ಮೈಸೂರಿನಲ್ಲಿ ಸೈಬರ್ ವಂಚನೆಗೆ 28 ಕೋಟಿ ರೂ.ಗೂ ಹೆಚ್ಚು ನಷ್ಟ

msyore
Published on

ಮೈಸೂರು: ಮೈಸೂರಿನಲ್ಲಿ ಸೈಬರ್ ವಂಚನೆ ಹೆಚ್ಚುತ್ತಿದ್ದು, ಪ್ರಸ್ತುತ ವರ್ಷ ವರದಿಯಾದ 128 ಪ್ರಕರಣಗಳಿಂದ 28 ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಕರು ದೋಚಿದ್ದಾರೆ ಎಂದು ಸೈಬರ್ ಕ್ರೈಂ ಎಸಿಪಿ ಸ್ನೇಹಾ ರಾಜ್ ಹೇಳಿದರು.

ಬಜಾಜ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾಕೌಟ್ ಡಿಜಿಟಲ್ ಫ್ರಾಡ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈವರೆಗೆ 3 ಕೋಟಿ ರೂ. ಮಾತ್ರ ವಶಪಡಿಸಿಕೊಳ್ಳಲಾಗಿದೆ. ವಂಚನಗೊಳಗಾದವರು ಇದರಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಎರಡು ಪ್ರಕರಣಗಳ ಬಗ್ಗೆ ಹಂಚಿಕೊಂಡ ಎಸಿಪಿ ಸ್ನೇಹಾ, ಒಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 3 ಕೋಟಿ ರೂ. ಕಳೆದುಕೊಂಡರು.

ಮತ್ತೊಂದು ಪ್ರಕರಣದಲ್ಲಿ ಹೂಡಿಕೆ ಹೆಸರಲ್ಲಿ ಮಹಿಳೆಯೊಬ್ಬರು 35 ಲಕ್ಷ ರೂ. ಕಳೆದುಕೊಂಡಿದ್ದಾರೆ. ಆದ್ದರಿಂದ ಸೈಬರ್ ವಂಚನೆ ಬಗ್ಗೆ ಸಾರ್ವಜನಿಕ ಜಾಗೃತಿ ಜತೆಗೆ ಪ್ರಕರಣ ನಡೆದ ತಕ್ಷಣವೇ ಪೊಲೀಸರ ಗಮನಕ್ಕೆ ತರುವುದು ಅತ್ಯಗತ್ಯ ಎಂದು ಸಲಹೆ ನೀಡಿದರು.

ಸೈಬರ್ ವಂಚನೆಯ ಬಗ್ಗೆ ನಾಗರಿಕರು ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡುವ ಮೂಲಕ ತಕ್ಷಣ ವರದಿ ಮಾಡಬೇಕು. ತ್ವರಿತ ಕ್ರಮವು ವಂಚನೆಯ ವಹಿವಾಟುಗಳನ್ನು ಸ್ಥಗಿತಗೊಳಿಸಲು ಮತ್ತು ಅಪರಾಧಿಗಳನ್ನು ಬೆನ್ನಟ್ಟಲು ಅನುಕೂಲವಾಗುತ್ತದೆ. ಹೆಚ್ಚುತ್ತಿರುವ ಸೈಬರ್ ವಂಚನೆಗೆ ಸಾರ್ವಜನಿಕ ಜಾಗೃತಿಯೊಂದೇ ಅಸ್ತ್ರ ಎಂದು ಹೇಳಿದರು.

ನಾಗರಿಕರು ಅನುಮಾನಾಸ್ಪದ ಇ-ಮೇಲ್‌ಗಳು, ಎಸ್‌ಎಂಎಸ್‌ಗಳು, ಲಿಂಕ್‌ಗಳು, ಕ್ಯೂಆರ್ ಕೋಡ್‌ಗಳನ್ನು ಕ್ಲಿಕ್ ಮಾಡುವುದು, ಅಪರಿಚಿತ ಮೂಲಗಳಿಂದ ಅಪ್ಲಿಕೇಷನ್ ಡೌನ್‌ಲೋಡ್ ಮಾಡುವುದನ್ನು ನಿಲ್ಲಿಸಬೇಕು. ದೇಶದ 100 ಪ್ರಮುಖ ನಗರಗಳಲ್ಲಿ ಡಿಜಿಟಲ್ ಜಾಗೃತಿ ಅಭಿಯಾನ ಕಾರ್ಯಕ್ರಮಗಳ ಹಮ್ಮಿಕೊಂಡಿದ್ದೇವೆ ಎಂದು ಬಿಎಫ್‌ಎಲ್‌ನ ವಕ್ತಾರ ವೆಂಕಟೇಶನ್ ತಿಳಿಸಿದರು.

ನಿವೃತ್ತ ಎಸಿಪಿ ಜಿ.ಎನ್.ಮೋಹನ್, ನಿವೃತ್ತ ಡಿವೈಎಸ್ಪಿ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net