ಮೈಸೂರು: 16 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

26
Published on

ವಿಧಾನಸಭೆ ಚುನಾವಣೆಗೆ ಗುರುವಾರ ಅಧಿಸೂಚನೆ ಪ್ರಕಟಗೊಂಡ ಬೆನ್ನಲ್ಲೇ ಜಿಲ್ಲೆಯ ಒಟ್ಟು 11 ವಿಧಾನಸಭಾ ಕ್ಷೇತ್ರಗಳಲ್ಲಿ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 12 ಪುರುಷ, 4 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.


ಮೊದಲ ದಿನವೇ ಅಭ್ಯರ್ಥಿಗಳಿಂದ ಉತ್ಸಾಹ ವ್ಯಕ್ತವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಎಂ.ಎಸ್.ಪ್ರವೀಣ್, ವರುಣ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಎಂ.ರವಿಕುಮಾರ್ ಕಣಕ್ಕೆ ಇಳಿದಿದ್ದಾರೆ.


ನರಸಿಂಹರಾಜ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುಂದರ್ ಪ್ರೇಮಕುಮಾರ್, ಆಮ್ ಆದ್ಮಿ ಪಾರ್ಟಿಯಿಂದ ಧರ್ಮಶ್ರೀ ಹಾಗೂ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಕೆ.ಎಚ್.ಅಬ್ದುಲ್ ಮಜೀದ್ ಉಮೇದುವಾರಿಕೆ ಸಲ್ಲಿಸಿದ್ದು, ಇದೇ ಕ್ಷೇತ್ರದಿಂದ ಅಯೂಬ್ ಖಾನ್ ಜಾತ್ಯತೀತ ಜನತಾದಳ ಮತ್ತು ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ.


ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಆರ್.ತುಂಗಾ ಶ್ರೀನಿವಾಸ್, ಕೃಷ್ಣರಾಜನಗರ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಪರಮೇಶ್ ನಾಮಪತ್ರ ಸಲ್ಲಿಸಿದ್ದಾರೆ.


ಹುಣಸೂರು ಕ್ಷೇತ್ರದಲ್ಲಿ ತಿಮ್ಮಭೋವಿ ಹಾಗೂ ಬೀರೇಶ್ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿದಿದ್ದಾರೆ.
ಕೃಷ್ಣರಾಜ ಕ್ಷೇತ್ರದಲ್ಲಿ ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಅಭ್ಯರ್ಥಿಯಾಗಿ ಪಿ.ಎಸ್.ಸಂಧ್ಯಾ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ಕೆ.ಎಸ್.ಸೋಮಸಂದರ್, ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಎಸ್.ಸುಮಲತಾ ನಾಮಪತ್ರ ಸಲ್ಲಿಸಿದ್ದಾರೆ.


ಹೆಗ್ಗಡದೇವನಕೋಟೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಎಸ್.ರೂಪಾ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಕೃಷ್ಣನಾಯಕ್ ಅವರಿಗೆ ಅಧಿಕೃತವಾಗಿ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ.


ತಿ.ನರಸೀಪುರ, ಚಾಮರಾಜ ಹಾಗೂ ನಂಜನಗೂಡು ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net