

ಮೈಸೂರು: ನಗರದ ಉದಯಗಿರಿಯಲ್ಲಿ ಸೋಮವಾರ ರಾತ್ರಿ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ 8 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉದಯಗಿರಿಯಲ್ಲಿ ಪರಿಸ್ಥಿತಿ ಸಂಪೂರ್ಣ ತಿಳಿಗೊಂಡಿದ್ದು, ಸಹಜಸ್ಥಿತಿಗೆ ಮರಳಿದೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ರಾಜಕೀಯ ಹಾಗೂ ಧಾರ್ಮಿಕ ವಿಚಾರಗಳ ವಿವಾದಿತ ಪೋಸ್ಟ್‌ಅನ್ನು ಹಂಚಿಕೊಂ ಡಿದ್ದರು. ಇದು ವಿವಾದದ ಕಿಡಿ ಹೊತ್ತಿಸಿ ಗುಂಪೊಂದು ಉದಯಗಿರಿ ಪೊಲೀಸ್ ಠಾಣೆ ಮೇಲೆ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿ ಚಾರ್ಚ್ ಮಾಡಿದ್ದರು.
50ಕ್ಕೂ ಹೆಚ್ಚು ಜನರು ಕಲ್ಲು ತೂರಠ ನಡೆಸಿರುವುದು ಕಂಡು ಬಂದಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಆಧರಿಸಿ ಉದಯಗಿರಿ, ಗೌಸಿಯಾನಗರ, ಶಾಂತಿನಗರ, ರಾಜೀವ್ ನಗರ ಬಡಾವಣೆ ನಿವಾಸಿಗಳಾದ ಇಜಾಜ್, ಸಾದಿಕ್ ಪಾಷ, ಅರ್ಬಾಜ್ ಷರೀಫ್, ಶೋಹೆಬ್ ಪಾಷ, ಸುಹೇಲ್, ರಹೀಲ್, ಅಯಾನ್, ಸೈಯದ್ ಸಾದಿಕ್ ಅವರುಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದೆರಡು ದಿನಗಳೊಳಗೆ ಮತ್ತಷ್ಟು ಆರೋಪಿಗಳು ಸೆರೆಯಾಗುವ ಸಾಧ್ಯತೆ ಇದೆ.
ಪ್ರಕರಣದ ತನಿಖೆಯನ್ನು ಮೈಸೂರಿನ ಸಿಸಿಬಿ ಪೊಲೀಸರಿಗೆ ವಹಿಸಲಾಗಿದ್ದು, ತನಿಖೆ ಕೈಗೊಂಡಿರುವ ಸಿಸಿಬಿ ಎಸಿಪಿ ಸಂದೇಶ್ ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಪೂವಯ್ಯ, ಮೋಹನ್ ಹಾಗೂ ಸಿಬ್ಬಂದಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಘಟನೆಗೆ ಕಾರಣರಾದವರ ಗುರುತು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಪ್ರಚೋದನಕಾರಿ ಭಾಷಣ:
ಈ ಘಟನೆಗೆ ಮೌಲ್ವಿಯೊಬ್ಬರ ಪ್ರಚೋದನಕಾರಿ ಭಾಷಣವೇ ಪ್ರಮುಖ ಕಾರಣ ಎನ್ನಲಾಗುತ್ತಿದ್ದು ಪೊಲೀಸರು ವೀಡಿಯೋ, ಆಡಿಯೋಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ. ಪ್ರಚೋದನಾಕಾರಿ ಭಾಷಣದಿಂದ ಉದ್ರಿಕ್ತಗೊಂಡ ಗುಂಪು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿತ್ತು. ಮುಂಜಾಗ್ರತಾ ಕ್ರಮವಾಗಿ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಊರು ತೊರೆದ ಆರೋಪಿಗಳು:
ಪೊಲೀಸರ ಮೇಲೆ ಕಲ್ಲು ತೂರಿದ ಬಹುತೇಕರು ಬಂಧನದ ಭೀತಿಯಿಂದ ಊರು ತೊರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರಿಂದ ಬಂಧನಕ್ಕೊಳಗಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಬಹುತೇಕರು ಕಣ್ಮರೆಯಾಗಿದ್ದಾರೆ. ಆರೋಪಿಗಳ ಮನೆ ಕದ ತಟ್ಟಿದ ಪೊಲೀಸರು ಬರಿಗೈಯಲ್ಲಿ ವಾಪಸಾಗುತ್ತಿದ್ದಾರೆ. ಗಲಾಟೆ ನಡೆದ ಸ್ಥಳದಲ್ಲಿನ ಟವರ್ ಲೊಕೇಶನ್ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಆರೋಪಿಗಳು ತಮ್ಮ ಮೊಬೈಲ್ಅನ್ನು ಮನೆಯಲ್ಲೇ ಬಿಟ್ಟು ಊರು ಬಿಟ್ಟಿದ್ದಾರೆ ಹೀಗಾಗಿ ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ತುಸು ಹಿನ್ನಡೆ ಆಗಿದೆ. ಆದರೂ ಬೆನ್ನುಬಿಡದ ಪೊಲೀಸರು ಆರೋಪಿಗಳ ಸಂಬಂಧಿಕರ ಮನೆ ಜಾಲಾಡುತ್ತಿದ್ದಾರೆ.
ಸದ್ಯ ಪ್ರಕರಣ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು, ಉದಯಗಿರಿ ಪೊಲೀಸ್ ಠಾಣೆ ಮುಖ್ಯ ರಸ್ತೆಯ ಬಹುತೇಕ ಸಿಸಿ ಟಿವಿಗಳ ಡಿವಿಆರ್ ವಶಕ್ಕೆ ಪಡೆದುಕೊಂಡು ಅದರಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆ ಕಾರ್ಯ ಶುರು ಮಾಡಿದ್ದಾರೆ.
ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದಿರುವ ದಾಳಿಗೆ ರಾಜ್ಯ ಸರ್ಕಾರದ ಪರೋಕ್ಷ ಕುಮ್ಮಕ್ಕು ಕಾರಣ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಿಎಂ ಸಿದ್ದರಾಮಯ್ಯ ಮುಡಾದಲ್ಲಿ ಮುಳುಗಿ ಹೋಗಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಬರುವುದಿಲ್ಲ. ಯಾವಗೆಲ್ಲ ಕಾಂಗ್ರೆಸ್ ಸರ್ಕಾರ ಬರುತ್ತದೆಯೋ ಆವಗೆಲ್ಲ ಒಂದು ಕೋಮಿನ ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದು ಕೋಮಿನವರು ‘ಇದು ನಮ್ಮ ಸರ್ಕಾರ ನಮ್ಮಿಂದಾಗಿ ಸರ್ಕಾರ ಬಂತು’ ಎಂದು ಹೇಳಿಕೆ ನೀಡುತ್ತಾರೆ. ಅದಕ್ಕೆ ಸರಿಯಾಗಿ ಕಾಂಗ್ರೆಸ್ ನಾಯಕರು ‘ನಾವು ಇಲ್ಲಿ ಕೂತಿರುವುದೇ ಅವರಿಂದ’ ಎಂದು ಹೇಳಿಕೆ ನೀಡುತ್ತಾರೆ. ಒಂದು ಕೋಮಿನವರು ನಡೆದಿದ್ದೇ ದಾರಿ ಎಂಬಂತಾಗಿದೆ. ಪೊಲೀಸರ ಮೇಲೆ ದಾಳಿ ನಡೆದ ಸಂದರ್ಭ ಸರ್ಕಾರ ಅವರ ರಕ್ಷಣೆ ಬಾರದೆ ಇದ್ದರೆ ಪೊಲೀಸರು ನಮ್ಮನ್ನು ಹೇಗೆ ರಕ್ಷಣೆ ಮಾಡುತ್ತಾರೆ.
ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ