ಮೈಸೂರು ಅರಮನೆ ಕೋಟೆ ಮರು ನಿರ್ಮಾಣ ಕಾರ್ಯ ಬಿರುಸು

3 (2)
Published on

ಮೈಸೂರು: ಕುಸಿದಿದ್ದ ಮೈಸೂರು ಅರಮನೆಯ ಕೋಟೆ ಮರು ನಿರ್ಮಾಣ ಕಾಮಗಾರಿ ಬಿರುಸಿನಿಂದ ಸಾಗಿದೆ.


ಸತತ ಮಳೆಯಿಂದ ವಿಶ್ವವಿಖ್ಯಾತ ಮೈಸೂರು ಅರಮನೆ ಕೋಟೆಯ ಒಂದು ಭಾಗ ಅ. 18ರಂದು ಕುಸಿದು ಬಿದ್ದಿತ್ತು. ವರಾಹ ದ್ವಾರ ಹಾಗೂ ಜಯಮಾತಾರ್ಂಡ ದ್ವಾರದ ನಡುವಿರುವ ಕುಸಿದ ಭಾಗ ಕೋಟೆಯ ಆಗ್ನೇಯ ಮೂಲೆಯಲ್ಲಿದೆ.


20 ಮೀಟರ್ ಅಗಲ ಹಾಗೂ 7 ಮೀಟರ್ ಎತ್ತರದ ಗೋಡೆ ಧರೆಗೆ ಉರುಳಿತ್ತು. ಅರಮನೆ ಆಡಳಿತ ಮಂಡಳಿ ಕೋಟೆ ಭಾಗಕ್ಕೆ ಟಾರ್ಪಾಲ್ ಹೊದಿಸಿ ಮತ್ತೆ ಕುಸಿಯದಂತೆ ಸಂರಕ್ಷಣಾ ಕ್ರಮ ವಹಿಸಿತ್ತು.


ಶಿಥಿಲಗೊಂಡಿರುವ ಕೋಟೆಯ 50 ಮೀಟರ್ ಉದ್ದದ ದುರಸ್ತಿಗೆ 39 ಲಕ್ಷ ರೂ. ಮೊತ್ತದ ಟೆಂಡರ್ ಮೊದಲೇ ಕರೆಯಲಾಗಿತ್ತು. ಇದರಲ್ಲಿ ಕುಸಿದ ಭಾಗವೂ ಸೇರಿತ್ತು. ಇದೀಗ ದುರಸ್ತಿ ಕಾರ್ಯ ಶುರುವಾಗಿದೆ.


ಭಾರಿ ಗಾತ್ರದ ಕಲ್ಲುಗಳಲ್ಲಿ ನಿರ್ಮಿತವಾದ ಗೋಡೆಯ ಕುಸಿದ ಭಾಗದ ಮರು ನಿರ್ಮಾಣ ಕಾರ್ಯ ನಡೆದಿದ್ದು, ಜೆಸಿಬಿ ಬಳಸಿ ಕಾಮಗಾರಿ ನಡೆಸಲಾಗುತ್ತಿದೆ. ನುರಿತ ತಜ್ಞರ ಮಾರ್ಗದರ್ಶನದಲ್ಲಿ ಕಾಮಗಾರಿ ಸಾಗುತ್ತಿದೆ. ಪಾರಂಪರಿಕ ಕಟ್ಟಡವಾಗಿರುವುದರಿಂದ ಮೂಲ ಸ್ವರೂಪ ಹಾಗೂ ಕಟ್ಟಲು ಬಳಸಲಾಗಿದ್ದ ವಸ್ತುಗಳಿಂದಲೇ ದುರಸ್ತಿ ಕಾಮಗಾರಿ ನಡೆದಿದೆ. 90 ದಿನಗಳೊಳಗೆ ಇದು ಮುಗಿಯುವ ನಿರೀಕ್ಷೆ ಇದೆ.


ಕಲ್ಲು ಹಾಗೂ ಸುರ್ಕಿ ಗಾರೆಯಿಂದ ನಿರ್ಮಿಸಲಾದ ಕೋಟೆಗೆ 220 ವರ್ಷಗಳ ಇತಿಹಾಸವಿದ್ದು, ಅಲ್ಲಲ್ಲಿ ಬಿರುಕುಗಳು ಮೂಡಿವೆ. ಇದು ನಿರ್ವಹಣೆ ಕೊರತೆ, ಶಿಥಿಲಗೊಂಡಿರುವುದಕ್ಕೆ ಸಾಕ್ಷಿ ಎನಿಸಿದೆ. ಇದೀಗ ಅರಮನೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net