಿರುವ ಬೃಹತ್ ಕಂಪನಿಯಾದ ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಉತ್ಪಾದನೆಯಾಗುವ ವೈದ್ಯಕೀಯ ಉಪಕರಣಗಳಿಗೆ ಅಮೆರಿಕವೇ ಪ್ರಮುಖ ಮಾರುಕಟ್ಟೆಯಾಗಿದೆ. ನಂಜನಗೂಡಿನಲ್ಲಿರುವ ಜುಬಿಲೆಂಟ್ ಜೆನೆರಿಕ್ಸ್ ಕಂಪನಿ, ಬೆಳಗೊಳದಲ್ಲಿರುವ ಮಿಲೇನಿಯಂ ಫಾರ್ಮ್ ಕಂಪನಿಯ ಔಷಧಗಳಿಗೆ ಅಮೆರಿಕ ಮಾರುಕಟ್ಟೆಯಾಗಿದೆ.

ಎನ್.ರಂಗರಾವ್ ಆ್ಯಂಡ್ ಸನ್ಸ್ ಕಂಪನಿ ಹೆಚ್ಚಿನ ಪ್ರಮಾಣದಲ್ಲಿ ಅಗರಬತ್ತಿ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಕರಕುಶಲ ಉತ್ಪನ್ನಗಳು ಜಿಲ್ಲೆಯ ಬಹಳಷ್ಟು ರಫ್ತು ಕಂಪನಿಗಳು ಅಮೆರಿಕವನ್ನೇ ನೆಚ್ಚಿಕೊಂಡಿವೆ. ನೆಸ್ಲೆ ಕಂಪನಿ ಸೇರಿದಂತೆ ಐದಾರು ಕಂಪನಿಗಳು ಕಾಫಿ ಉತ್ಪನ್ನಗಳಿಗೆ ಅಮೆರಿಕದಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಲ್ಲಿಯ ಗ್ರಾಹಕರು ಮೈಸೂರಿನ ಕಾಫಿ ರುಚಿಗೆ ಮನಸೋತಿದ್ದಾರೆ.

ಅಲ್ಲದೆ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಆಭರಣಗಳು, ಪಾಲಿಶ್ ಮಾಡಿದ ಗ್ರಾನೈಟ್, ಕೃಷಿ ಉತ್ಪನ್ನಗಳು, ನೈಸರ್ಗಿಕ ಬಣ್ಣ, ರಾಸಾಯಿನಿಕ ವಸ್ತುಗಳು, ಟಯರ್, ಟ್ಯೂಬ್, ವೈಯರ್ ಸೇರಿದಂತೆ ಇನ್ನಿತರು ವಸ್ತುಗಳು ಅಮೆರಿಕಕ್ಕೆ ಮಾರಾಟ ಮಾಡಲಾಗುತ್ತಿದೆ. ಅಮೆರಿಕದ ತೆರಿಗೆ ನೀತಿಯಿಂದ ಸ್ಥಳೀಯ ರಫ್ತು ಉದ್ಯಮದ ಮೇಲೆ ದುಷ್ಪರಿಣಾಮ ಬೀರಬಹುದು. ಹೀಗಾಗಿ, ಆರ್ಥಿಕ ನಷ್ಟ ಒಳಗಾಗುವ ಮುನ್ನವೇ ಹೊಸ ಮಾರುಕಟ್ಟೆಯನ್ನು ಕಂಡುಕೊಳ್ಳಬೇಕಿದೆ.

ಹಡಗು, ವಿಮಾನದ ಮೂಲಕ ರವಾನೆ:

ಜಿಲ್ಲೆಯ ರಫ್ತು ಕಂಪನಿಗಳು ತಮ್ಮ ವಸ್ತುಗಳನ್ನು ನೇರವಾಗಿ ಅಮೆರಿಕಕ್ಕೆ ರಫ್ತು ಮಾಡುತ್ತಿವೆ. ಕೆಲ ಕಂಪನಿಗಳು ಏಜೆನ್ಸಿ ಮೂಲಕವೂ ತಮ್ಮ ಉತ್ಪನ್ನಗಳನ್ನು ಕಳುಹಿಸಿಕೊಡುತ್ತಿವೆ. ಹಡಗಿನ ಮೂಲಕ ಮಂಗಳೂರು, ಗೋವಾ, ವಿಮಾನದ ಮೂಲಕ ಚೆನ್ನೈ, ಹೈದ್ರಾಬಾದ್ ಮೂಲಕ ವಸ್ತುಗಳನ್ನು ಅಂದಾಜು 13 ಸಾವಿರ ಕಿ.ಮೀ. ದೂರದಲ್ಲಿರುವ ಅಮೆರಿಕಕ್ಕೆ ರವಾನಿಸಲಾಗುತ್ತಿದೆ.

ಜಿಲ್ಲೆಯಿಂದ ಅಗರಬತ್ತಿ, ಆಟೋಮೊಬೈಲ್, ಇಂಜಿನಿಯರಿಂಗ್ ವಸ್ತುಗಳು ಅಮೆರಿಕಕ್ಕೆ ರಫ್ತು ಆಗುತ್ತಿದೆ. ನಮ್ಮಲ್ಲಿ ತಯಾರು ಆಗುವ ಸಾಫ್ಟ್‌ವೇರ್‌ಗೂ ಅಮೆರಿಕ ಮುಖ್ಯ ಮಾರುಕಟ್ಟೆಯಾಗಿದೆ. ಆದರೀಗ ಅಲ್ಲಿಯ ಸರ್ಕಾರವು ರಫ್ತು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಧಿಕ ಸುಂಕ ಹಾಕುತ್ತಿದೆ. ಇದರಿಂದ ನಮಗೆ ಹೊಡೆತ ಬೀಳಲಿದೆ. ಸುರೇಶ್‌ಕುಮಾರ್ ಜೈನ್ ಪ್ರಧಾನ ಕಾರ್ಯದರ್ಶಿ, ಮೈಸೂರು ಕೈಗಾರಿಕೆ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net