ಮೈಸೂರಿನಲ್ಲೇ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಇರಲಿ

mysore
Published on

ಮೈಸೂರು: ಮೈಸೂರಿನಲ್ಲೇ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಇರಬೇಕು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲಾಗುವುದು. ಜತೆಗೆ, ರಾಜ್ಯದ ಎಲ್ಲ ಸಂಸದರಿಗೆ ಪತ್ರ ಬರೆದು ಧ್ವನಿ ಎತ್ತಲು ಒತ್ತಾಯಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್)ನೊಂದಿಗೆ ಸೇರಿಸಿದ್ದು ತಪ್ಪಾಗಿದೆ. ಭಾಷಾ ಅಧ್ಯಯನ ಸಂಸ್ಥೆಯೊಂದಿಗೆ ಸಾಹಿತ್ಯ ಅಧ್ಯಯನ ಕೇಂದ್ರದ ಸೇರ್ಪಡೆಯಿಂದಾಗಿ ಶಾಸ್ತ್ರೀಯ ಅಧ್ಯಯನ ಕೇಂದ್ರಗಳು ಸೊರಗಿವೆ. ಹೀಗಾಗಿ, ಕನ್ನಡ ಸೇರಿದಂತೆ ತೆಲುಗು, ಮರಾಠಿ, ಪ್ರಾಕೃತ, ಸಂಸ್ಕೃತ ಸೇರಿದಂತೆ 10 ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರಗಳನ್ನು ಸಿಐಐಎಲ್‌ನಿಂದ ಬೇರ್ಪಡಿಸಲಾಗುವುದೆಂದು ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಸ್ವಾಯತ್ತತೆ ನೀಡಲು ಸಿದ್ಧ. ಇದು ಕೇಂದ್ರ ಸರ್ಕಾರದ ಅಧೀನದಲ್ಲೇ ಕಾರ್ಯನಿರ್ವಹಣೆ ಮಾಡಲಿದ್ದು, ರಾಜ್ಯ ಸರ್ಕಾರದ ಅಧೀನಕ್ಕೆ ಒಪ್ಪಿಸುವುದಿಲ್ಲ ಎಂದೂ ಸಚಿವರು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಕೇಂದ್ರವಾಗಿ ಪರಿವರ್ತನೆ ಮಾಡಲು ಬೆಂಗಳೂರಿನಲ್ಲಿ ಕೇಂದ್ರ ಇರಬೇಕು. ಇದು ನನ್ನ ಅಭಿಪ್ರಾಯವಷ್ಟೇ, ತೀರ್ಮಾನವಲ್ಲ. ಈ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದೂ ಸಚಿವ ಧರ್ಮೇಂದ್ರ ತಿಳಿಸಿದ್ದಾರೆ ಎಂದರು.

ಮೈಸೂರು ಶಾಸ್ತ್ರೀಯ ನಗರ. ಇಲ್ಲೇ ಇದು ಇರಲಿ. ಈಗಾಗಲೇ ನಾಲ್ಕೂವರೆ ಎಕರೆ ಜಾಗ ಮಂಜೂರಾಗಿದೆ. ಬೆಂಗಳೂರಿನಲ್ಲಿ ಈ ರೀತಿ ಪರಿಸ್ಥಿತಿ ಇಲ್ಲ. ಅಷ್ಟಕ್ಕೂ ಬೆಂಗಳೂರು ಇಲ್ಲಿಂದ ದೂರ ಇಲ್ಲ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲೇ ಈ ಕೇಂದ್ರ ಇರುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.

ಕೇಂದ್ರೀಯ ವಿದ್ಯಾಲಯಗಳಲ್ಲಿ ಒಂದು ಭಾಷೆಯಾಗಿ ಕನ್ನಡವನ್ನು ಕಲಿಸಬೇಕು ಎಂದು ಒತ್ತಾಯಿಸಿದ್ದು, ಇದರ ಫಲವಾಗಿ, ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆ ಕಲಿಕೆ ಕುರಿತು ಆದೇಶ ಹೊರಡಿಸಲಾಗುವುದು ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿದ್ದಾರೆ. ಇದು ಆಗದಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ಬಹುರಾಷ್ಟ್ರೀಯ ಕಂಪನಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ(ಎಚ್‌ಆರ್) ಕನ್ನಡ ಭಾಷಿಗರಿಲ್ಲ. ಇದು ಆಯಾ ಕಂಪನಿಯಲ್ಲಿ ಕೆಲಸ ಮಾಡುವ ಡಿ, ಸಿ ನೌಕರರೊಂದಿಗೆ ಸರಿಯಾಗಿ ಸಂವಹನವಾಗದೆ ಬಿಕ್ಕಟ್ಟುಗಳು ಉಂಟಾಗುತ್ತಿವೆ. ಈ ಸಮಸ್ಯೆ ಪರಿಹಾರಕ್ಕಾಗಿ ಎಚ್‌ಆರ್ ವಿಭಾಗದಲ್ಲಿ ಒಬ್ಬ ಕನ್ನಡಿಗರು ಇರಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗುವುದು. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಆದೇಶ ಹೊರಡಿಸಲಾಗುವುದು. ಜತೆಗೆ, ಪ್ರತ್ಯೇಕ ಕಾಯ್ದೆ ರೂಪಿಸಬೇಕಾಗಿದೆ ಎಂದು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡಿಗರಿಲ್ಲ. ಅನ್ಯ ಭಾಷೆಗಳ ನೌಕರರು ಕೆಲಸ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಬ್ಯಾಂಕಿಂಗ್ ವ್ಯವಹಾರ ಮಾಡಲು ತೊಡಕುಂಟಾಗುತ್ತಿದೆ. ಮಂಡ್ಯದಲ್ಲಿ ಗಲಾಟೆಯಾಗಿ ಹಲ್ಲೆಯಾಗಿ ಎಫ್‌ಐಆರ್ ಸಹ ಆಗಿದೆ. ಈ ರೀತಿ ಪ್ರಕರಣಗಳು ಮರುಕಳುಹಿಸುತ್ತಿವೆ. ಈ ಸಮಸ್ಯೆ ನಿವಾರಣೆಗಾಗಿ ಪ್ರತಿ ಶಾಖೆಯಲ್ಲಿ ಕನ್ನಡಿಗರು ಇರಬೇಕು. ಅನ್ಯಭಾಷಿಗರು 3 ತಿಂಗಳ ಒಳಗೆ ಕನ್ನಡ ಕಲಿಯಬೇಕು. ಇವರು ಏನು ಕಲಿತಿದ್ದಾರೆ ಎಂಬುದರ ಕುರಿತು ಪರೀಕ್ಷೆ, ಪರಿಶೀಲನೆ ಸಹ ಆಗಬೇಕು ಎಂದು ಹೇಳಿದರು.

ಪ್ರವಾಸಿ ತಾಣಗಳಲ್ಲಿ ಕನ್ನಡ ಕಾಣೆಯಾಗಿದೆ. ತ್ರಿಭಾಷಾ ಸೂತ್ರ ಬಳಕೆ ಮಾಡಿ. ಆದರೆ. ಕನ್ನಡದ ಅಸ್ತಿತ್ವವೂ ಇರಬೇಕು. ಇದಕ್ಕೆ ಮೊದಲ ಆದ್ಯತೆ ಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

100, 50 ವರ್ಷಗಳಿಂದ ಇರುವ ಸರ್ಕಾರಿ ಕನ್ನಡ ಶಾಲೆಗಳಿಗೆ ಭೂ ಒಡೆತನದ ಹಕ್ಕುಪತ್ರಗಳೇ ಇಲ್ಲ. ಇದರಿಂದ ದಾನಿಗಳ ಕುಟುಂಬದವರು ಕೊಟ್ಟ ಭೂಮಿಯನ್ನು ವಾಪಸ್ ಪಡೆದುಕೊಂಡು ಅನ್ಯರಿಗೆ ಮಾರಾಟ ಮಾಡಿದ್ದಾರೆ. ಇಲ್ಲವೇ, ಒತ್ತುವರಿಯಾಗಿವೆ. ಇದರಿಂದ ಕನ್ನಡ ಶಾಲೆಗಳಿಗೆ ಸಂಚಕಾರ ಬಂದಿದ್ದು, ಪ್ರತಿಯೊಂದು ಸರ್ಕಾರಿ ಶಾಲೆಗಳ ಹಕ್ಕುಪತ್ರ ಪರಿಶೀಲಿಸಬೇಕು. ತೊಡಕುಗಳಿದ್ದರೆ ಪರಿಹರಿಸಬೇಕು. ಅದಕ್ಕಾಗಿ ಶಿಕ್ಷಣ ಇಲಾಖೆ ವಿಶೇಷ ಅಭಿಯಾನ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕನ್ನಡ ಅನುಷ್ಠಾನದ ವಿಷಯ ಕೊನೆಯಲ್ಲಿ ಚರ್ಚೆ ಬರುತ್ತಿದೆ. ಇದಕ್ಕೆ ಪ್ರಾಮುಖ್ಯತೆ ಕೊಡುತ್ತಿಲ್ಲ. ಇದು ಸರಿಯಲ್ಲ. ಇದು ಪ್ರಮುಖ ವಿಷಯ. ಮೊದಲ ವಿಷಯವಾಗಿಯೇ ಚರ್ಚೆ ಆಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಅಧಿಕಾರಿಗಳು ಭೇಟಿ ಮಾಡಬೇಕು. ಕಸಾಪದವರು ತಮ್ಮ ಕಚೇರಿಗೆ ಬಂದಾಗ ಅಧಿಕಾರಿಗಳು ಅವರನ್ನು ಗೌರವದಿಂದ ಮಾತನಾಡಿಸಿ ಸಮಸ್ಯೆ ಆಲಿಸಬೇಕು ಎಂದು ಹೇಳಿದರು.

ಬೆಂಗಳೂರಿನಲ್ಲಿ 19 ಕಡೆ ಇರುವ ಕನ್ನಡ ಕಲಿಕಾ ಕೇಂದ್ರವನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲು ಮುಂದಾಗಿದ್ದು, ಅದಕ್ಕಾಗಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲು ಕೋರಲಾಗಿದೆ ಎಂದರು.

ಅನ್ಯಭಾಷಿಗರಿಗೆ ಕಲಿಸುವ ಕನ್ನಡ ಪಠ್ಯಕ್ರಮ 50 ವರ್ಷದಷ್ಟು ಹಳೆಯದು. ವರ್ತಮಾನದ ಕನ್ನಡ ಅರ್ಥವಾಗುವಂತಹ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದ್ದು, 3 ತಿಂಗಳಿನಲ್ಲಿ ಕನ್ನಡ ಕಲಿಯುವಂತಹ ಪಠ್ಯವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net