

ಮೈಸೂರು: ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ ಪ್ರಸ್ತಕ ಸಾಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ(ಡಿಎಆರ್) ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಜ್ಯೋತಿನಗರದ ಡಿಎಆರ್ ಕವಾಯತು ಮೈದಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್‌ಮಧುಕರ್ ಪವಾರ್ ಬಹುಮಾನ ವಿತರಿಸಿದರು. ಎಸ್‌ಪಿ ಆರ್.ಚೇತನ್ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು
ಡಿಎಆರ್, ಮೈಸೂರು ಗ್ರಾಮಾಂತರ ಘಟಕ, ನಂಜನಗೂಡು ಉಪವಿಭಾಗ, ಹುಣಸೂರು ಉಪವಿಭಾಗ, ವಿಶೇಷ ಘಟಕ ಮತ್ತು ಮಹಿಳಾ ತಂಡ ಸೇರಿದಂತೆ ಆರು ತಂಡಗಳು ಪಾಲ್ಗೊಂಡಿದ್ದವು. ಇದರಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಮೇಲುಗೈ ಸಾಧಿಸಿದ ಡಿಎಆರ್ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
100 ಮೀ., 200 ಮೀ., 400 ಮೀ.ಓಟ, ಉದ್ದಜಿಗಿತ, ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದ ಡಿಎಆರ್‌ನ ಜಿ.ಜಿ.ರಘುನಂದನ ಪುರುಷ ವಿಭಾಗದಲ್ಲಿ ಮತ್ತು 100, 200 ಮೀ. ಓಟ, ಉದ್ದ ಜಿಗಿತ, ಶಾಟ್‌ಪುಟ್, ಡಿಸ್ಕಸ್ ಥ್ರೋ ಪ್ರಥಮ ಸ್ಥಾನ ಪಡೆದ ನಂಜನಗೂಡು ಉಪವಿಭಾಗದ ಎಚ್.ಎಸ್.ಅಶ್ವಿತಾ ಮಹಿಳಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದು ಸಂಭ್ರಮಿಸಿದರು.