

ಮೈಸೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಪುರಭವನದ ಎದುರಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಮೇಯರ್ ಶಿವಕುಮಾರ್ ಪುಷ್ಪಾರ್ಚನೆ ಮಾಡಿ ಮಾತನಾಡಿ, ಡಾ.ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳು ಹಾಗೂ ಸಮಾನತೆಗಾಗಿ ಮತ್ತು ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಸಮಾಜ ಸುಧಾರಕರು. ಅವರು ತೋರಿಸಿದ ಸಮಾನತೆಯ ಹಾದಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ತಿಳಿಸಿದರು.
ಶಾಸಕ ಎಸ್.ಎ.ರಾಮದಾಸ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ, ಉಪಮೇಯರ್ ಡಾ.ಜಿ.ರೂಪಾ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ ಇದ್ದರು.
ಅಸಮಾಧಾನ, , ಶಿಷ್ಟಾಚಾರ ಉಲ್ಲಂಘನೆ ಆರೋಪ
ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ವೇಳೆ ಕಾರ್ಯಕ್ರಮದ ವೇದಿಕೆ ಬಳಿ ಕುಳಿತ್ತಿದ್ದ ಭಂತೇಜಿ ಅವರನ್ನು ಆಹ್ವಾನಿಸದ ಕಾರಣ ಮಾಜಿ ಮೇಯರ್ ಪುರುಷೋತ್ತಮ್ ಅಸಮಾಧಾನ ವ್ಯಕ್ತಪಡಿಸಿ, ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕಿಡಿಕಾರಿದರು.
ಮಾಲಾರ್ಪಣೆ ಮಾಡಿ ಬರುತ್ತಿದ್ದಂತೆ ವೇದಿಕೆ ಏರಿದ ಪುರುಷೋತ್ತಮ್ ಮೈಕ್ ಹಿಡಿದುಕೊಂಡು ಕಾರ್ಯಕ್ರಮದ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಪಾಲಿಕೆ ಮಾಜಿ ಸದಸ್ಯ ವಾಸು ಧ್ವನಿಗೂಡಿಸಿದರು. ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಕೇವಲ ಫೋಟೋಗಾಗಿ ಕಾರ್ಯಕ್ರಮ ಮಾಡಬಾರದು. ಭಂತೇಜಿ ಅವರನ್ನು ಮಾಲಾರ್ಪಣೆ ಮಾಡಲು ಕರೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಗಮನಿಸಿದ ಜಿಲ್ಲಾಧಿಕಾರಿ, ಭಂತೇಜಿ ಅವರನ್ನು ಅಧಿಕಾರಿಗಳು ಗಮನಿಸಿಲ್ಲದಿರಬಹುದು. ಈಗ ಮತ್ತೊಮ್ಮೆ ಭಂತೇಜಿ ಅವರೊಂದಿಗೆ ಸೇರಿ ಮಾಲಾರ್ಪಣೆ ಮಾಡಬಹುದು. ಗೊಂದಲ ಸೃಷ್ಟಿಸುವುದು ಬೇಡ. ಕೂಗಾಡುವುದರಿಂದ ಏನು ಪ್ರಯೋಜನವಾಗಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರುಷೋತ್ತಮ್, ನಾವು 50 ವರ್ಷದಿಂದಲೂ ಈ ಕಾರ್ಯಕ್ರಮ ಮಾಡಿಕೊಂಡಿ ಬರುತ್ತಿದ್ದೇವೆ. ಅಧಿಕಾರಿಗಳಿಗೆ ಮಾಹಿತಿ ಇಲ್ಲದೇ ಇರುವುದಿಲ್ಲ. ಉದ್ದೇಶಪೂರ್ವಕವಾಗಿ ಅಪಮಾನ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ವರ್ತಿಸಿದ್ದಾರೆ ಎಂದು ದೂರಿದರು.
ಭಂತೇಜಿ ಅವರು ವೇದಿಕೆಗೆ ತೆರಳಿ ಪುರುಷೋತ್ತಮ್ ಅವರನ್ನು ಸಮಾಧಾನ ಮಾಡಿದರು. ಬಳಿಕ ವೇದಿಕೆಯಲ್ಲಿದ್ದ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಭಂತೇಜಿ ಅವರೊಂದಿಗೆ ಅಧಿಕಾರಿಗಳು ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದರು.