ಮೈಸೂರು ಅರಮನೆಯ ಪ್ರವೇಶ ದರ ಏರಿಕೆ

mysore
Published on

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ಪ್ರವೇಶ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದ್ದು, ಅ.25ರಿಂದ ಜಾರಿಗೆ ಬರಲಿದೆ.

ಅರಮನೆ ವೀಕ್ಷಣೆಗಾಗಿ ನಿತ್ಯ ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅರಮನೆಯ ಒಳಾವರಣದಲ್ಲಿ ಬರುವ ಚಪ್ಪಲಿ ಸ್ಟಾೃಂಡ್, ಲಗ್ಗೇಜ್ ಕೊಠಡಿ ಮತ್ತು ಶೌಚಗೃಹಗಳನ್ನು ಪ್ರವಾಸಿಗರಿಗೆ ಉಚಿತಗೊಳಿಸಿ, ಅರಮನೆಯ ಪ್ರವೇಶ ಶುಲ್ಕ ಪರಿಷ್ಕರಿಸಲಾಗಿದೆ.

ಅದರಂತೆ ವಯಸ್ಕರಿಗೆ 120 ರೂ., 10ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂ.(10 ವರ್ಷದೊಳಗಿನ ಮಕ್ಕಳಿಗೆ ಉಚಿತ), ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರ 50 ರೂ. ಹಾಗೂ ವಿದೇಶಿ ಪ್ರವಾಸಿಗರಿಗೆ 1,000 ರೂ. ಅನುಮೋದಿತ ಪರಿಷ್ಕೃತ ಶುಲ್ಕವನ್ನು ನಿಗದಿ ಮಾಡಲಾಗಿದೆ ಎಂದು ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಸುಬ್ರಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಭೇಟಿ ನೀಡುವ ಅರಮನೆ ಪ್ರವೇಶಕ್ಕೆ ಈ ಮೊದಲು ದೊಡ್ಡವರಿಗೆ 100 ರೂ., ಮಕ್ಕಳಿಗೆ 50 ರೂ. ಟಿಕೆಟ್ ದರ, ವಿದ್ಯಾರ್ಥಿಗಳ ರಿಯಾಯಿತಿ ಟಿಕೆಟ್ 30 ರೂ. ಇತ್ತು. ಈ ಮೂರು ಪ್ರಕಾರದ ಟಿಕೆಟ್ ದರವನ್ನು 20 ರೂ. ಹೆಚ್ಚಿಸಲಾಗಿದೆ. ಟಿಕೆಟ್ ದರ ದುಬಾರಿಯಾಗಿದೆ. ಇದು ಪ್ರವಾಸಿಗರಿಗೆ ಆರ್ಥಿಕ ಹೊರೆಯಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಸರಕು ಮತ್ತು ಸೇವಾ ತೆರಿಗೆ ಸೇರಿಸಿ ಟಿಕೆಟ್ ದರ ಹೆಚ್ಚಿಸಿದ್ದು, ಪ್ರವೇಶ ಶುಲ್ಕಕ್ಕೆ ಶೇ.18ರಷ್ಟು ಜಿಎಸ್‌ಟಿ ಇದೆ. ಈ ಹಿಂದೆ ಅರಮನೆ ಆಡಳಿತ ಮಂಡಳಿಯಿಂದಲೇ ಇದನ್ನು ಪಾವತಿ ಮಾಡಲಾಗುತ್ತಿತ್ತು. ಈಗ ತೆರಿಗೆ ಹೊರೆಯನ್ನು ಪ್ರವೇಶ ಶುಲ್ಕದೊಂದಿಗೆ ಸೇರಿಸಿ ಸರಿದೂಗಿಸಲಾಗಿದೆ. ತೆರಿಗೆ ಭಾರ ಇದೀಗ ವೀಕ್ಷಕರ ಮೇಲೆ ವರ್ಗಾವಣೆಯಾಗಿದೆ.

ಧ್ವನಿ-ಬೆಳಕು ಪುನರಾರಂಭ:

ನಾಡಹಬ್ಬ ದಸರಾ ಸಂಬಂಧ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ ಮೈಸೂರು ಅರಮನೆ ಆವರಣದಲ್ಲಿ ಸಂಜೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಪುನರಾರಂಭಗೊಳ್ಳಲಿದೆ. ಮೈಸೂರಿನ ಗತವೈಭವ ಮತ್ತು ಅರಮನೆಯ ಚರಿತ್ರೆಯನ್ನು ಬಿಂಬಿಸುವ, ಬಹುನಿರೀಕ್ಷಿತ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಗುರುವಾರ ಸಂಜೆ ಮರು ಚಾಲನೆ ದೊರೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net