ಮೈಸೂರು ಅರಮನೆ ನೋಡ ಬೇಕೆಂದ ಬಾಲ ಮಂದಿರದ ಮಕ್ಕಳು

CTD BALAMANIDIRA-CEO..............
Published on

ಚಿತ್ರದುರ್ಗ: ನಗರದ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಬಾಲ ಮಂದಿರಗಳಿಗೆ ಮಂಗಳವಾರ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಭೇಟಿ ನೀಡಿ ಹಾಜರಾತಿ, ಸೌಲಭ್ಯಗಳನ್ನು ಪರಿಶೀಲಿಸಿದರು.

ಬಾಲಕರ ಬಾಲಮಂದಿರದಲ್ಲಿ 30, ಬಾಲಕಿಯರ ಬಾಲಮಂದಿರದಲ್ಲಿ 29 ಮಕ್ಕಳು ದಾಖಲಾಗಿರು ಬಗ್ಗೆ ಮಾಹಿತಿ ಪಡೆದ ಅವರು, ಎಲ್ಲ ಮಕ್ಕಳಿಗೂ ಗುಣಮಟ್ಟದ ಸೌಲಭ್ಯ ಒದಗಿಸುವಂತೆ ತಾಕೀತು ಮಾಡಿದರು.

ಸಂಕಷ್ಟದಲ್ಲಿರುವ ಮಕ್ಕಳ ಪೋಷಣೆ, ರಕ್ಷಣೆಗೆ ಸರ್ಕಾರ ಬಾಲಮಂದಿರಗಳನ್ನು ಸ್ಥಾಪಿಸಿದೆ. ಮಕ್ಕಳಿಗೆ ಉತ್ತಮ ಆಪ್ತ ಸಮಾಲೋಚನೆ ನಡೆಸುವ ಮೂಲಕ ಮಾನಸಿಕ ಸ್ಥೈರ್ಯ ತುಂಬಬೇಕು. ಉತ್ತಮ ಊಟೋಪಹಾರ, ಕಾಲ ಕಾಲಕ್ಕೆ ಅಗತ್ಯ ವೈದ್ಯಕೀಯ ನೆರವಿನ ಜತೆಗೆ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಿಬ್ಬಂದಿಗೆ ಸೂಚಿಸಿದರು.

ಅಡುಗೆ ಮನೆ, ಮೆನು, ಸಿದ್ಧಪಡಿಸಿದ್ದ ಅಡುಗೆಯನ್ನು ಪರಿಶೀಲಿಸಿದರು. ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ ವಿತರಣೆ ಹಾಗೂ ಸ್ವಚ್ಛತೆಗೆ ನಿಗಾ ವಹಿಸುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು.

ಶೈಕ್ಷಣಿಕ ಪ್ರಗತಿ ಕುರಿತಂತೆ ಮಕ್ಕಳು ಹಾಗೂ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದರು. ಮಕ್ಕಳ ಆರೋಗ್ಯ ಮತ್ತು ಆರೈಕೆಗಳ ಕುರಿತು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಚೆಸ್, ಕೇರಂ ಮುಂತಾದ ಆಟದ ಸಾಮಗ್ರಿ ಬೇಕು, ಮೈಸೂರು ಅರಮನೆ, ಮೃಗಾಲಯ ಮತ್ತಿತರ ಪ್ರವಾಸಿ ತಾಣಗಳನ್ನು ವೀಕ್ಷಿಸಬೇಕೆಂಬ ಆಸೆಯನ್ನು ಮಕ್ಕಳು ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಸಿಇಒ ಶೀಘ್ರದಲ್ಲೇ ಪ್ರವಾಸಿ ತಾಣಗಳಿಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುವುದು. ಲ್ಯಾಪ್‌ಟಾಪ್‌ಗಳನ್ನು ಪೂರೈಸುವುದಾಗಿಯೂ ಭರವಸೆ ನೀಡಿದರು.

ಉಚಿತ ಸಹಾಯವಾಣಿ 1098ರ ಕುರಿತು ವ್ಯಾಪಕ ಪ್ರಚಾರಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಮಕ್ಕಳ ಶಿಕ್ಷಣಾಧಿಕಾರಿ ಸವಿತಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ ಅಧಿಕಾರಿ ಪವಿತ್ರಾ, ಬಾಲಕರ ಸರ್ಕಾರಿ ಬಾಲ ಮಂದಿರದ ಅಧೀಕ್ಷಕ ಜಿ.ವಿ. ಸಂತೋಷ, ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿಯರಾದ ಜ್ಯೋತಿ ಹಾಗೂ ಕಾವೇರಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net