ಮೈಸೂರಿನಲ್ಲಿ ವೀರಶೈವ ಲಿಂಗಾಯತರಿಂದ ಪ್ರತಿಭಟನೆ

10
ಕೇಂದ್ರ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸಮುದಾಯವನ್ನು ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ಈ ಸಮುದಾಯದವರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
Published on

ಮೈಸೂರು: ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ವೀರಶೈವ ಲಿಂಗಾಯತ ಸಮುದಾಯವನ್ನು ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

ಗನ್‌ಹೌಸ್ ವೃತ್ತದ ಬಳಿಯ ಬಸವೇಶ್ವರ ಪ್ರತಿಮೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.

ವೀರಶೈವ-ಲಿಂಗಾಯತ 16 ಉಪಪಂಗಡಗಳು ಮಾತ್ರ ಕೇಂದ್ರದ ಒಬಿಸಿ ಪಟ್ಟಿಯಲ್ಲಿವೆ. ಸೌಲಭ್ಯವನ್ನೂ ಪಡೆಯುತ್ತಿವೆ. ಜನಸಂಖ್ಯೆ ದೃಷ್ಟಿಯಿಂದ ಇವು ಅತಿ ಸಣ್ಣ ಉಪ ಪಂಗಡಗಳಾಗಿದ್ದು, ಇನ್ನುಳಿದ ಬಹುತೇಕ ಉಪಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಯಿಂದ ಹೊರಗುಳಿದಿರುವುದರಿಂದ ಒಟ್ಟು ಸಮಾಜಕ್ಕೆ ಸೌಲಭ್ಯ ದೊರೆತಂತಾಗಿಲ್ಲ. ಹೀಗಾಗಿ ಇನ್ನುಳಿದಿರುವ ಉಪ ಪಂಗಡಗಳನ್ನೂ ಈ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಸೌಲಭ್ಯ ದೊರೆಯುವಂತೆ ಮಾಡಬೇಕು. ಇದರಿಂದ ಇಡೀ ಸಮುದಾಯದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಈ ಕುರಿತು ರಾಜ್ಯ ಸರ್ಕಾರ ಕ್ರಮ ವಹಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿಯೂ ಪ್ರತಿಭಟನಾಕಾರರು ಎಚ್ಚರಿಸಿದರು.

ನ್ಯಾ.ಚಿನ್ನಪ್ಪರೆಡ್ಡಿ ಆಯೋಗದ ವರದಿಯಲ್ಲಿ ಈಗಾಗಲೇ ಕೇಂದ್ರದ ಒಬಿಸಿ ಪಟ್ಟಿಯಲ್ಲಿರುವ ಸಮುದಾಯಗಳಿಗಿಂತಲೂ ವೀರಶೈವ-ಲಿಂಗಾಯತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವುದು ಸ್ಪಷ್ಟವಾಗಿದೆ. ಆದರೂ, ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮಾನ್ಯತೆ ನೀಡದಿರುವುದು ಸೋಜಿಗದ ಸಂಗತಿ ಎಂದು ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್‌ಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ಮೇಯರ್ ಸುನಂದಾ ಫಾಲನೇತ್ರ, ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ.ಮಲ್ಲೇಶ್, ಪ್ರದೀಪ್‌ಕುಮಾರ್, ಮಹದೇವಮ್ಮ, ಮುಖಂಡರಾದ ವರುಣ ಮಹೇಶ್, ಕಾನ್ಯ ಶಿವಮೂರ್ತಿ, ಡಾ.ವಸಂತಕುಮಾರ್, ತನುಜಾ ಮಹೇಶ್, ಜ್ಯೋತಿ ರೇಚಣ್ಣ, ಸಿ.ಕೆ.ನಾಗರಾಜು, ಚಂದ್ರಶೇಖರ್, ತಾಯೂರು ವಿಠಲಮೂರ್ತಿ, ರಾಜೇಂದ್ರಕುಮಾರ್, ಜಗನ್ನಾಥ್, ಆನಂದ, ಮಲ್ಲೇಶ್, ಗಂಗಾಧರಸ್ವಾಮಿ, ಸಿದ್ದಲಿಂಗಪ್ಪ, ಸಿದ್ದಪ್ಪ, ಸಂತೋಷ್‌ಕುಮಾರ್, ನಂಜುಂಡಸ್ವಾಮಿ, ಸಂಪತ್ತು, ಸೋಮಶೇಖರ್, ಮಲ್ಲಿಕಾರ್ಜುನಸ್ವಾಮಿ, ಸುಂದರೇಶ್, ಮನೋಹರಿ, ಮಮತಾ, ರೂಪಾ, ನೀಲಮ್ಮ, ಪ್ರೇಮಾ ಮುಂತಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net