

ಮೈಸೂರು: ಡಿಜಿಟಲ್ ಯುಗದಲ್ಲಿ ಹಳೇ ರೇಡಿಯೋಗಳ ಪ್ರದರ್ಶನ ಕಣ್ಮನ ಸೆಳೆಯಿತು.
ಮೈಸೂರು ಆಕಾಶವಾಣಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಹಬ್ಬ’ ಪುರಾತನ ರೇಡಿಯೋಗಳಿಗೆ ವೇದಿಕೆಯಾಯಿತು.
ಈಗಿನ ಕಾಲದ ಯುವಜನರು ಹಳೇ ರೇಡಿಯೋಗಳನ್ನು ನೋಡಿಲ್ಲ. ಇವುಗಳು ಈಗ ಮನೆಯಲ್ಲೂ ಲಭ್ಯ ಇಲ್ಲ. ಹಿಂದಿನ ತಲೆಮಾರಿನವರ ಸಂಗಾತಿಯಾಗಿದ್ದ ಇವುಗಳೆಲ್ಲ ಈಗಾಗಲೇ ಗುಜರಿ ಸೇರಿ ಕಾಲಗರ್ಭದಲ್ಲಿ ಮರೆಯಾಗಿ ಹೋಗಿವೆ. ಇಂತಹ ಗತಿಸಿ ಹೋಗಿರುವ ರೇಡಿಯೋಗಳ ಪ್ರದರ್ಶನ ವಿಶೇಷವಾಗಿತ್ತು. ಇದನ್ನು ನೋಡಿದ ಹಿರಿಯರು ಹಳೇ ನೆನಪುಗಳನ್ನು ಸ್ಮರಿಸಿಕೊಂಡು ಸಂಭ್ರಮಿಸಿದ ದೃಶ್ಯ ಕುತೂಹಲಕಾರಿಯಾಗಿತ್ತು.
ತಂತ್ರಜ್ಞಾನ ಕ್ಷೇತ್ರ ಬೆಳೆದಂತೆ ಕಾಲ ಕಾಲಕ್ಕೆ ರೇಡಿಯೋ ಕೂಡ ಪರಿವರ್ತನೆಗೊಂಡಿತು. ದೊಡ್ಡ ಗಾತ್ರದ ರೇಡಿಯೋ ಕಾಲ ಕಳೆದಂತೆ ಚಿಕ್ಕದಾಗುತ್ತ ಬಂದಿದೆ. ಇದೀಗ ನ್ಯಾನೋ ಟೆಕ್ನಾಲಜಿಯಲ್ಲೂ ಬಾನುಲಿ ಅಸ್ತಿತ್ವ ಉಳಿಸಿಕೊಂಡಿದೆ. ಅಂಗೈನಲ್ಲೇ ಮಾಯಾಲೋಕ ತೋರಿಸುವ ಮೊಬೈಲ್ ತಂತ್ರಜ್ಞಾನದಿಂದ ರೇಡಿಯೋ ಮಾಧ್ಯಮಕ್ಕೆ ಮರುಜನ್ಮ ದೊರೆತಿದೆ. ಆದರೆ, ಹಳೇ ಕಾಲದ ರೇಡಿಯೋಗಳು ಮೂಲೆ ಸೇರಿವೆ. ಹೀಗಾಗಿ, 50 ವರ್ಷಗಳ ಹಿಂದೆ ಬಳಕೆಯಲ್ಲಿದ್ದ ರೇಡಿಯೋ, ಉಪಕರಣಗಳ ಪ್ರದರ್ಶನ ಎಲ್ಲರ ಕೇಂದ್ರಬಿಂದು ಆಗಿತ್ತು.
50 ವರ್ಷಗಳ ಹಿಂದೆ ಆಕಾಶವಾಣಿ ಕಾರ್ಯಕ್ರಮಗಳು ಯಾವ ರೀತಿ ಪ್ರಸಾರವಾಗುತ್ತಿದ್ದವು, ಧ್ವನಿ ಸಂಗ್ರಹವನ್ನು ಯಾವ ರೀತಿ ಮಾಡಲಾಗುತ್ತಿತ್ತು ಎಂಬುದು ಸೇರಿದಂತೆ ಐದಾರು ಪೀಳಿಗೆಯ ಸಂಗೀತ ಉಪಕರಣ ಇಲ್ಲಿ ನೋಡಲು ದೊರೆತವು. ಯುವ ಸಮೂಹಕ್ಕೆ ಮಾಹಿತಿ ನೀಡಲೆಂದು ಪ್ರದರ್ಶನ ಏರ್ಪಡಿಸಲಾಗಿತ್ತು. ಐದು ದಶಕಗಳ ಹಿಂದೆ ಬಳಸುತ್ತಿದ್ದ ಉಪಕರಣಗಳು ಇಲ್ಲಿದ್ದವು. ಟ್ರಾನ್ಸ್‌ಮೀಟರ್, ಡೈನಾಮಿಕ್, ಮೈಕ್, ಟೇಪ್‌ರೆಕಾರ್ಡ್, ಟರ್ನ್ ಟೇಬಲ್ ಕುರಿತು ಆಕಾಶವಾಣಿ ಮೈಸೂರು ಕೇಂದ್ರದ ತಂತ್ರಜ್ಞ ವೆಂಕಟೇಶ್ ಮಾಹಿತಿ ನೀಡಿದರು.
ಕಳೆಗಟ್ಟಿದ ಕನ್ನಡ ಹಬ್ಬ:
ಆಕಾಶವಾಣಿ ಮೈಸೂರು ಕೇಂದ್ರ ತನ್ನ ನುಡಿ ಸೇವೆಯಲ್ಲಿ 87 ವರ್ಷ ಪೂರೈಸಿ 88ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ಕನ್ನಡದ ನುಡಿ ಸೇವೆಯಲ್ಲಿ ನಿತ್ಯ ನಿರತವಾಗಿರುವ ಆಕಾಶವಾಣಿಯ ಕನ್ನಡ ಹಬ್ಬ ಕಳೆಗಟ್ಟಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ಆಕಾಶವಾಣಿ ಕೇಂದ್ರಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ದೊರೆಯಿತು. ಧ್ವನಿಮುದ್ರಣ ಮತ್ತು ಪ್ರಸಾರ ಸ್ಟುಡಿಯೋಗಳಿಗೂ ಜನರು ಭೇಟಿ ನೀಡಿ ಆಕಾಶವಾಣಿ ಕಾರ್ಯವೈಖರಿಯನ್ನು ಕೌತುಕದಿಂದ ವೀಕ್ಷಿಸಿದರು. ಬೆಂಗಳೂರು, ಹಾಸನ, ಮಂಡ್ಯ, ಮೈಸೂರು ಗ್ರಾಮಾಂತರ ಸೇರಿದಂತೆ ವಿವಿಧೆಡೆಯಿಂದ ಆಕಾಶವಾಣಿ ಕೇಳುಗರು, ಅಭಿಮಾನಿಗಳು ಇಲ್ಲಿಗೆ ಲಗ್ಗೆ ಇಟ್ಟಿದ್ದರು. ಆಕಾಶವಾಣಿ ತಂತ್ರಜ್ಞಾನವನ್ನು ನೋಡಲು ಜನರ ಸರದಿ ಸಾಲು ನೆರೆದಿತ್ತು. ಆಕಾಶವಾಣಿ ಕಾರ್ಯಕ್ರಮಗಳು ಯಾವ ರೀತಿ ಪ್ರಸಾರವಾಗುತ್ತದೆ. ಸ್ಟುಡಿಯೋ ಯಾವ ರೀತಿಯಲ್ಲಿದೆ ಎಂಬುದನ್ನು ಜನರು ಖುದ್ದು ವೀಕ್ಷಿಸಿದರು. ಜತೆಗೆ, ಯುವಜನರು ಮೊಬೈಲ್ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಡಗರಪಟ್ಟರು. ಇಂತಹ ಅನೇಕ ದೃಶ್ಯಾವಳಿಗಳು ಕನ್ನಡ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದವು.