ಮೈಸೂರಿನಲ್ಲಿ ಹುತಾತ್ಮ ಪೊಲೀಸರ ಸ್ಮರಣೆ

mysore
Published on

ಮೈಸೂರು: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಹೆಗಡೆ ಹೇಳಿದರು.

ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಪೊಲೀಸ್ ಇಲಾಖೆ ವತಿಯಿಂದ ಸೋಮವಾರ ನಗರದ ಜಿಲ್ಲಾ ಪೊಲೀಸ್ ಕಚೇರಿ ಬಳಿ ಇರುವ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಪೊಲೀಸರೆಂದರೆ ಸಾರ್ವಜನಿಕರು ಅಲಕ್ಷೃ ತೋರಬಾರದು. ಅವರ ಸೇವೆಗೆ ಕೈ ಜೋಡಿಸಬೇಕು ಎಂದು

ಹೇಳಿದರು

ಪೊಲೀಸ್ ವ್ಯವಸ್ಥೆಗೆ ದೊಡ್ಡ ಚರಿತ್ರೆ ಇದೆ. ಜನರು ಸ್ವಯಂಪ್ರೇರಣೆಯಿಂದ ನಿಯಮ ಪಾಲನೆ ಮಾಡುವುದು ಕಡಿಮೆಯೇ. ಆದ್ದರಿಂದ ಪೊಲೀಸ್ ವ್ಯವಸ್ಥೆ ಅಗತ್ಯವಾಗಿದೆ. ಮೂಲ ಸೌಲಭ್ಯಗಳೊಂದಿಗೆ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿಯನ್ನು ನೀಡಿದಾಗಲೇ ಕಾನೂನು ಸುವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿ ಅನುಷ್ಠಾನಕ್ಕೆ ಬರಲು ಸಾಧ್ಯ ಎಂದು ಹೆಗಡೆ ಹೇಳಿದರು.

ಸಮಾಜದ ಆಸ್ತಿ, ನಾಗರಿಕರ ಜೀವರಕ್ಷಣೆ ಜವಾಬ್ದಾರಿ ಪೊಲೀಸರ ಮೇಲಿದೆ. ಕರ್ತವ್ಯದ ಸಮಯದಲ್ಲಿ ವೈಯಕ್ತಿಕ ಸಮಸ್ಯೆಗೆ ಗಮನ ಕೊಡಲಾಗದ ಪರಿಸ್ಥಿತಿ ಅವರಿಗೆ ಇರುತ್ತದೆ. ಸಮಾಜದ ಒಳಿತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ಪೊಲೀಸರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.

ಹುತಾತ್ಮರಿಗೆ ಗೌರವ ಸಲ್ಲಿಕೆ: ದಕ್ಷಿಣ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಕೆಪಿಎ ಉಪ ನಿರ್ದೇಶಕ ಚನ್ನಬಸವಣ್ಣ ಲಂಗೋಟಿ, ಡಿಸಿಪಿಗಳಾದ ಎಂ.ಮುತ್ತುರಾಜ್ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಎಸ್.ಜಾಹ್ನವಿ (ಅಪರಾಧ ಮತ್ತು ಸಂಚಾರ) ಸೇರಿದಂತೆ ಗಣ್ಯರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ಜತೆಗೆ, ಪೊಲೀಸ್ ವಾದ್ಯವೃಂದದವರು ರಾಷ್ಟ್ರಗೀತೆಯನ್ನು ನುಡಿಸುತ್ತಿದ್ದಂತೆ ಶಸ್ತ್ರಸಜ್ಜಿತ ಪೊಲೀಸರು ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net