ಮೈಸೂರಿನಲ್ಲಿ ಹಲಸಿನ ಹಬ್ಬ

ಮಾರಾಟಕ್ಕೆ-ಬರಲಿರುವ--ಹಲಸಿನ-ವೈವಿಧ್ಯ
Published on

ಮೈಸೂರು; ಹಲಸಿನ ಮಹತ್ವವನ್ನು ಗ್ರಾಹಕರಿಗೆ ಮತ್ತು ರೈತರಿಗೆ ತಿಳಿಸಿಕೊಡುವ ಉದ್ದೇಶದಿಂದ ಸಹಜ ಸಮೃದ್ಧ ಸಂಸ್ಥೆ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಸಹಯೋಗದಲ್ಲಿ ಹಲಸಿನ ಹಬ್ಬವನ್ನು ಆ.6 ಮತ್ತು 7ರಂದು ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಏರ್ಪಡಿಸಲಾಗಿದೆ. ಇಲ್ಲಿ ಹಲಸಿನ ವೈವಿಧ್ಯದ ಅನಾವರಣಗೊಳ್ಳಲಿದೆ.

ಹಸಿದು ಹಲಸು ತಿನ್ನು ಎಂಬ ಮಾತಿದೆ. ಬರಗಾಲ ಎದುರಿಸಿ ನಿಲ್ಲುವ ಹಲಸು ರಾಸಾಯನಿಕ ಔಷಧ, ಗೊಬ್ಬರ ಕೇಳದ ಕಲ್ಪವೃಕ್ಷ; ರೈತರ ಜೇಬು ತುಂಬುವ ಆಪ್ತಮಿತ್ರವೂ ಹೌದು. ಬಡವರ ಹಣ್ಣು ಎಂದೇ ಜನಪ್ರಿಯವಾಗಿರುವ ಹಲಸು ಔಷಧೀಯ ಗುಣಗಳಿಂದ ಮುನ್ನಲೆಗೆ ಬರುತ್ತಿದೆ. ಹಲಸಿನ ಕಾಯಿಯ ನಿರಂತರ ಸೇವನೆಯಿಂದ ಮಧುಮೇಹಿಗಳು ಇನ್ಷುಲಿನ್ ಬಳಕೆ ತಗ್ಗಿಸಬಹುದು. ಕ್ಯಾನ್ಸರ್, ಮಲಬದ್ಧತೆಯನ್ನು ದೂರವಿಡಬಹುದು. ಈ ಕುರಿತು ಅರಿವಿನೊಂದಿಗೆ ಮಾರುಕಟ್ಟೆ ಅವಕಾಶ ಕಲ್ಪಿಸಲು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಎರಡು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಇಲ್ಲಿಗೆ ಸಾರ್ವಜನಿಕರು ಭೇಟಿ ನೀಡಬಹುದು.

ಹಲಸಿನ ಮಹತ್ವ ಸಾರುವ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಐಸ್‌ಕ್ರೀಂ, ಚಿಪ್ಸ, ಚಾಕೋಲೇಟ್, ಹಪ್ಪಳ, ಹಲ್ವಾ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿಯ ಮಳಿಗೆಗಳು ಬರಲಿವೆ. ಹಲಸಿನ ಬೀಜದ ಪೇಯ ಕಾಫಿ ಕುಡಿಯಲು ಸಿಗಲಿದೆ. ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತ ಪುಸ್ತಕಗಳು ಸಿಗಲಿವೆ. ಹಲಸು ಹಚ್ಚುವ ಯಂತ್ರವೂ ಸಿಗಲಿದೆ.

30 ಜಾತಿಯ ಹಲಸಿನ ತಳಿಗಳ, ವಿಶೇಷವಾಗಿ ಕೆಂಪು ಹಲಸಿನ ತಳಿಯ ಗಿಡಗಳು ಮಾರಾಟಕ್ಕೆ ಬರಲಿವೆ. ರುದ್ರಾಕ್ಷಿ ಬಕ್ಕೆ, ಸಿದ್ದು ಹಲಸು, ಬೈರಸಂದ್ರ, ಸರ್ವಋತು, ಲಾಲ್‌ಬಾಗ್ ಮಧುರ, ಥಾಯ್‌ರೆಡ್, ವಿಯಟ್ನಾಂ ಸೂಪರ್ ಹರ್ಲಿ, ಗಮ್ ಲೆಸ್, ನಾಗಚಂದ್ರ, ಶಂಕರ ಮೊದಲಾದ ತಳಿಗಳು ಮಾರಾಟಕ್ಕೆ ಲಭ್ಯವಿವೆ.
ಉದ್ಘಾಟನೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಹಲಸಿನ ಹಬ್ಬ ಉದ್ಘಾಟಿಸುವರು. ನಟ ಮಂಡ್ಯ ರಮೇಶ್ ಕೆಂಪು ತಳಿ ಸಿದ್ದು ಹಲಸನ್ನು ಬಿಡುಗಡೆಗೊಳಿಸುವರು. ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷ ಉಲ್ಲಾಸ್ ಪಂಡಿತ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರುದ್ರೇಶ್, ಭಾರತೀಯ ತೋಟಗಾರಿಕಾ ಸಂಶೋಧನಾ ಕೆಂದ್ರದ ಹಿರಿಯ ವಿಜ್ಞಾನಿ ಡಾ.ಕರುಣಾಕರನ್ ಭಾಗವಹಿಸಲಿದ್ದಾರೆ.

ಆ.7ರಂದು ಮಧ್ಯಾಹ್ನ 12ಕ್ಕೆ ಹಲಸಿನ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಹಲಸಿನ ಹಣ್ಣು, ಕಾಯಿ, ಬೀಜ, ಎಲೆಯಿಂದ ಮಾಡುವ ಸಾಂಪ್ರದಾಯಿಕ ಅಥವಾ ಹೊಸ ಬಗೆಯ ಅಡುಗೆಗಳನ್ನು ತಯಾರಿಸಿ ಮೇಳಕ್ಕೆ ತರಬಹುದು. ಉತ್ತಮ ಅಡುಗೆಗಳಿಗೆ ಆಕರ್ಷಕ ಬಹುಮಾನ ಇರುತ್ತದೆ. ಪ್ರವೇಶ ಉಚಿತವಾಗಿದೆ. ಮಧ್ಯಾಹ್ನ 2ಕ್ಕೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ನಿಗದಿತ ಸಮಯದಲ್ಲಿ ಹೆಚ್ಚು ಹಲಸಿನ ಹಣ್ಣಿನ ತೊಳೆ ತಿಂದವರನ್ನು ವಿಜೇತರಾಗಿ ಘೋಷಿಸಿ, ಬಹುಮಾನ ನೀಡಲಾಗುತ್ತದೆ.

ಮೇಳದ ಆಕರ್ಷಣೆ:
ತುಮಕೂರಿನ ಚೇಳೂರಿನ ಕೆಂಪು ಮತ್ತು ಬಿಳಿ ಹಲಸು, ದೊಡ್ಡಬಳ್ಳಾಪುರದ ತೂಬಗೆರೆ ಹಲಸು ಮೇಳದ ಆಕರ್ಷಣೆ. ಕರ್ನಾಟಕದ ವಿವಿಧ ಭಾಗಗಳಿಂದ ಬರುವ 12 ರೈತ ಮತ್ತು ಮಹಿಳಾ ಗುಂಪುಗಳು ನಿರ್ಲಕ್ಷಿತ ಬೆಳೆ ಮತ್ತು ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತರಲಿದ್ದಾರೆ. ನುಗ್ಗೆ ಉಪ್ಪಿನ ಕಾಯಿ, ಬಗೆಬಗೆಯ ದಂಟು ಸೊಪ್ಪು, ಬಿದಿರು ಕಳಲೆ, ಗುಣಮಟ್ಟದ ಜವಾರಿ ಬೀಜ, ಸಿರಿಧಾನ್ಯ ಮತ್ತು ಕಾಳುಗಳನ್ನು ಮಾರಾಟಕ್ಕೆ ತರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net