ಮೈಸೂರು ಜಿಲ್ಲೆ 94 ಗ್ರಾಮಗಳಿಗೆ ಜಲ ಸಂಕಷ್ಟ ಸಾಧ್ಯತೆ

mysore
Published on
ಮಂಜುನಾಥ ತಿಮ್ಮಯ್ಯ ಮೈಸೂರು

ಕಾವೇರಿ ಕಣಿವೆಯ ಪ್ರಮುಖ ಜಿಲ್ಲೆಯಾಗಿರುವ ಮೈಸೂರಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಅಭಾವ ಗೋಚರವಾಗುತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ 94 ಗ್ರಾಮಗಳಲ್ಲಿ ಜಲ ಸಂಕಷ್ಟ ಸೃಷ್ಟಿಯಾಗಬಹುದು.

ಬೇಸಿಗೆಗೆ ಮುನ್ನವೇ ನೆತ್ತಿ ಸುಡುವ ಉರಿ ಬಿಸಿಲಿಗೆ ಜಿಲ್ಲೆಯ ಜನರು ಹೈರಾಣರಾಗಿ ಹೋಗಿದ್ದಾರೆ. ಗುರುವಾರ ಜಿಲ್ಲೆಯಲ್ಲಿ ಗರಿಷ್ಠ ಉಷ್ಠಾಂಶ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಏಪ್ರಿಲ್, ಮೇ ಹೊತ್ತಿಗೆ ಕೆಂಡಕಾರಲು ಸಜ್ಜಾಗಿರುವ ಸೂರ್ಯದೇವನ ಪ್ರಖರತೆ ಇನ್ನಷ್ಟು ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವುದು ನಿಶ್ಚಿತ..!

ಹೆಚ್ಚುವರಿ ವರ್ಷಧಾರೆ: 2023ರಲ್ಲಿ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಯು 2024ರ ಸಾಲಿನಲ್ಲಿ ಉತ್ತಮ ಮಳೆ ಕಂಡಿದೆ. 15 ಮಿಲಿಮೀಟರ್‌ನಷ್ಟು ಅಧಿಕ ಮಳೆ ದಾಖಲಾಗಿದೆ. ವಾರ್ಷಿಕ ವಾಡಿಕೆ ಮಳೆ 837 ಮಿ.ಮೀ. ಪೈಕಿ 965 ಮಿ.ಮೀ. ಮಳೆ ಬಿದ್ದಿದೆ. ಕೆ.ಆರ್.ನಗರ ತಾಲೂಕಿನಲ್ಲಿ ಶೇ.3ರಷ್ಟು ಕೊರತೆಯನ್ನು ಬಿಟ್ಟರೆ ಉಳಿದ ತಾಲೂಕಿನಲ್ಲಿ ಹೆಚ್ಚುವರಿ ವರ್ಷಧಾರೆ ಸುರಿದಿತ್ತು.

ಡ್ಯಾಂಗಳಲ್ಲಿ ಶೇ.70ಕ್ಕಿಂತ ಹೆಚ್ಚಿನ ನೀರು ಸಂಗ್ರಹ: ಉತ್ತಮ ಮಳೆಯಿಂದ ಜಿಲ್ಲೆಯಲ್ಲಿರುವ ಎಲ್ಲ ಜಲಾಶಯಗಳು ಭರ್ತಿಯಾಗಿ ಈಗಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಆಶಾದಾಯಕ ವಾತಾವರಣ ಇದೆ.

ಜಿಲ್ಲೆಯ ಪ್ರಮುಖ ಕುಡಿಯುವ ನೀರಿನ ಮೂಲವಾದ ಕೆಆರ್‌ಎಸ್‌ನಲ್ಲಿ ಈಗಲೂ ಶೇ.70ರಷ್ಟು ನೀರು ಸಂಗ್ರಹವಿದೆ. ಗರಿಷ್ಠ 49.45 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಇರುವ ಈ ಡ್ಯಾಂನಲ್ಲಿ ಈಗ 34.911 ಟಿಎಂಸಿ ನೀರು ಬಳಕೆಗೆ ಲಭ್ಯ ಇದೆ. ಕಳೆದ ವರ್ಷ ಈ ಹೊತ್ತಿಗೆ 16.07 ಟಿಎಂಸಿ ನೀರು ಮಾತ್ರ ಇತ್ತು. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯದಿಂದ ಮೈಸೂರು ಸೇರಿದಂತೆ ಮಂಡ್ಯ, ಬೆಂಗಳೂರು ಜನರಿಗೂ ಕುಡಿಯುವ ನೀರು ಪೂರೈಸಲಾಗುತ್ತದೆ.

ಜಿಲ್ಲೆಯ ಪ್ರಮುಖ ಡ್ಯಾಂ ಆಗಿರುವ ಕಬಿನಿ ಜಲಾಶಯದಲ್ಲೂ ಶೇ.73.36ರಷ್ಟು ನೀರಿದೆ. ಕಪಿಲಾ ನದಿಗೆ ಕಟ್ಟಿರುವ ಜಲಾಶಯದಲ್ಲಿ ಗರಿಷ್ಠ 19.25 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯಕ್ಕೆ 14.32 ಟಿಎಂಸಿ ನೀರು ಜನರ ಉಪಯೋಗಕ್ಕೆ ದೊರೆಯಲಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಶೇ.11.32ರಷ್ಟು ನೀರು ಸಂಗ್ರಹವಾಗಿತ್ತು. 3.94 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ತಾರಕ ಜಲಾಶಯದಲ್ಲಿ ಶೇ.62 ಮತ್ತು 3.32 ಟಿಎಂಸಿ ನೀರಿನ ಕ್ರೋಡೀಕರಣದ ಶಕ್ತಿ ಹೊಂದಿರುವ ನುಗು ಜಲಾಶಯದಲ್ಲೂ ಶೇ.83.88ರಷ್ಟು ನೀರು ಬಳಕೆಗೆ ಲಭ್ಯ ಇದೆ. ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲೂ 80.38ರಷ್ಟು ನೀರಿದೆ. ಕಳೆದ ಸಾಲಿಗೆ ಹೋಲಿಸಿದರೆ ಪ್ರಸ್ತುತ ಈ ಎಲ್ಲ ಜಲಾಶಯದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ಬೇಸಿಗೆಯನ್ನು ಸಮರ್ಥವಾಗಿ ನಿರ್ವಹಿಸಬಹುದಾಗಿದೆ.

ಸಮಸ್ಯಾತ್ಮಕ ಹಳ್ಳಿಗಳ ಗುರುತು

ಸದ್ಯಕ್ಕೆ ತತ್ವಾರವಿಲ್ಲದಿದ್ದರೂ ಮುಂದಿನ ಏಪ್ರಿಲ್ ಹೊತ್ತಿಗೆ ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳಬಹುದಾಗಿದೆ. ಕೊಳವೆಬಾವಿ ಆಶ್ರಿತ ಹಳ್ಳಿಗಳಲ್ಲೇ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಅಂತಹ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರತಿನಿಧಿಸುವ ತಿ.ನರಸೀಪುರ ತಾಲೂಕಿನಲ್ಲೇ 18 ಗ್ರಾಮಗಳು ನೀರಿನ ಕೊರತೆ ಉಂಟಾಗಬಹುದು. ಪಿರಿಯಾಪಟ್ಟಣ ತಾಲೂಕಿನಲ್ಲಿ 12, ಮೈಸೂರು ತಾಲೂಕಿನಲ್ಲಿ 12 ಗ್ರಾಮಗಳು ಈ ಸಮಸ್ಯೆ ವ್ಯಾಪ್ತಿಗೆ ಸಿಲುಕಿಕೊಳ್ಳಲಿವೆ. ಇದರೊಂದಿಗೆ ಕಾಡಂಚಿನ ಎಚ್.ಡಿ.ಕೋಟೆ ತಾಲೂಕಿನಲ್ಲಿ 8 ಗ್ರಾಮಗಳು ಈ ಸಮಸ್ಯೆಯನ್ನು ಎದುರಿಸಲಿವೆ. ಸರಗೂರು ತಾಲೂಕಿನಲ್ಲಿ 4, ಹುಣಸೂರು ತಾಲೂಕಿನಲ್ಲಿ 11, ನಂಜನಗೂಡು ತಾಲೂಕಿನಲ್ಲಿ 11, ಕೆ.ಆರ್.ನಗರ ತಾಲೂಕಿನಲ್ಲಿ 11, ಸಾಲಿಗ್ರಾಮ ತಾಲೂಕಿನಲ್ಲಿ 7 ಗ್ರಾಮಗಳು ನೀರಿನ ಅಭಾವ ಸೃಷ್ಟಿಯಾಗಬಹುದು.

ಇಂತಹ ಸಂದರ್ಭದಲ್ಲಿ ಈ ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ತಯಾರಿ ಮಾಡಿಕೊಂಡಿದ್ದು, ಅದಕ್ಕಾಗಿ 45 ಖಾಸಗಿ ಕೊಳವೆಬಾವಿ ಗುರುತಿಸಿದ್ದು, ಇವುಗಳ ಮೂಲಕ ಕುಡಿಯುವ ನೀರನ್ನು ಜನರಿಗೆ ಪೂರೈಕೆ ಮಾಡಲು ಯೋಜಿಸಲಾಗಿದೆ.

ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾಧಿತ ಗ್ರಾಮಗಳು ಹಂತ ಹಂತವಾಗಿ ಏರಿಕೆಯಾಗಲಿದ್ದು, ಮಾರ್ಚ್‌ನಲ್ಲಿ 21, ಏಪ್ರಿಲ್ 15ರ ಒಳಗೆ 48, ಏಪ್ರಿಲ್ 30ರ ಒಳಗೆ 62, ಮೇ 15ರ ಒಳಗೆ 75, ಮೇ 30ರ ಒಳಗೆ 88, ಜೂನ್ 15ರ ಒಳಗೆ 91, ಜೂನ್ 30ರ ಒಳಗೆ 94 ಗ್ರಾಮಗಳು ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಅಂದಾಜಿಸಿದೆ.

65 ಬೋರ್‌ವೆಲ್ ಕೊರೆಸಲು ಸಿದ್ಧತೆ

ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮವಾಗಿ ಕ್ರಿಯಾಯೋಜನೆಯನ್ನೂ ತಯಾರು ಮಾಡಲಾಗಿದೆ. ಹೊಸದಾಗಿ 65 ಬೋರ್‌ವೆಲ್ ಕೊರೆಸಲು ಅಣಿಯಾಗಿದ್ದು, ಇದಕ್ಕೆ 87.07 ಲಕ್ಷ ರೂ. ಖರ್ಚಾಗಲಿದೆ. ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳುವ 45 ಖಾಸಗಿ ಬೋರ್‌ವೆಲ್ ಮಾಲೀಕರಿಗೆ 13.5 ಲಕ್ಷ ರೂ., ವಾಟರ್ ಟ್ಯಾಂಕ್ ಬಳಕೆಗೆ 3.05 ಲಕ್ಷ ರೂ., ಬೋರ್‌ವೆಲ್‌ಗಳ ದುರಸ್ತಿಗಾಗಿ 22.05 ಲಕ್ಷ ರೂ. ಬೇಕಾಗಬಹುದು ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ನೀರು ಸರಬರಾಜು ಟ್ಯಾಂಕರ್‌ಗೆ ಜಿಪಿಎಸ್ ಅಳವಡಿಸಲಾಗುತ್ತಿದೆ. ಹೂಟಗಳ್ಳಿ, ಬೋಗಾದಿಯಲ್ಲಿ ಸಮಸ್ಯೆ

ಮೈಸೂರಿನ ಹೊರವಲಯದಲ್ಲಿರುವ ಹೂಟಗಳ್ಳಿ ನಗರಸಭಾ ವ್ಯಾಪ್ತಿಯ 6, ಬೋಗಾದಿಯ ಪುರಸಭೆಯ ಒಂದು ವಾರ್ಡ್‌ನಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಪಿರಿಯಾಪಟ್ಟಣ ಪುರಸಭೆಯ 7 ವಾರ್ಡ್‌ಗಳಲ್ಲಿ ಈ ಸಮಸ್ಯೆ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಿರುವ ಜಿಲ್ಲಾ ನಗರಾಭಿವೃದ್ಧಿ ಕೋಶವು, ಟ್ಯಾಂಕರ್ ಮೂಲಕ ಜನರಿಗೆ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ತೆಗೆದುಕೊಂಡಿದೆ.

ಮೇವಿನ ಕೊರತೆ ಇಲ್ಲ

ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿಲ್ಲ. ಸದ್ಯಕ್ಕೆ ಜಿಲ್ಲೆಯಲ್ಲಿ 12.11 ಟನ್‌ನಷ್ಟು ಮೇವು ಲಭ್ಯತೆ ಇದೆ. ಇದು ಮುಂದಿನ 55 ವಾರಗಳಿಗೆ ಸಾಕಾಗಲಿದೆ. ಆದ್ದರಿಂದ ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗುವುದಿಲ್ಲ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರಿದ್ದು, ಮೇ ಅಂತ್ಯದವರೆಗೂ ಕುಡಿಯುವ ನೀರಿಗೆ ತೊಂದರೆ ಇಲ್ಲ. ಮುಂದಿನ ದಿನಗಳಲ್ಲಿ 94 ಗ್ರಾಮಗಳಲ್ಲಿ ನೀರಿನ ಕೊರತೆ ಆಗುಬಹುದು. ನಗರ ಪ್ರದೇಶದಲ್ಲಿ ಯಾವುದೇ ನೀರಿನ ಕೊರತೆ ಇಲ್ಲ. ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲಿಯೂ ಕಂಡು ಬರುತ್ತಿಲ್ಲ. ಜೂನ್ ಹೊತ್ತಿಗೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಕ್ರಿಯಾಯೋಜನೆ ರೂಪಿಸಲಾಗಿದೆ. ರಂಜಿತ್‌ಕುಮಾರ್, ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net