ಮೈಸೂರು ಅರಮನೆಯಲ್ಲಿ ಜೂ.21ಕ್ಕೆ ಯೋಗ ದಿನಾಚರಣೆ

mysore
Published on

ಮೈಸೂರು: ಯೋಗ ದಿನಾಚರಣೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.

ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ಮಾತನಾಡಿ, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮೈಸೂರು ಅರಮನೆ ಮೈದಾನದಲ್ಲಿ ಆಯೋಜಿಸಲಾಗುವುದು. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಮೈಸೂರು ಯೋಗಕ್ಕೆ ವಿಶ್ವ ಪ್ರಸಿದ್ಧವಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚು ಸಾರ್ವಜನಿಕರು ಭಾಗವಹಿಸುವುದು ಮುಖ್ಯವಾಗಿದೆ. ಅಂದು ಬೆಳಗ್ಗೆ 6ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ. 15 ಸಾವಿರ ಯೋಗಪಟುಗಳು ಭಾಗವಹಿಸಲಿದ್ದಾರೆ. ಸರ್ಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಸಲಾಗುವುದು. ಇದಕ್ಕೆ ಬೇಕಾದ ಸಿದ್ಧತೆಯನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಯೋಗದಲ್ಲಿ ಭಾಗವಹಿಸುವವರು ಟೀ ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್ ಧರಿಸಿರಬೇಕು. ಯೋಗ ಮ್ಯಾಟ್ ಅವರೇ ತರಬೇಕು. ಜೂನ್ 15ರಂದು ಪೂರ್ವಾಭ್ಯಾಸ ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ಹೇಳಿದರು.

ಜೆಎಸ್‌ಎಸ್ ಸಂಸ್ಧೆ, ಸಿಸ್ಮಾಮ್ ಸ್ಕೂಲ್ ಮ್ಯಾನೇಜ್‌ಮೆಂಟ್, ಯೋಗ ಫೆಡರೇಷನ್, ಯೋಗ ಒಕ್ಕೂಟ, ಯೋಗ ತರಬೇತಿ ಸಂಸ್ಥೆ, ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಯೋಗ ನಡೆಯುವ ಸ್ಥಳದಲ್ಲಿ ತುರ್ತು ಸೇವೆಗೆ ಅಂಬುಲೆನ್ಸ್, ಅಗ್ನಿಶಾಮಕ ವಾಹನ, ಕುಡಿಯುವ ನೀರು ಹಾಗೂ ಇನ್ನಿತರ ಮೂಲ ಸೌಕರ್ಯ ಒದಗಿಸಬೇಕು.

ಮಹಾನಗರ ಪಾಲಿಕೆಯಿಂದ ಸ್ವಚ್ಛತೆ ಹಾಗೂ ನೀರಿನ ವ್ಯವಸ್ಥೆ, ಕೆಎಸ್‌ಆರ್‌ಟಿಸಿ ವತಿಯಿಂದ ಯೋಗಾಸಕ್ತರಿಗೆ ಬಸ್‌ನ ವ್ಯವಸ್ಥೆ ಹಾಗೂ ಅರಮನೆ ಮಂಡಳಿಯಿಂದ ಅರಮನೆ ಆವರಣದಲ್ಲಿ ಸ್ಥಳಾವಕಾಶ ವ್ಯವಸ್ಥೆ ಹಾಗೂ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯಲು ಹೆಚ್ಚಿನ ಸ್ವಯಂ ಸೇವಕರನ್ನು ನೇಮಿಸಲು ಅಗತ್ಯ ಕ್ರಮ ಕೈಗೊಳ್ಳವಂತೆ ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ತಿಳಿಸಿದರು.

ಪ್ರಚಾರದ ಪೋಸ್ಟರ್ ಬಿಡುಗಡೆ

ಯೋಗದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಬೇಕು. ಕಾರ್ಯಕ್ರಮಕ್ಕೆ ಅಗತ್ಯ ಪ್ರಚಾರ ನೀಡುವಂತೆಯೂ ಸೂಚಿಸಿದರು. ಯೋಗ ದಿನದ ಪ್ರಚಾರ ಸಾಮಗ್ರಿ, ಪೋಸ್ಟರ್‌ಗಳನ್ನು ಅಪರ ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು.

ಅರಮನೆ ಮಂಡಳಿಯ ಉಪ ನಿರ್ದೇಶಕ ಸುಬ್ರಹ್ಮಣ್ಯ, ಡಿಡಿಪಿಐ ಜವರೇಗೌಡ, ಆಯುಷ್ ಅಧಿಕಾರಿ ರೇಣುಕಾದೇವಿ, ಯೋಗ ಒಕ್ಕೂಟದ ಪದಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net