ಮೈಸೂರು: ಮಹಾರಾಜ ತಾಂತ್ರಿಕ ಶಿಕ್ಷಣ ಸಂಸ್ಥೆಯಿಂದ ಜೂ.22 ಮತ್ತು 23ರಂದು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ‘ಹ್ಯಾಕ್ ಮೈಸೂರು’ ಸ್ಪರ್ಧೆ ಆಯೋಜಿಸಲಾಗಿದೆ.
ಇದು 24 ಗಂಟೆಗಳ ಅವಧಿಯ ಸ್ಪರ್ಧೆಯಾಗಿದ್ದು, ಜೂ.22ರಂದು ಬೆಳಗ್ಗೆ 9ಕ್ಕೆ ಚಾಲನೆಗೊಂಡು ಮರು ದಿನ ಅದೇ ಸಮಯಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಎ.ಎಂ.ಅನಿರುದ್ಧ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಪರ್ಧೆಯಲ್ಲಿ ನಗರದ ಎನ್‌ಐಇ, ವಿವಿಸಿಇ, ಎಸ್‌ಜೆಸಿಇ, ಜಿಎಸ್‌ಎಸ್‌ಎಸ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಮಸ್ಯೆಯೊಂದನ್ನು ನೀಡಿ ಅದನ್ನು ಬಗೆಹರಿಸುವ ಸವಾಲು ನೀಡಲಾಗುವುದು. ಆ್ಯಪ್ ಅಭಿವೃದ್ಧಿ, ವೆಬ್ ಅಭಿವೃದ್ಧಿ, ಕ್ಲೌಡ್ ಕಂಪ್ಯೂಟಿಂಗ್, ಎಡ್ಜ್ ಕಂಪ್ಯೂಟಿಂಗ್, ಸೈಬರ್ ಸೆಕ್ಯೂರಿಟಿ ಮೊದಲಾದ ವಿಷಯಗಳನ್ನು ಸ್ಪರ್ಧೆ ಒಳಗೊಂಡಿದ್ದು, ವಿಜೇತ ತಂಡಕ್ಕೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಸ್ಪರ್ಧೆ ಆಯೋಜಕರಾದ ಡಾ.ಶರತ್‌ಕುಮಾರ್, ಎಸ್.ಸಿ.ಶಿವಸಾಗರ್, ಚಿರಾಗ್ ಇತರರಿದ್ದರು.