

ಚಿತ್ರದುರ್ಗ: ಹಿರಿಯೂರು ತಾಲೂಕು ಐಮಂಗಲ ಸಮೀಪದ ಬೇಚರಾಕ್ ಗ್ರಾಮ ಜಾಲನಕಟ್ಟೆಯಲ್ಲಿ ಮೈಸೂರಿನ ಒಡೆಯರ ಕಾಲದ 1810ನೇ ಇಸವಿಯ ಶಾಸನವೊಂದು ಪತ್ತೆಯಾಗಿದೆ ಎಂದು ಸಂಶೋಧಕ ಮಹೇಶ್ ಕುಂಚಿನಗನಾಳು ತಿಳಿಸಿದ್ದಾರೆ.
ತಾವು ಈಚೆಗೆ ಕೈಗೊಂಡಿದ್ದ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಪತ್ತೆಯಾದ ಈ ಶಾಸನದಲ್ಲಿ ಹನ್ನೊಂದು ಸಾಲುಗಳಿವೆ. 1810 ಡಿಸೆಂಬರ್ 10ನೇ ತಾರೀಖು ಸೋಮವಾರ ಎಂದು ಉಲ್ಲೇಖವಿರುವ ಶಾಸನದಲ್ಲಿ ಜಾಲಡು ಗ್ರಾಮದ ಕೆಂಚಯ್ಯನ ಮೊಮ್ಮಗ ಜಡೆಯಪ್ಪ ಇಲ್ಲಿನ ಹನುಮಂತ ದೇವರ ವಿಗ್ರಹ ಕೆತ್ತಿಸಿದ ವಿವರವಿದೆ. ಶಾಸನದ 2ನೇ ಭಾಗದಲ್ಲಿ ಇನ್ನಷ್ಟು ವಿವರಗಳಿವೆ.
ಇಲ್ಲಿ ಯಥೇಚ್ಛವಾಗಿ ಜಾಲಿ ಗಿಡಗಳು ಬೆಳೆದಿದ್ದರಿಂದ ಹಾಗೂ ನೀರು ಸಂಗ್ರಹಕ್ಕೆ ಕಟ್ಟೆ ಇರುವುದರಿಂದ ಜಾಲನಕಟ್ಟೆ ಎಂಬ ಹೆಸರು ಬಂದಿರಬಹುದು ಎಂದು ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.
ದೇವರ ಕಂಚಿನ ತೇರು ಇಲ್ಲಿನ ಮಜ್ಜನ ಬಾವಿಯಲ್ಲಿ ಮುಳುಗಿದಾಗ ಊರಿಗೆ ಕೆಡುಕುಂಟಾಗಿ ಪಕ್ಕದ ದಾಸಯ್ಯನ ಮಾಳಿಗೆಗೆ ಜನರು ವಲಸೆ ಹೋದರೆಂಬ ಐತಿಹ್ಯವಿದೆ ಎಂದು ಹನುಮಂತ ದೇವರ ಅರ್ಚಕ ರಂಗಪ್ಪ ತಿಳಿಸಿದ್ದಾರೆ.
ಕ್ಷೇತ್ರಕಾರ್ಯಕ್ಕೆ ಉಪನ್ಯಾಸಕರಾದ ರಘುರಾಮ್, ರಾಜೇಶ್‌ತೀರ್ಥ ಮಾರ್ಗದರ್ಶನ ನೀಡಿದರು. ಶಾಸನ ಓದಿದ ಶಾಸನ ತಜ್ಞ ಸ್ಮಿತಾರೆಡ್ಡಿ, ಕಾಲದ ಮಾಹಿತಿ ನೀಡಿದ ಶಶಿಕುಮಾರ್‌ನಾಯಕ್ ಹಾಗೂ ಕ್ಷೇತ್ರಕಾರ್ಯದಲ್ಲಿ ಪ್ರತ್ಯುಷ್, ಪ್ರಬುದ್ಧ ನೆರವು ನೀಡಿದ್ದಾರೆ ಎಂದು ಮಹೇಶ್ ತಿಳಿಸಿದ್ದಾರೆ.