ಮೈಸೂರು: ಆಟೋರಿಕ್ಷಾ ಚಾಲಕರ ಪ್ರತಿಭಟನೆ

2
Published on

ಮೈಸೂರು: ರ‌್ಯಾಪಿಡೋ ವೈಟ್‌ಬೋರ್ಡ್ ಬೈಕ್ ಸಂಚಾರವನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಮೈಸೂರು ಆಟೋರಿಕ್ಷಾ ಸರ್ವಿಸ್ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.


ನಗರ ವ್ಯಾಪ್ತಿಯಲ್ಲಿ ರ‌್ಯಾಪಿಡೊ ವೈಟ್‌ಬೋರ್ಡ್ ಸ್ಕೂಟರ್ ಮತ್ತು ಬೈಕ್‌ಗಳು ದರ ನಿಗದಿ ಮಾಡಿಕೊಂಡು ಆಟೋ ರಿಕ್ಷಾಗಳಿಗೆ ಪರ್ಯಾಯ ಸಾರಿಗೆ ಸೇವೆ ನೀಡುತ್ತಿದ್ದು, ಅಧಿಕಾರಿಗಳು ಶೀಘ್ರವೇ ಸಾರಿಗೆ ಅದಾಲತ್ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.


ವೈಟ್‌ಬೋರ್ಡ್ ದ್ವಿಚಕ್ರವಾಹನ ಮೂಲಕ ರ‌್ಯಾಪಿಡೋ ಸೇವೆ ಇರುವುದರಿಂದ ಆಟೋರಿಕ್ಷಾ ನಂಬಿಕೊಂಡಿರುವ ಸಾವಿರಾರು ಆಟೋ ಚಾಲಕರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಜತೆಗೆ ಸಾಲದ ಮೂಲಕ ಆಟೋ ಖರೀಸಿರುವ ಚಾಲಕರು ಸರಿಯಾದ ಸಮಯಕ್ಕೆ ಬ್ಯಾಂಕ್‌ಗಳಿಗೆ ಸಾಲ ಪಾವತಿಸಲಾಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಕುಟುಂಬ ನಿರ್ವಹಿಸಲಾಗುತ್ತಿಲ್ಲ. ಕೂಡಲೇ ಈ ಸಮಸ್ಯೆ ಬಗೆಹರಿಸಲು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಈ ಬೈಕ್ ಸಂಚಾರವನ್ನು ನಿರ್ಬಂಧಿಸಬೇಕು. ಜತೆಗೆ ಈ ಸೇವೆ ನೀಡುವ ಆ್ಯಪ್ ಅನ್ನು ಸ್ಥಗಿತಗೊಳಿಸಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಟ್ರಸ್ಟ್ ಅಧ್ಯಕ್ಷ ಬಿ.ನಾಗರಾಜು, ಚಾಲಕರಾದ ಮಂಜುನಾಥ್, ರಾಜು, ಸತ್ಯ, ಲಕ್ಷ್ಮೀನಾರಾಯಣ್, ದೊಡ್ಡದೇವಪ್ಪ, ವಸಂತಕುಮಾರ್, ಕೆಂಪರಾಜೇ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net