

ಮೈಸೂರು: ಹನುಮ ಜಯಂತಿ ಅಂಗವಾಗಿ ಮೈಸೂರು ಹನುಮಂತೋತ್ಸವ ಸಮಿತಿಯಿಂದ ನಗರದಲ್ಲಿ ಬೃಹತ್ ಮೆರವಣಿಗೆ ಜರುಗಿತು.
ಸಮಿತಿಯಿಂದ ಆಯೋಜಿಸಿದ್ದ ನಾಲ್ಕನೇ ವರ್ಷದ ಮೆರವಣಿಗೆಯಲ್ಲಿ ನಂದಿಕಂಬ, ಕಂಸಾಳೆ, ಹಗಲು ವೇಷಧಾರಿಗಳು, ರಾಮ-ಲಕ್ಷ್ಮಣ- ಸೀತೆ, ಆಂಜನೇಯಸ್ವಾಮಿ ವೇಷಧಾರಿಗಳು ಗಮನ ಸೆಳೆದರು. ತಮಟೆ - ನಗಾರಿ, ವೀರಗಾಸೆ, ನಾದಸ್ವರ ತಂಡಗಳು ಮೆರವಣಿಗೆಗೆ ಜಾನಪದ ಕಲಾ ಮೆರಗು ನೀಡಿದವು.
ಶಾಸಕ ಎಸ್.ಎ.ರಾಮದಾಸ್ ಅವರು ಅರಮನೆ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಬಳಿ ಕುಂಬಳಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಸಂಸದ ಪ್ರತಾಪಸಿಂಹ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸೇರಿದಂತೆ ಹಲವು ಮುಖಂಡರು ಇದ್ದರು.
ರಾಮ- ಲಕ್ಷ್ಮಣ- ಸೀತೆ, ಆಂಜನೇಯಸ್ವಾಮಿ ಸೇರಿದಂತೆ ಇನ್ನಿತರ ಉತ್ಸವ ಮೂರ್ತಿಗಳನ್ನು ಹೊತ್ತ ವಾಹನಗಳು ನಗರದ ವಿವಿಧ ದೇವಾಲಯ, ಗರಡಿಗಳಿಗೆ ತೆರಳಿದಾಗ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೇಸರಿಮಯ ಶೋಭಾಯಾತ್ರೆ:
ಹನುಮಂತೋತ್ಸವದ ಶೋಭಾಯಾತ್ರೆ ಸಾಗುವ ಮಾರ್ಗ ಸಂಪೂರ್ಣ ಕೇಸರಿಮಯವಾಗಿತ್ತು. ಅಶೋಕ ರಸ್ತೆ, ಇರ್ವಿನ್ ರಸ್ತೆ, ಆಯುರ್ವೇದ ವೃತ್ತ, ನ್ಯೂ ಸಯ್ಯಜಿರಾವ್ ರಸ್ತೆ, ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆ, ಜೆಎಲ್ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ, ಗನ್‌ಹೌಸ್ ವೃತ್ತದ ಮಾರ್ಗವಾಗಿ ಸಾಗಿ ದೊಡ್ಡಕೆರೆ ಮೈದಾನದಲ್ಲಿ ಮೆರವಣಿಗೆ ಅಂತ್ಯವಾಯಿತು.
ಮೆರವಣಿಗೆ ಉದ್ದಕ್ಕೂ ಸಾವಿರಾರು ಕೇಸರಿ ರುಮಾಲು ಧಾರಿಗಳು ಹೆಜ್ಜೆ ಹಾಕಿ, ನೃತ್ಯ ಮಾಡಿದರು. ಹನುಮ ಜಯಂತಿಗೆ ಮೆರವಣಿಗೆ ಶುಭ ಕೋರುವ ್ಲೆಕ್ಸ್‌ಗಳೊಂದಿಗೆ ಬಂಟಿಂಗ್ಸ್, ಬ್ಯಾನರ್‌ಗಳು ರಾರಾಜಿಸಿದವು. ಅಬ್ಬರದ ಡಿಜೆ ಸದ್ದಿಗೆ ಯುವಕರು ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದರು. ಜೈ ಭಜರಂಗಿ, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು.
ಗಮನ ಸೆಳೆದ ಭಾವಚಿತ್ರ ಆರೋಹಣ
ಹನುಮ ಜಯಂತಿ ಮೆರವಣಿಗೆಯಲ್ಲಿ ಯುವಕರು ಶ್ರೀರಾಮ ಹಾಗೂ ಹನುಮ ಭಾವಚಿತ್ರಗಳನ್ನು ಆರೋಹಣ ಮಾಡಿದ್ದು ಗಮನ ಸೆಳೆಯಿತು.
ಸುಮಾರು 20 ಅಡಿ ಎತ್ತರದ ಏಣಿಯ ಮೇಲ್ಭಾಗದ ತುದಿಯಲ್ಲಿ ಚಕ್ರ ಕಟ್ಟಿ ಅದಕ್ಕೆ ಧ್ವಜಾರೋಹಣ ಮಾದರಿಯಲ್ಲಿ ಭಾವಚಿತ್ರಗಳನ್ನು ಏರಿಸಲಾಯಿತು. ಈ ವೇಳೆ ನೂರಾರು ಯುವಕರು ಜೈಕಾರದ ಘೋಷಣೆಗಳನ್ನು ಕೂಗಿದರು. ಇರ್ವಿನ್ ರಸ್ತೆಯ ಮಸೀದಿ ಮುಂಭಾಗ ಶ್ರೀರಾಮ ಹಾಗೂ ಹನುಮನ ಭಾವಚಿತ್ರಗಳನ್ನು ಆರೋಹಣ ಮಾಡಲಾಯಿತು. ಈ ವೇಳೆ ಡಿಜೆ ಸದ್ದಿಗೆ ಶಾಸಕ ಎಲ್.ನಾಗೇಂದ್ರ ಹೆಜ್ಜೆ ಹಾಕಿ ನೃತ್ಯ ಮಾಡಿದಾಗ ನೆರೆದಿದ್ದವರು ಸಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ಹುರಿದುಂಬಿಸಿದರು.
ಪೊಲೀಸ್ ಬಂದೋಬಸ್ತ್
ಮೆರವಣಿಗೆ ಸಾಗುವ ಮಾರ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಿದರು. ಮೊಬೈಲ್ ಕಮಾಂಡ್ ಯೂನಿಟ್ ವಾಹನದ ಮೂಲಕ ಶೋಭಾಯಾತ್ರೆಗೆ ಯಾವುದೇ ಅಡ್ಡಿಪಡಿಸದಂತೆ ಕ್ಯಾಮರಾ ಕಣ್ಗಾವಲು ಇಡಲಾಗಿತ್ತು. ನೂರಾರು ಪೊಲೀಸ್ ಅಕಾರಿಗಳು ಹಾಗೂ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಐದು ನಗರ ಸಶಸ ಮೀಸಲು ಪಡೆಯ ವಾಹನಗಳು ಮೆರವಣಿಗೆಯೊಂದಿಗೆ ಸಾಗಿದವು.
ಅನ್ಯಧರ್ಮಿಯರು ಹೆಚ್ಚಾಗಿರುವ ಕಡೆಗಳಲ್ಲಿ, ಪ್ರಾರ್ಥನಾ ಸ್ಥಳಗಳಿರುವ ಕಡೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.