

ಮೈಸೂರು: ಚುನಾವಣೆಯಲ್ಲಿ ಬಿಜೆಪಿ ಮತಕಳ್ಳತನ ಮಾಡಿ ಗೆದ್ದಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ‘ಸ್ಟಾಪ್ ವೋಟ್ ಚೂರಿ’ ಅಭಿಯಾನ ನಗರದಲ್ಲೂ ಮಂಗಳವಾರ ನಡೆಯಿತು.
ನಗರದ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್‌ಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಅಭಿಯಾನ ನಡೆಸಿದರು. ಇದರೊಂದಿಗೆ ಕಾಂಗ್ರೆಸ್ ವತಿಯಿಂದ ರಾಷ್ಟ್ರಾದ್ಯಂತ ಕೈಗೊಂಡಿರುವ ಅಭಿಯಾನಕ್ಕೆ ನಗರದಲ್ಲಿ ಚಾಲನೆ ಕೊಡಲಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, 2014, 2019 ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಮತಕಳ್ಳತನ ಮಾಡಿ ಬಿಜೆಪಿಯವರು ಗೆದ್ದಿದ್ದಾರೆ. ರಾಹುಲ್ ಗಾಂಧಿ ಸಾಕ್ಷಿ ಸಮೇತ ದೂರು ನೀಡಿದ್ದಾರೆ.
ಆದರೆ ಮುಖ್ಯ ಚುನಾವಣಾ ಆಯುಕ್ತರು ಅಫಿಡವಿಟ್ ನೀಡಿ ಎಂದು ತಾಕೀತು ಮಾಡುತ್ತಾರೆ. ಇವರು ಬಿಜೆಪಿ ಏಜೆಂಟ್ ಆಗಿ ವರ್ತಿಸುತ್ತಿದ್ದಾರೆ. ಪ್ರತಿಪಕ್ಷಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ತಕ್ಷಣವೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಮೈಸೂರಿನಲ್ಲೂ ಹಾಲಿ ಸಂಸದರೂ ಮತಗಳ್ಳತನದಿಂದಲೇ ಗೆದ್ದಿದ್ದಾರೆ. ಚಾಮರಾಜ, ಕೃಷ್ಣರಾಜ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲೂ ಮತಗಳ್ಳತನ ಆಗಿದೆ ಎಂದು ಆರೋಪಿಸಿದರು.
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸುಮಾರು 1.45 ಲಕ್ಷ ಮತಗಳು ಸುಮಾರು 292 ಬೂತ್‌ಗಳಲ್ಲಿ ಮತಗಳ್ಳತನ ಆಗಿದೆ. ಈ ಬೂತ್‌ಗಳಲ್ಲಿ ಕಾಂಗ್ರೆಸ್ 20 ಸಾವಿರ ಮತ ಪಡೆದಿದೆ. ಬಿಜೆಪಿ 1.20 ಲಕ್ಷ ಮತ ಪಡೆದಿದೆ. ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದರು. ಅಭಿಯಾನದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ಸೇರಿದಂತೆ ಇನ್ನಿತರರಿದ್ದರು.